ಅರ್ಹರಿಗೆ ಮಾತ್ರ ಸರ್ಕಾರಿ ಸವಲತ್ತು ವಿತರಿಸಿ: ಸಾ.ರಾ. ಮಹೇಶ್ ಸಲಹೆ
ಕೆ.ಆರ್. ನಗರ: ಸರ್ಕಾರದ ಸವಲತ್ತು ಪಡೆಯಲು ಅರ್ಜಿ ಸಲ್ಲಿಸುವಾಗ ಅರ್ಹರು ಮಾತ್ರ ಅರ್ಜಿ ಸಲ್ಲಿಸಬೇಕು, ಹಾಗೆಯೇ ಆಯ್ಕೆ ಮಾಡುವಾಗ ಅಧಿಕಾರಿಗಳು ಎಚ್ಚರಿಕೆಯಿಂದ ಕೆಲಸ ಮಾಡಬೇಕೆಂದು ಶಾಸಕ ಸಾ.ರಾ. ಮಹೇಶ್ ಹೇಳಿದರು.
ಪಟ್ಟಣದ ಮಿನಿ ವಿಧಾನಸೌಧದಲ್ಲಿ ಶುಕ್ರವಾರ ಸರ್ಕಾರದ ವಿವಿಧ ಸವಲತ್ತುಗಳ ಅದೇಶ ಪತ್ರ ವಿತರಿಸಿ ಮಾತನಾಡಿದ ಅವರು, ಇಂದು ಸಾಂಕೇತಿಕವಾಗಿ ಆಯ್ದ ಕೆಲವರಿಗೆ ಆದೇಶ ಪತ್ರ ವಿತರಿಸುತ್ತಿದ್ದು, ನಾಳೆಯಿಂದ ಅಧಿಕಾರಿಗಳು ಫಲಾನುಭವಿಗಳ ಮನೆ ಬಾಗಿಲಿಗೆ ತಲುಪಿಸಲಿದ್ದಾರೆ ಎಂದು ತಿಳಿಸಿದರು.
9 ಸಾವಿರ ಮಂದಿಗೆ ಬಿಪಿಎಲ್ ಪಡಿತರ ಚೀಟಿ, 51 ಮಂದಿಗೆ ಸಂಧ್ಯಾ ಸುರಕ್ಷಾ, 93 ಮಂದಿಗೆ ಮನಸ್ವಿನಿ, 38 ಮಂದಿಗೆ ವಿಧವಾ ವೇತನ, 28 ಮಂದಿಗೆ ರಾಷ್ಟ್ರಿಯ ಭದ್ರತಾ ಯೋಜನೆ ಮತ್ತು ಮೂರು ಮಂದಿಗೆ ಮೈತ್ರಿ ಯೋಜನೆಯ ಆದೇಶ ಪತ್ರ ನೀಡಲಾಗುತ್ತಿದೆ ಎಂದು ಶಾಸಕರು ಮಾಹಿತಿ ನೀಡಿದರು.
ಅಧಿಕಾರಿಗಳು ಮನೆ ಬಾಗಿಲಿಗೆ: ಸರ್ಕಾರದ ಸವಲತ್ತು ಪಡೆಯಲು ಅರ್ಹರಾಗಿರುವ ಎಲ್ಲರನ್ನೂ ಗುರುತಿಸಿ ಅವರ ಮನೆ ಬಾಗಿಲಿಗೆ ಹೋಗಿ ಅರ್ಜಿ ನೀಡಿ, ಆದೇಶ ಪತ್ರ ನೀಡಲಾಗುತ್ತದೆ. ಆದ್ದರಿಂದ ಯಾರು ಆತಂಕ ಪಡುವುದು ಬೇಡ. ಈ ಸಂಬಂಧ ನಾಡ ಕಚೇರಿಯ ಸಿಬ್ಬಂದಿಗೆ ಸೂಚನೆ ನೀಡಿದ್ದು, ಮುಂದಿನ ದಿನಗಳಲ್ಲಿ ಅಧಿಕಾರಿಗಳು ನಿಮ್ಮ ಬಾಗಿಲಿಗೆ ಬಂದಾಗ ಸಮರ್ಪಕ ಮಾಹಿತಿ ನೀಡಿ ಸಹಕರಿಸಿ ಎಂದು ಕೋರಿದರು. ತಾಪಂ ಅಧ್ಯಕ್ಷೆ ಶಶಿಕಲಾ ರಮೇಶ್, ಪುರಸಭಾ ಸದಸ್ಯರಾದ ಕೆ.ಎಲ್. ಜಗದೀಶ್, ಎನ್.ಎನ್. ಶಿವಕುಮಾರ್, ಉಮೇಶ್, ತಾಪಂ ಮಾಜಿ ಉಪಾಧ್ಯಕ್ಷ ಹಾಡ್ಯ ಮಹದೇವಸ್ವಾಮಿ, ದಲಿತ ಮುಖಂಡ ಹನಸೋಗೆ ನಾಗರಾಜು, ತಹಸೀಲ್ದಾರ್ ವೀಣಾ, ಉಪ-ತಹಸೀಲ್ದಾರ್ ಎಂ.ಎಸ್. ಯಧುಗಿರೀಶ್ ಇದ್ದರು.