ಅಂಗನವಾಡಿ ಕಾರ್ಯಕರ್ತರ ಜೈಲ್ ಭರೋ
ಕ.ಪ್ರ.ವಾರ್ತೆ , ಮೈಸೂರು , ಜ. 10
ಅಂಗನವಾಡಿ ಖಾಸಗೀಕರಣ ವಿರೋಧಿಸಿ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರು ನಗರದಲ್ಲಿ ಜೈಲ್ ಭರೋ ಹಾಗೂ ಪ್ರತಿಭಟನಾ ಮೆರವಣಿಗೆಯನ್ನು ಎರಡು ಕಡೆ ಶುಕ್ರವಾರ ಹಮ್ಮಿಕೊಂಡಿದ್ದರು.
ಕರ್ನಾಟಕ ರಾಜ್ಯ ಅಂಗನವಾಡಿ ಕಾರ್ಯಕರ್ತೆಯರ ಮತ್ತು ಸಹಾಯಕಿಯರ ಫೆಡರೇಷನ್ನವರು (ಎಐಟಿಯುಸಿ) ಗಾಂಧಿ ಚೌಕದಿಂದ ನೂರಾರು ಮಂದಿಯೊಂದಿಗೆ ಮೆರವಣಿಗೆ ಹೊರಟು ಅಶೋಕ ರಸ್ತೆ ನೆಹರು ವೃತ್ತದಲ್ಲಿ ಪ್ರಧಾನ ಅಂಚೆ ಕಚೇರಿಗೆ ಮುತ್ತಿಗೆ ಹಾಕಿದರು.
ಈ ವೇಳೆ 300ಕ್ಕೂ ಹೆಚ್ಚಿನ ಅಂಗನವಾಡಿ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿ, ಕರ್ನಾಟಕ ವಸ್ತುಪ್ರದರ್ಶನ ಪ್ರಾಧಿಕಾರ ಆವರಣಕ್ಕೆ ಕರೆದುಕೊಂಡು ಹೋಗಿ ನಂತರ ಬಿಡುಗಡೆಗೊಳಿಸಿದರು.
ಫೆಡರೇಷನ್ನ ರಾಜ್ಯ ಕಾರ್ಯದರ್ಶಿ ಡಿ. ಜಗನ್ನಾಥ, ನಗರಾಧ್ಯಕ್ಷೆ ಭ್ರಮರಾಂಭಿಕ, ಜಿಲ್ಲಾಧ್ಯಕ್ಷೆ ಎ. ಮಹದೇವಮ್ಮ, ಮುಖಂಡರಾದ ವೈ.ಮಹದೇವಮ್ಮ, ಪ್ರೇಮ, ಪುಟ್ಟಮ್ಮ, ಮಂಗಳಮ್ಮ, ನೂರ್ ಜಾನ್ ಬೇಗಂ, ಲಕ್ಷ್ಮಿ ಇದ್ದರು.
ದೇವರಾಜ ಉಪ ವಿಭಾಗದ ಎಸಿಪಿ ಎಂ.ಪಿ. ಜಯಮಾರುತಿ ಮತ್ತು ಸಿಬ್ಬಂದಿ ಭದ್ರತೆ ಕೈಗೊಂಡಿದ್ದರು.
ಜಿಲ್ಲಾಧಿಕಾರಿ ಕಚೇರಿ ಬಳಿ: ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘದವರು (ಸಿಐಟಿಯು) ತಮ್ಮ ವಿವಿಧ ಬೇಡಿಕೆಗಳನ್ನು ಈಡೇರಿಸಲು ಆಗ್ರಹಿಸಿ ಗನ್ಹೌಸ್ ವೃತ್ತದಿಂದ ಮೆರವಣಿಗೆ ಹೊರಟು ಜಿಲ್ಲಾಧಿಕಾರಿ ಕಚೇರಿಗೆ ತಲುಪಿದರು.
