ಶಾಲೆಯಲ್ಲಿ ಮಕ್ಕಳಿಂದ ಕೂಲಿ ಕೆಲಸ
ಕ.ಪ್ರ.ವಾರ್ತೆ , ಕೆ.ಆರ್. ನಗರ , ಜ. 9
ಪಟ್ಟಣದ ಹೊರವಲಯದಲ್ಲಿರುವ ಸಾಯಿ ನಳಂದ ವಿದ್ಯಾಸಂಸ್ಥೆಯಲ್ಲಿ ಅಕ್ಷರ ಕಲಿಯಲು ಬಂದ ಮಕ್ಕಳನ್ನು ಶಾಲಾ ಆವರಣದ ಕೆಲಸ ಮಾಡಲು ಬಳಸಿಕೊಂಡು ನಿಯಮಬಾಹಿರವಾಗಿ ನಡೆದುಕೊಳ್ಳುತ್ತಿದ್ದಾರೆ ಎಂದು ಪುರಸಭಾ ಸದಸ್ಯ ಉಮೇಶ್ ಆರೋಪಿಸಿದ್ದಾರೆ.
ಶಾಲಾ ಆವರಣದಲ್ಲಿ ಗುರುವಾರ ವಿದ್ಯಾರ್ಥಿಗಳು ಹಾರೆ, ಗುದ್ದಲಿ ಹಿಡಿದು ಕೆಲಸ ಮಾಡುತ್ತಿದ್ದುದನ್ನು ಕಂಡು ಆಡಳಿತ ಮಂಡಳಿ ಕಾರ್ಯದರ್ಶಿ ಮಂಜುನಾಥ್ ಅವರನ್ನು ಪ್ರಶ್ನಿಸಿದಾಗ, ನಾವು ಮಾಡಿಸುವುದೇ ಹೀಗೆ ಕೇಳಲು ನೀವು ಯಾರು ಎಂದು ಉಡಾಫೆಯ ಉತ್ತರ ನೀಡಿದರು. ಶಿಕ್ಷಣ ಸಂಸ್ಥೆಯ ಆವರಣವನ್ನು ಕಳೆದ 20 ದಿನದಿಂದ ಸಮತಟ್ಟು ಮಾಡುತ್ತಿದ್ದು, ಇಲ್ಲಿಗೆ ಕೆಲಸಕ್ಕೆ ಬರುವ ಕೂಲಿ ಕಾರ್ಮಿಕರ ಜೊತೆ ಮಕ್ಕಳನ್ನು ಕೆಲಸಕ್ಕೆ ಬಳಸಿಕೊಳ್ಳುತ್ತಿದ್ದರೂ ಪಟ್ಟಣಕ್ಕೆ ಕೂಗಳತೆಯ ದೂರದಲ್ಲಿರುವ ಸಂಸ್ಥೆಯ ಅಕ್ರಮವನ್ನು ಯಾರೂ ಪ್ರಶ್ನಿಸುತ್ತಿಲ್ಲ. ಈ ಸಂಬಂಧ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಲಿಖಿತವಾಗಿ ದೂರು ನೀಡಿದರೂ ಅವರು ಸಹ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸದೇ ಸಂಸ್ಥೆಯವರಿಗೆ ನೋಟಿಸ್ ನೀಡುವುದಾಗಿ ಹಾರಿಕೆಯ ಉತ್ತರ ನೀಡಿದರು ಎಂದವರು ಹೇಳಿದರು..
ನಿತ್ಯ ಶಾಲೆಗೆ ಬರುವ ವಿದ್ಯಾರ್ಥಿಗಳಿಂದ ಕೆಲಸ ಮಾಡಿಸುತ್ತಿರುವುದರಿಂದ ಸಂಸ್ಥೆಗೆ ಅನುಕೂಲವಾಗುತ್ತಿದೆ. ಆದರೆ ಮಕ್ಕಳನ್ನು ಬಳಸಿಕೊಂಡು ಅವರ ಸ್ವಾತಂತ್ರ್ಯ ಹರಣ ಮಾಡುತ್ತಿದ್ದು, ಈ ಬಗ್ಗೆ ಜಿಲ್ಲಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.
ಕೂಡಲೇ ಸಂಬಂಧಿತ ಇಲಾಖೆಯ ಮೇಲಾಧಿಕಾರಿಗಳು ಮತ್ತು ತಾಲೂಕು ಆಡಳಿತ ಸಾಯಿ ನಳಂದ ಶಿಕ್ಷಣ ಸಂಸ್ಥೆಯ ವಿರುದ್ಧ ಕಾನೂನು ಕ್ರಮ ಕೈಗೊಳ್ಳದಿದ್ದಲ್ಲಿ ಪೋಷಕರು ಮತ್ತು ಸಾರ್ವಜನಿಕರೊಡಗೂಡಿ ಹೋರಾಟ ನಡೆಸಬೇಕಾಗುತ್ತದೆ ಎಂದು ಅವರು ಎಚ್ಚರಿಸಿದ್ದಾರೆ.
ಬಿಇಒ ಭೇಟಿ, ನೋಟಿಸ್ ಜಾರಿ: ಸಾಯಿ ನಳಂದ ಶಾಲೆಯಲ್ಲಿ ಮಕ್ಕಳಿಂದ ಭೂಮಿ ಸಮತಟ್ಟು ಕೆಲಸ ಮಾಡಿಸಲಾಗುತ್ತಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಬಿಇಒ ಎಸ್.ಟಿ. ಜವರೇಗೌಡ ಗುರುವಾರ ಸಂಜೆ ಶಾಲೆಗೆ ಭೇಟಿ ನೀಡಿ, ಪರಿಶೀಲಿಸಿದರು. ಅಲ್ಲದೇ ಕಾರಣ ಕೇಳಿ ಆಡಳಿತ ಮಂಡಳಿಗೆ ನೋಟಿಸ್ ಜಾರಿ ಮಾಡಿದ್ದಾರೆ.