ಮೈಸೂರು ಮುಖ್ಯರಸ್ತೆ ವಿಸ್ತರಣೆಗೆ ಅನುದಾನ
ಟಿ. ನರಸೀಪುರ: ರಾಷ್ಟ್ರೀಯ ಹೆದ್ದಾರಿ 212ರ ಮೈಸೂರು ಮುಖ್ಯ ರಸ್ತೆಯನ್ನು ವಿಸ್ತರಣೆಗೊಳಿಸಿ, ಅಭಿವೃದ್ಧಿಪಡಿಸಲು ಯುಪಿಸಿ ಯೋಜನೆಯಲ್ಲಿ ಅನುದಾನ ನೀಡಲಾಗಿದೆ ಎಂದು ಸಂಸದ ಆರ್. ಧ್ರುವನಾರಾಯಣ ಹೇಳಿದರು.
ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಆಲ್ದೂರು ಗ್ರಾಮದ ಯುವಕರ ಆರೋಗ್ಯವನ್ನು ವಿಚಾರಿಸಿದ ನಂತರ ಮಾತನಾಡಿದ ಅವರು, ಹಿಂದಿನ ಪಿಪಿ ಯೋಜನೆಯನ್ನು ಯುಪಿಸಿ ಯೋಜನೆಯಾಗಿ ಪರಿವರ್ತಿಸಿ ಕೇಂದ್ರ ಸರ್ಕಾರದಿಂದ 500 ಕೋಟಿಗಳನ್ನು ಕೊಳ್ಳೇಗಾಲದಿಂದ ಕೇರಳ ಗಡಿವರೆಗಿನ ರಾಜ್ಯದ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಮಂಜೂರು ಮಾಡಲಾಗಿದೆ ಎಂದು ತಿಳಿಸಿದರು.
ಕೆಲವರಿಗೆ ರಾಷ್ಟ್ರೀಯ ಹೆದ್ದಾರಿ 212ರ ಅಭಿವೃದ್ಧಿ ಬಗ್ಗೆ ಮಾಹಿತಿ ಪಡೆದುಕೊಳ್ಳದೆ ವಿನಾಕಾರಣ ಟೀಕೆ ಮಾಡುತ್ತಿರುವುದು ಸರಿಯಲ್ಲ. ಅಭಿವೃದ್ಧಿಯಲ್ಲಿ ತಾವೆಂದೂ ರಾಜಿಯಾಗಲ್ಲ. ಸತತ ನಾಲ್ಕು ವರ್ಷಗಳ ಪರಿಶ್ರಮದಿಂದ 500 ಕೋಟಿ ಅನುದಾನ ಬಿಡುಗಡೆಯಾಗಿದೆ. ಈಗಿರುವ ರಸ್ತೆ 10 ಮೀ. ವಿಸ್ತರಣೆಯಾಗಲಿದೆ. ಗರ್ಗೇಶ್ವರಿ ಬಳಿ ನೂತನ ಹೊರವಲಯದ ರಸ್ತೆ ನಿರ್ಮಾಣವಾಗಲಿದೆ ಎಂದು ಮಾಹಿತಿ ನೀಡಿದರು.
ಮುಂದಿನ ಫೆಬ್ರವರಿಯಲ್ಲಿ ನಂಜನಗೂಡಿನಲ್ಲಿ ಕೇಂದ್ರ ಸಚಿವ, ಮುಖ್ಯಮಂತ್ರಿಗಳಿಂದ ಕಾಮಗಾರಿಗೆ ಚಾಲನೆ ನೀಡಲಾಗುವುದು. ಕೇಂದ್ರ ಸರ್ಕಾರ ರಾಜ್ಯಕ್ಕೆ ಇತ್ತೀಚೆಗಷ್ಟೇ ಬಿಡುಗಡೆ ಮಾಡಿರುವ ಒಂದು ಸಾವಿರ ಕೋಟಿ ಅನುದಾನದಲ್ಲಿ ನರಸೀಪುರ ವಿಧಾನಸಭಾ ಕ್ಷೇತ್ರಗಳ ರಸ್ತೆಗಳ ಅಭಿವೃದ್ಧಿಗೆ 48 ಕೋಟಿ ಅನುದಾನ ಲಭ್ಯವಾಗಿದೆ ಎಂದು ಹೇಳಿದರು.
ಆಲ್ದೂರಿಗೆ ಭೇಟಿ: ಚಾಮರಾಜನಗರ ತಾಲೂಕಿನ ಆಲ್ದೂರು ಗ್ರಾಮದಲ್ಲಿ ಕಳೆದ ಜ.1 ರಂದು ನಡೆದ ಘರ್ಷಣೆಯಲ್ಲಿ ದಲಿತ ಸಮುದಾಯದ ನಾಲ್ವರು ಯುವಕರು ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದ ಹಿನ್ನೆಲೆ ಸಂಸದ ಆರ್. ಧ್ರುವನಾರಾಯಣ ಭೇಟಿ ನೀಡಿ ಯುವಕರ ಆರೋಗ್ಯ ವಿಚಾರಿಸಿದರು. ವಿಧಾನ ಪರಿಷತ್ ಸದಸ್ಯ ಆರ್. ಧರ್ಮಸೇನ, ಚಾಮರಾಜನಗರ ಎಪಿಎಂಸಿ ಅಧ್ಯಕ್ಷ ಸಿ. ರಾಜಶೇಖರ್, ಗ್ರಾಪಂ ಮಾಜಿ ಅಧ್ಯಕ್ಷ ಬಿಎಂಕೆ ಹುಂಡಿ ಮಹದೇವು, ವರುಣ ಯುವ ಕಾಂಗ್ರೆಸ್ ಅಧ್ಯಕ್ಷ ಅಮ್ಜದ್ ಖಾನ್ ಇದ್ದರು.