ಶ್ರೇಷ್ಠ ದರ್ಜೆ ಔಷಧ ಸಂಶೋಧಿಸಿ
ಕ.ಪ್ರ.ವಾರ್ತೆ , ಮೈಸೂರು , ಜ. 9
ಪ್ರಸ್ತುತ ಶೇಷ್ಠದರ್ಜೆ ರೋಗ ನಿರೋಧಕ ಔಷಧ ಸಂಶೋಧನೆಯಾಗಲಿ ಎಂದು ಜಪಾನ್ ಓಕ್ಕಿಡೋ ವಿವಿ ಪ್ರಾಧ್ಯಾಪಕ ಶಿನ್ ಇಚಿರೊ ನಿಶಿಮುರಾ ಹೇಳಿದರು.
ಮೈಸೂರು ವಿವಿಯು ಯುಪಿಇ ಇನ್‌ಸ್ಟಿಟ್ಯೂಟ್ ಆಫ್ ಎಕ್ಸಲೆನ್ಸ್ ಹಾಗೂ ಪಿಯುಆರ್‌ಐ ಸಂಸ್ಥೆಗಳ ಸಹಯೋಗದಲ್ಲಿ ಮಾನಸಗಂಗೋತ್ರಿಯ ರಾಣಿ ಬಹದ್ದೂರ್ ಸಭಾಂಗಣದಲ್ಲಿ ಏರ್ಪಡಿಸಿರುವ ರಾಸಾಯನ ಜೀವಶಾಸ್ತ್ರ - ಔಷಧ ಶೋಧನೆ ಎಂಬ ವಿಷಯ ಕುರಿತ ಎರಡು ದಿನಗಳ ಅಂತಾರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಆಶಯ ನುಡಿಗಳಾಡಿದರು.
ಹೊಸ ಹೊಸ ಸಾಂಕ್ರಾಮಿಕ ರೋಗಗಳು ಇಂದು ಸಾಮಾಜಿಕ ಸಮಸ್ಯೆಯಾಗಿದ್ದು, ವೈದ್ಯಕೀಯ ಹಾಗೂ ವಿಜ್ಞಾನ ರಂಗಕ್ಕೆ ಬಹುದೊಡ್ಡ ಸವಾಲಾಗಿದೆ. ಜತೆಗೆ ತಾಯಿ ಮತ್ತು ಮಕ್ಕಳ ಆರೋಗ್ಯ ಮತ್ತು ಪೌಷ್ಟಿಕತೆಯ ಸಮಸ್ಯೆಯೂ ಇಡೀ ವಿಶ್ವವನ್ನು ಕಾಡುತ್ತಿದೆ. ಇಂತಹ ಸಂದರ್ಭದಲ್ಲಿ ವಿಜ್ಞಾನಿಗಳು ನೂತನ ಸಂಶೋಧನೆಯಿಂದ ಹೊಸದಾದ ಶ್ರೇಷ್ಠದರ್ಜೆಯ ರೋಗ ನಿರೋಧಕ ಔಷಧಗಳ ಶೋಧನೆ ನಡೆಸುವ ಅಗತ್ಯವಿದೆ ಎಂದರು.
ಕಾರ್ಯಕ್ರಮವನ್ನು ಯುಕೆಯ ಕೆಂಬ್ರಿಡ್ಜ್ ವಿವಿಯ ಜೀವರಾಸಾಯನಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಟಾಮ್ ಬ್ಲುಂಡೆಲ್ ಉದ್ಘಾಟಿಸಿದರು. ಯುಎಸ್‌ಎ ರಾಷ್ಟ್ರೀಯ ಮಕ್ಕಳ ಆಸ್ಪತ್ರೆಯ ಕ್ಯಾನ್ಸರ್ ಸೆಂಟರ್‌ನ ನಿರ್ದೇಶಕ ಪ್ರೊ.ಪೀಟರ್ ಜೆ ಹೌಗ್ಟನ್ ಮುಖ್ಯ ಅತಿಥಿಯಾಗಿದ್ದರು.
ಮೈಸೂರು ವಿವಿ ಕುಲಪತಿ ಪ್ರೊ.ಕೆ.ಎಸ್. ರಂಗಪ್ಪ ಅಧ್ಯಕ್ಷತೆ ವಹಿಸಿದ್ದರು. ಕುಲಸಚಿವ ಪ್ರೊ.ಸಿ. ಬಸವರಾಜು, ಕಾರ್ಯಕ್ರಮದ ಸಂಘಟನಾ ಕಾರ್ಯದರ್ಶಿ ಪ್ರೊ.ಬಿ.ಎಸ್ ವಿಶ್ವನಾಥ್ ಇದ್ದರು. ಮೈಸೂರು ವಿವಿ ಪ್ರಸಾರಾಂಗದ ನಿರ್ದೇಶಕ ಪ್ರೊ.ಸಿ. ನಾಗಣ್ಣ ನಿರೂಪಿಸಿದರು.
ವಿದೇಶದ 16 ಮಂದಿ ತಜ್ಞರು ಸೇರಿದಂತೆ ಭಾರತದ ವಿವಿಧ ಭಾಗಗಳಿಂದ ವಿಜ್ಞಾನಿಗಳು ಹಾಗೂ ಸಂಶೋಧಕರು ಭಾಗವಹಿಸಿದ್ದಾರೆ.