ಬಹುರೂಪಿ ರಾಷ್ಟ್ರೀಯ ನಾಟಕೋತ್ಸವ
ಮೈಸೂರು: ನಿರಂತರ ರಂಗ ಚಟುವಟಿಕೆ ಮತ್ತು ರಂಗ ಶಿಕ್ಷಣದೊಂದಿಗೆ 25 ವಸಂತಗಳನ್ನು ಪೂರೈಸಿರುವ ಮೈಸೂರಿನ ರಂಗಾಯಣ ಸೂಫಿ- ಸಂತ- ಸಾಮರಸ್ಯ ಹೆಸರಿನಲ್ಲಿ ಹನ್ನೊಂದನೆ ಬಹುರೂಪಿ ರಾಷ್ಟ್ರೀಯ ನಾಟಕೋತ್ಸವ- 2014ವನ್ನು ಜ.14 ರಿಂದ 20 ರವರೆಗೆ ಆಯೋಜಿಸಿದೆ.
ರಂಗಾಯಣದ ವನರಂಗ ಮತ್ತು ಭೂಮಿಗೀತ ಸಭಾಂಗಣ ನಾಟಕಗಳಿಗೂ ಮತ್ತು ಶ್ರೀರಂಗ ಸಭಾಂಗಣ ಚಲನಚಿತ್ರೋತ್ಸವಕ್ಕೂ ಸೀಮಿತವಾಗಲಿದೆ. ಏಳು ದಿನಗಳ ಕಾಲ ಇಡೀ ರಂಗಾಯಣ ಸೂಫಿ ಸಂತರ ಜಪ ಮಾಡಲಿದೆ. ಜ.14ರ ಮಧ್ಯಾಹ್ನ 3.30ಕ್ಕೆ ವನರಂಗದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಬಹುರೂಪಿ ಉದ್ಘಾಟಿಸುವರು. ಜಿಲ್ಲಾ ಉಸ್ತುವಾರಿ ಸಚಿವ ವಿ.ಶ್ರೀನಿವಾಸಪ್ರಸಾದ್ ಅಧ್ಯಕ್ಷತೆ ವಹಿಸುವರು. ಶಾಸಕ ವಾಸು ಮುಖ್ಯ ಅತಿಥಿಯಾಗಿ ಆಗಮಿಸಲಿದ್ದು, ಚಲನಚಿತ್ರ ನಟ ಪ್ರಕಾಶ್ ರಾಜ್ ವಿಶೇಷ ಆಹ್ವಾನಿತರಾಗಿ ಭಾಗವಹಿಸುವರು. ಇದಕ್ಕೂ ಮುನ್ನ ಏಕತಾರಿ ತಂಡದವರು ತತ್ವಪದ ಗಾಯನ ನಡೆಸಿಕೊಡುವರು ಎಂದು ರಂಗಾಯಣ ನಿರ್ದೇಶಕ ಎಚ್. ಜನಾರ್ದನ್ ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಜ.20ರ ಸಂಜೆ 5ಕ್ಕೆ ನಡೆಯುವ ಕಾರ್ಯಕ್ರಮದಲ್ಲಿ ಹೆಸರಾಂತ ರಂಗನಟ ಎಂ.ಕೆ. ರೈನಾ ಸಮಾರೋಪ ಭಾಷಣ ಮಾಡುವರು. ರಂಗಾಯಣದ ಮಾಜಿ ನಿರ್ದೇಶಕ ಸಿ.ಬಸವಲಿಂಗಯ್ಯ, ಎ.ಜಿ. ಚಿದಂಬರರಾವ್ ಜಂಬೆ ಮತ್ತು ಡಾ.ಬಿ.ವಿ. ರಾಜಾರಾಂ ಅವರನ್ನು ಸನ್ಮಾನಿಸಲಾಗುವುದು. ಸಚಿವೆ ಉಮಾಶ್ರೀ ಪಾಲ್ಗೊಳ್ಳಲಿದ್ದಾರೆ.