ನೂರಾರು ಮಹಿಳೆಯರು ಒಟ್ಟಿಗೆ ಜಿಲ್ಲಾಧಿಕಾರಿ ಕಚೇರಿಯತ್ತ ನುಗ್ಗಲು ಯತ್ನಿಸಿದಾಗ ಪೊಲೀಸರು ಬ್ಯಾರಿಕೇಡ್ ಹಾಕಿ ತಡೆದರು. ಪೊಲೀಸರ ತಡೆಗೋಡೆಯನ್ನು ಮೀರಿ ಒಳನುಗ್ಗಲು ಯತ್ನಿಸಿದ 18 ಮಂದಿಯನ್ನು ಪೊಲೀಸರು ಬಂಧಿಸಿ ಕರೆದುಕೊಂಡು ಹೋದರು.
ಬಂಧಿತರನ್ನು ಬಿಡುಗಡೆಗೊಳಿಸುವವರೆಗೂ ಪ್ರತಿಭಟನೆ ಹಿಂಪಡೆಯುವುದಿಲ್ಲ ಎಂದು ಪ್ರತಿಭಟನಾಕಾರರು ಪಟ್ಟು ಹಿಡಿದರು. ಈ ವೇಳೆ ಮನವಿ ಸ್ವೀಕರಿಸಲು ಆಗಮಿಸಿದ ಜಿಲ್ಲಾಧಿಕಾರಿ ಸಿ.ಶಿಖಾ ಅವರಿಗೆ ಪ್ರತಿಭಟನಾಕಾರರು ಮನವಿ ನೀಡಲು ನಿರಾಕರಿಸಿದರು. ಬಂಧಿತರನ್ನು ಬಿಡುಗಡೆಗೊಳಿಸಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನಾಕಾರರ ಒತ್ತಡಕ್ಕೆ ಮಣಿದ ಜಿಲ್ಲಾಧಿಕಾರಿ ಸಿ.ಶಿಖಾ ಅವರನ್ನು ಬಂಧಿತರನ್ನು ವಾಪಸ್ ಕರೆ ತರುವಂತೆ ಪೊಲೀಸರಿಗೆ ಸೂಚಿಸಿ ತಮ್ಮ ಕಚೇರಿಗೆ ತೆರಳಿದರು. ಇದಾದ ಕೆಲವು ಹೊತ್ತಿನ ಬಳಿಕ ಬಂಧಿತರಾಗಿದ್ದ ಸಂಘದ ಅಧ್ಯಕ್ಷೆ ಕೆ.ಸಿ. ಕಾವೇರಮ್ಮ, ಕಾರ್ಯದರ್ಶಿ ಎಚ್.ಎಸ್. ಸುನಂದಾ, ಖಜಾಂಚಿ ಶಕುಂತಲಾ, ಮುಖಂಡರಾದ ಮಂಗಳಗೌರಮ್ಮ, ಪುಷ್ಪಲತಾ, ಹಸೀನಾ ಬಾನು, ತೇಲಜಾ ಮಣಿ, ರಾಜೇಶ್ವರಿ, ರಾಜುಮಣಿ, ಜಲಜಾಕ್ಷಿ ಸೇರಿದಂತೆ 18 ಮಂದಿಯನ್ನು ಪೊಲೀಸರು ವಾಪಸ್ ಕರೆತಂದು ಬಿಡುಗಡೆಗೊಳಿಸಿದರು.
ನಂತರ ಕೆಲವು ಹೊತ್ತು ಪ್ರತಿಭಟಿಸಿದ ಅಂಗನವಾಡಿ ನೌಕರರು, ಜಿಲ್ಲಾಧಿಕಾರಿ ಕಚೇರಿ ಸಹಾಯಕರಿಗೆ ಮನವಿ ಸಲ್ಲಿಸಿ ಪ್ರತಿಭಟನೆ ಹಿಂಪಡೆದರು. ಸಿಐಟಿಯು ಜಿಲ್ಲಾಧ್ಯಕ್ಷ ಎನ್.ಕೆ. ಬಾಲಾಜಿರಾವ್, ಮುಖಂಡರಾಜ ಜಯರಾಮು ಇದ್ದರು.