ವಿಚಾರ ಸಂಕಿರಣ: ಜ.18ರ ಬೆಳಗ್ಗೆ 10ಕ್ಕೆ ರಾಷ್ಟ್ರಕವಿ ಜಿ.ಎಸ್. ಶಿವರುದ್ರಪ್ಪ ವಿಚಾರ ಮಂಟಪದಲ್ಲಿ ಸೂಫಿ-ಸಂತ- ಸಾಮರಸ್ಯ ಕುರಿತ ವಿಚಾರ ಸಂಕಿರಣವನ್ನು ಖ್ಯಾತ ಸರೋದ್ ವಾದಕ ಪಂಡಿತ್ ರಾಜೀವ್ ತಾರಾನಾಥ್ ಉದ್ಘಾಟಿಸುವರು. ಜ.18ರ ಬೆಳಗ್ಗೆ 11.15ಕ್ಕೆ ನಡೆಯುವ ಗೋಷ್ಠಿಯಲ್ಲಿ ಸೂಫಿ-ಸಂತ-ಪ್ರೇಮತತ್ತ್ವ ಕುರಿತು ಲೇಖಕ ಡಾ. ಜಗದೀಶ ಕೊಪ್ಪ ವಿಷಯ ಮಂಡಿಸುವರು. ಕುಲಪತಿ ಪ್ರೊ.ಹಿ.ಚಿ. ಬೋರಲಿಂಗಯ್ಯ ಅಧ್ಯಕ್ಷತೆ ವಹಿಸುವರು. ಮಧ್ಯಾಹ್ನ 2.30ಕ್ಕೆ ನಡೆಯುವ ಸೂಫಿ-ಸಂತ-ಪ್ರಭುತ್ವ ಕುರಿತ ಎರಡನೆ ಗೋಷ್ಠಿಯಲ್ಲಿ ಪತ್ರಕರ್ತ ದೇವು ಪತ್ತಾರ ವಿಷಯ ಮಂಡಿಸುವರು. ಕನ್ನಡ ಪುಸ್ತಕ ಪ್ರಾಧಿಕಾರದ ಮಾಜಿ ಅಧ್ಯಕ್ಷ ಪ್ರೊ.ಎಸ್.ಜಿ. ಸಿದ್ಧರಾಮಯ್ಯ ಅಧ್ಯಕ್ಷತೆ ವಹಿಸುವರು. ಸಂಜೆ 4ಕ್ಕೆ ನಡೆಯುವ ಮೂರನೆ ಗೋಷ್ಠಿಯಲ್ಲಿ ಸೂಫಿ-ಸಂತ-ಧರ್ಮ ಕುರಿತು ಸಾಹಿತಿ ಫಕೀರ್ ಮಹಮದ್ ಕಟ್ಪಾಡಿ ವಿಷಯ ಮಂಡಿಸುವರು. ಜ.19ರ ಬೆಳಗ್ಗೆ 10ಕ್ಕೆ ಸೂಫಿ- ಸಂತ- ಜಾತ್ಯಾತೀತತೆ ಕುರಿತು ಲೇಖಕ ಪ್ರೊ.ರಾಜಪ್ಪ ದಳವಾಯಿ ವಿಷಯ ಮಂಡಿಸುವರು. ಪತ್ರಕರ್ತೆ ಗೌರಿ ಲಂಕೇಶ್ ಅಧ್ಯಕ್ಷತೆ ವಹಿಸುವರು. ಮಧ್ಯಾಹ್ನ 12.15ಕ್ಕೆ ನಡೆಯುವ ಸೂಫಿ-ಸಂತ-ಸ್ಥಳೀಯತೆ ಕುರಿತ 5ನೇ ಗೋಷ್ಠಿಯಲ್ಲಿ ಪ್ರಾಧ್ಯಾಪಕ ಡಾ.ನಟರಾಜ್ ಬೂದಾಳ್ ವಿಷಯ ಮಂಡಿಸುವರು. 2.30ಕ್ಕೆ ನಡೆಯುವ ಅನುಭವ- ಅನುಭಾವ ಕುರಿತ ವಿಶೇಷ ಗೋಷ್ಠಿಯಲ್ಲಿ ನಾಟಕಕಾರ ಚಂದ್ರಕಾಂತ ಕುಸನೂರು ಅಧ್ಯಕ್ಷತೆ ವಹಿಸುವರು.
ಈ ಬಾರಿ ತಿಂಡಿ ತಿನಿಸುಗಳ ಮಳಿಗೆಗಿಂತ ಹೆಚ್ಚಾಗಿ ಸೂಫಿ-ಸಂತ-ಸಾಮರಸ್ಯ ಹೆಸರಿಗೆ ಪೂರಕವಾದ ಮಳಿಗೆಗಳು ಬರುತ್ತಿವೆ. ಬಹುರೂಪಿಗೆ ಸರ್ಕಾರ 35 ಲಕ್ಷ ನೀಡಿದೆ. ಅಷ್ಟರಲ್ಲಿಯೆ ಕಾರ್ಯಕ್ರಮ ರೂಪಿಸುತ್ತಿದ್ದೇವೆ ಎಂದು ರಂಗಾಯಣ ನಿರ್ದೇಶಕ ಜನಾರ್ದನ್ ಹೇಳಿದರು. ರಂಗಾಯಣ ಉಪ ನಿರ್ದೇಶಕ ಎಸ್.ಐ. ಭಾವಿಕಟ್ಟಿ, ಕಲಾವಿದರಾದ ಮೈಮ್ ರಮೇಶ್, ಶ್ರೀಕಂಠ ಗುಂಡಪ್ಪ ಇದ್ದರು.