ಕೆ.ಆರ್. ಉಪ ವಿಭಾಗದ ಎಸಿಪಿ ಬಿ.ಟಿ. ಕವಿತಾ ಮತ್ತು ಸಿಬ್ಬಂದಿ ಬಂದೋಬಸ್ತ್ ಮಾಡಿದ್ದರು.
ಅಂಗನವಾಡಿಯವರ ಬೇಡಿಕೆಗಳಿವು...
- ಐಸಿಡಿಎಸ್ (ಸಮಗ್ರ ಶಿಶು ಅಭಿವೃದ್ಧಿ ಕಲ್ಯಾಣ ಯೋಜನೆ) ಮಿಷನ್ ಪ್ರಕ್ರಿಯೆ ಕೈಬಿಡಬೇಕು. ಖಾಸಗೀಕರಣ ಮಾಡಬಾರದು, ಐಸಿಡಿಎಸ್ ಕ್ರಮಬದ್ಧಗೊಳಿಸಿ ಇಲಾಖೆಯನ್ನಾಗಿ ಉಳಿಸಬೇಕು.
- ಅಂಗನವಾಡಿ ಕಾರ್ಯಕರ್ತೆಯರಿಗೆ 15,000, ಸಹಾಯಕರಿಗೆ 10,000 ಕನಿಷ್ಠ ಗೌರವಧನ ನೀಡಬೇಕು.
- ರಾಜ್ಯದ 12 ಜಿಲ್ಲೆಗಳಲ್ಲಿ ಅಪಾಯಕಾರಿ ಶಿಫಾರಸುಗಳನ್ನು ವಾಪಸ್ ಪಡೆಯಬೇಕು. ಅಂಗನವಾಡಿ ನೌಕರರ ಕೆಲಸ ಕಾಯಂಗೊಳಿಸಬೇಕು.
- ಈಗಿರವ ಅಂಗನವಾಡಿ ಕಾರ್ಯಕರ್ತೆಯರ ಕೆಲಸವನ್ನು ಬೇರೆಯವರಿಗೆ ವರ್ಗಾಯಿಸಬಾರದು.
- ಕಾರ್ಯಕರ್ತೆ ಮತ್ತು ಮೇಲ್ವಿಚಾರಕಿಯರ ಮಧ್ಯೆ ಲಿಂಕ್ ವರ್ಕರ್ ಹೆಸರಿನಲ್ಲಿ ಹೊರಗುತ್ತಿಗೆ ನೀಡುವುದನ್ನು ನಿಲ್ಲಿಸಬೇಕು.
- ಇಎಸ್ಐ, ಪಿಎಫ್ ಸೌಲಭ್ಯ, ಉತ್ತಮ ಪಿಂಚಣಿ ಯೋಜನೆ ಜಾರಿಗೊಳಿಸಬೇಕು.
- ಅಡುಗೆ ಮಾಡಲು ಗ್ಯಾಸ್ ಮತ್ತು ಸ್ಟೌವ್ ಒದಗಿಸಬೇಕು.
- ಐಸಿಡಿಎಸ್ ಸಂಬಂಧಿಸಿದ ಕೆಲಸಗಳನ್ನು ಬಿಟ್ಟು ಬೇರೆ ಇಲಾಖೆಯ ಕೆಲಸಗಳನ್ನು ವಹಿಸಬಾರದು.
- ಮಿನಿ ಅಂಗನವಾಡಿ ಕಾರ್ಯಕರ್ತೆಯರಿಗೆ ಸಮಾನ ವೇತನ ನೀಡಬೇಕು, ಸಹಾಯಕಿಯರನ್ನು ನೇಮಿಸಬೇಕು.
- ಅಂಗನವಾಡಿ ನೌಕರರಿಗೆ 6 ತಿಂಗಳ ಹೆರಿಗೆ ರಜೆ ಮತ್ತು ಎಲ್ಲ ರೀತಿಯ ಭತ್ಯೆ ನೀಡಬೇಕು.