ನಾಟಕ ವಿವರ
ಭೂಮಿಗೀತ (ಮಧ್ಯಾಹ್ನ 3.30 ಮತ್ತು ಸಂಜೆ 6.30) ಜ.14ರ ಮಧ್ಯಾಹ್ನ 3.30 ಮತ್ತು ಸಂಜೆ 6.30ಕ್ಕೆ ಕೇರಳದ ಅಭಿನಯ ಥಿಯೇಟರ್ ರಿಸರ್ಚ್ ಕೇಂದ್ರದವರು ಮ್ಯಾಕ್ಬೆತ್(ಮಲಯಾಳಂ) ನಾಟಕ ಪ್ರದರ್ಶಿಸುವರು. ಜ.15 ರಂದು ರಂಗಾಯಣ ತಂಡದಿಂದ ಮಯಾಸೀತಾ ಪ್ರಸಂಗ (ಕನ್ನಡ), ಜ.16 ರಂದು ಥಿಯೇಟರ್ ತತ್ಕಾಲ್ ತಂಡದಿಂದ ಶೇಕ್ಸಪಿಯರ್ ಮನೆಗೆ ಬಂದ (ಕನ್ನಡ), ಜ.17 ರಂದು ನಟರಂಗ ತಂಡದಿಂದ ನಮ್ಮೊಳಗೊಬ್ಬ ನಾಜೂಕಯ್ಯ (ಕನ್ನಡ), ಜ.18 ರಂದು ದೆಹಲಿಯ ಸರ್ಕಲ್ ಥಿಯೇಟರ್ ಕಂಪನಿಯಿಂದ ಸೆವೆಂಟೀಂತ್ ಜುಲೈ (ಹಿಂದಿ), ಜ.19 ರಂದು ನೇಪಾಳದ ಅರೋಹನ್ ಥಿಯೇಟರ್ ಗ್ರೂಪ್ನಿಂದ ಅಗ್ನಿಕೊ ಕಥ (ನೇಪಾಳಿ), ಜ.20ರಂದು ಪುಣೆ ಮಹಾನಗರ ಪಾಲಿಕೆ ಕರ್ಮಚಾರಿ ಸಂಘದ ಕಲಾವಿದರಿಂದ ಸತ್ಯಶೋಧಕ್(ಮರಾಠಿ) ನಾಟಕ ಪ್ರದರ್ಶನಗೊಳ್ಳಲಿದೆ.
ವನರಂಗ (ಸಂಜೆ 7) ಜ.15 ರಂದು ಕೂಯಿಷ್ಟ ಆರ್ಘ್ಯ ತಂಡದಿಂದ ಊರುಭಂಗಂ (ಬೆಂಗಾಲಿ), ಜ.16ಕ್ಕೆ ಪುಣೆಯ ಆಕಾಂಕ್ಷಾ ರಂಗಭೂಮಿ ತಂಡದಿಂದ ಹಿಜಡಾ (ಮರಾಠಿ), ಶ್ರೀ ವೆಂಕಟೇಶ್ವರ ನಾಟಕ ಮಂಡಳಿಯಿಂದ ಜೈ ಪಾತಾಳ ಭೈರವಿ (ತೆಲುಗು), ಜ.18ಕ್ಕೆ ಮಂಡ್ಯದ ಗೋತಮಿ ಫೌಂಡೇಷನ್ನಿಂದ ದೇವನಾಂಪ್ರಿಯ ಅಶೋಕ(ಕನ್ನಡ), ಜ.19ಕ್ಕೆ ಮುಂಬೈನ ರಂಗಶಿಲ ತಂಡದಿಂದ ದಿ ಗ್ರೇಟ್ ರಾಜಾ ಮಾಸ್ಟರ್ ಡ್ರಾಮಾ ಕಂಪನಿ (ಹಿಂದಿ).
ಶ್ರೀರಂಗ: ಮಂಗಳೂರಿನ ತರಿಕಿಟ ಕಲಾ ಕಮ್ಮಟ ತಂಡದವರು ಜ.14ರ ಸಂಜೆ 6.45ಕ್ಕೆ ಮೆಕ್ಕಾದಾರಿ ನಾಟಕ ಪ್ರದರ್ಶಿಸುವರು. ಬಹುರೂಪಿ ಚಲನಚಿತ್ರೋತ್ಸವವನ್ನು ಜ.14ರ ಬೆಳಗ್ಗೆ 11ಕ್ಕೆ ಚಲನಚಿತ್ರ ನಿರ್ದೇಶಕ ಕೇಸರಿ ಹರವೂ ಉದ್ಘಾಟಿಸುವರು. ಅಂದು ಮಧ್ಯಾಹ್ನ ರೆಬೆಲ್ ಮ್ಯೂಸಿಕ್ ಆಫ್ ಅಮೆರಿಕಾಸ್(ಸ್ಪ್ಯಾನಿಷ್), ಜ.15ರ ಬೆಳಗ್ಗೆ 10.30ಕ್ಕೆ ಹದ್ ಅನಹದ್(ಹಿಂದಿ), 12ಕ್ಕೆ ವ್ಹೆನ್ ದಿ ರೋಡ್ ಬೆಂಡ್ಸ್(ರುಮೇನಿಯಾ), ಮಧ್ಯಾಹ್ನ 3ಕ್ಕೆ ಸೂಫಿ ಪರಂಜಾಕಥಾ, ಜ.16ರ ಬೆಳಗ್ಗೆ 10.30ಕ್ಕೆ ಚಲೋ ಹಮಾರಾ ದೇಸ್(ಹಿಂದಿ), ಮಧ್ಯಾಹ್ನ 12ಕ್ಕೆ ಕ್ರಾಸ್ ದಿ ಬ್ರಿಡ್ಜ್, ದಿ ಸೌಂಡ್ ಆಫ್ ಇಸ್ತಾಂಬುಲ್ (ಟರ್ಕಿ), ಮಧ್ಯಾಹ್ನ 3ಕ್ಕೆ ಕ್ರೇಜಿ ಸ್ಟ್ರೇಂಜರ್(ರುಮೇನಿಯಾ) ಜ.17ರ ಬೆಳಗ್ಗೆ 10.30ಕ್ಕೆ ಕೋಯಿ ಸುನ್ತಾ ಹೈ (ಹಿಂದಿ), ಮಧ್ಯಾಹ್ನ 12ಕ್ಕೆ ಅಮಂದ್ಲಾ-ಎ ರೆವಲೂಷನ್ ಇನ್ ಹಾರ್ಮೊನಿ (ಇಂಗ್ಲಿಷ್), ಮಧ್ಯಾಹ್ನ 3ಕ್ಕೆ ಸಂಸಾರ(ಜರ್ಮನ್), ಜ.18ರ ಬೆಳಗ್ಗೆ 10.30ಕ್ಕೆ ಕಬೀರ್ ಖಡಾ ಬಜಾರ್ ಮೆ (ಹಿಂದಿ), ಮಧ್ಯಾಹ್ನ 12ಕ್ಕೆ ಬರ್ಲಿನ್ ಸಿಂಫೊನಿ ಆಫ್ ಎ ಗ್ರೇಟ್ ಸಿಟಿ (ಜರ್ಮನ್), ಮಧ್ಯಾಹ್ನ 3 ಗಾನಯೋಗಿ ಪಂಚಾಕ್ಷರಿ ಗವಾಯಿ (ಕನ್ನಡ), ಜ.19ರ ಬೆಳಗ್ಗೆ 10.30ಕ್ಕೆ ಬಿಶಾರ್ ಬ್ಲೂಸ್(ಇಂಗ್ಲಿಷ್), ಮಧ್ಯಾಹ್ನ 12ಕ್ಕೆ ರೆಬೆಲ್ ಮ್ಯೂಸಿಕ್- ದಿ ಬಾಬ್ ಮಾರ್ಲಿ ಸ್ಟೋರಿ(ಇಂಗ್ಲಿಷ್), ಮಧ್ಯಾಹ್ನ 3 ಸಂತ ಜ್ಞಾನೇಶ್ವರ(ಹಿಂದಿ, ಜ.20ರ ಬೆಳಗ್ಗೆ 10.30ಕ್ಕೆ ಜೈ ಭೀಮ್ ಕಾಮ್ರೆಡ್(ಇಂಗ್ಲಿಷ್), ಮಧ್ಯಾಹ್ನ 3ಕ್ಕೆ ಸಂತ ತುಕಾರಾಂ(ಕನ್ನಡ).
ಕಿಂದರಿಜೋಗಿ (ಸಂಜೆ 5), ಜ.14ರಂದು ಕಲರಿ ಪಯಟ್, ಡೊಳ್ಳು ಕುಣಿತ, ಸೂಫಿ ಗಾಯನ, ಜ.15ಕ್ಕೆ ಕಲರಿ ಪಯಟ್, ನಗಾರಿ, ತತ್ವಪದ, ಸೂಫಿ ಗಾಯನ, ಜ.16 ಪೂಜಾ ಕುಣಿತ, ಗೋಟಿಪುವಾ, ಜ.17 ವೃತ್ತಿರಂಗಭೂಮಿ ಗೀತೆಗಳು, ಗೋಟಿಪುವಾ, ಜ.18 ತತ್ವಪದ, ಜ.19 ಶಿವಭಕ್ತ ಶಬರ ಯಕ್ಷಗಾನ ಪ್ರದರ್ಶನ, ಜ. 20 ತತ್ವಪದ- ಜನಪದ ಗೀತೆಗಳು.