ಕ್ಯಾನ್ಸರ್ ಹರಡದಂತೆ ತಡೆಗಟ್ಟಲು ಸಾಧ್ಯ
ಮೈಸೂರು: ಕ್ಯಾನ್ಸರ್ ಗುಣಪಡಿಸುವ ಔಷಧ ಇಲ್ಲದಿದ್ದರೂ, ರೋಗ ಹರಡದಂತೆ ತಡೆಗಟ್ಟಲು ಸಂಶೋಧಿಸುವ ಅಗತ್ಯವಿದೆ ಎಂದು ಸಿಂಗಾಪುರ್‌ನ ಯಂಗ್ ಲೂ ಲಿನ್ ಔಷಧ ಶಾಲೆಯ ಸಹಾಯಕ ಪ್ರಾಧ್ಯಾಪಕ ಡಾ.ಗೌತಮ್ ಸೇಥಿ ಹೇಳಿದರು.
ಮೈಸೂರು ವಿವಿ ರಾಣಿಬಹದ್ದೂರ್ ಸಭಾಂಗಣದಲ್ಲಿ ಆಯೋಜಿಸಿದ್ದ ರಾಸಾಯನ ಜೀವಶಾಸ್ತ್ರ- ಔಷಧ ಸಂಶೋಧನೆ- 2014 ಅಂತಾರಾಷ್ಟ್ರೀಯ ವಿಚಾರ ಸಂಕಿರಣದ ಸಮಾರೋಪ ಸಮಾರಂಭಕ್ಕೂ ಮುನ್ನ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕ್ಯಾನ್ಸರ್ ರೋಗ ಇತ್ತೀಚಿನ ದಿನಗಳಲ್ಲಿ ವ್ಯಾಪಕವಾಗಿ ಹರಡುತ್ತಿದೆ. ಇದರ ಸಂಪೂರ್ಣ ಗುಣಪಡಿಸುವಿಕೆ ಸಾಧ್ಯವಿಲ್ಲ. ಆದರೆ ರೋಗ ದೇಹದ ಇತರೆ ಭಾಗಕ್ಕೆ ಹರಡದಂತೆ ನೋಡಿಕೊಳ್ಳುವ ನಿಟ್ಟಿನಲ್ಲಿ ಮೆಟೊಸಿಸ್ ಸಂಶೋಧನೆ ನಡೆಸಬೇಕಿದೆ. ಇದರಿಂದ ರೋಗಿಯು ಹೆಚ್ಚು ದಿನ ಬದುಕುತ್ತಾನೆ. ಈ ನಿಟ್ಟಿನಲ್ಲಿ ಸಂಶೋಧನೆ ನಡೆಯುತ್ತಿದೆ ಎಂದು ಹೇಳಿದರು.
ಕೇಂಬ್ರಿಡ್ಜ್ ವಿವಿಯ ಜೀವರಾಸಾಯನ ಶಾಸ್ತ್ರ ವಿಭಾಗದ ಪ್ರೊ. ಟಾಮ್ ಬ್ಲುಂಡೆಲ್ ಮಾತನಾಡಿ, ಕ್ಯಾನ್ಸರ್‌ನಂತೆಯೇ ಕ್ಷಯ ರೋಗ ಸಹ ಹೆಚ್ಚುತ್ತಿದೆ. ಮುಂಚೆ ಕ್ಷಯ ರೋಗ ಸಂಪೂರ್ಣವಾಗಿ ನಿಯಂತ್ರಣಕ್ಕೆ ಬಂದಿತ್ತು. ಆದರೆ ಈಗ ಏಡ್ಸ್ ರೋಗದ ಜೊತೆಗೆ ಕಾಣಿಸಿಕೊಳ್ಳುತ್ತಿದೆ. ಇದು ಕೇವಲ ಭಾರತದಲ್ಲಿ ಮಾತ್ರವಲ್ಲದೆ ವಿದೇಶದಲ್ಲಿಯೂ ಇದೆ. ಯಾವುದೆ ಔಷಧವನ್ನು ಸಂಶೋಧಿಸಿದರೂ ಎಲ್ಲವೂ ಯಶಸ್ವಿಯಾಗುತ್ತದೆ ಎನ್ನಲಾಗದು. ಆದರೆ ಪ್ರಯತ್ನ ಮಾತ್ರ ನಿರಂತರವಾಗಿದೆ. ಕಡಿಮೆ ದರದಲ್ಲಿ ಔಷಧ ದೊರಕಲು ಸರ್ಕಾರ ಮತ್ತು ಔಷಧ ಕಂಪನಿಗಳು ಮಾತುಕತೆ ನಡೆಸಬೇಕು ಎಂದರು.
ಮೈಸೂರು ವಿವಿ ಕುಲಪತಿ ಪ್ರೊ.ಕೆ.ಎಸ್. ರಂಗಪ್ಪ ಮಾತನಾಡಿ, ಯಾವುದೇ ಚಿಕಿತ್ಸೆಗೂ ರೋಗಿ ಸ್ಪಂದಿಸದಿದ್ದಾಗ ಕಿಮೊ ಥೆರಪಿ ಮೂಲಕ ಚಿಕಿತ್ಸೆ ನೀಡಬಹುದಷ್ಟೆ ಎಂದರು.
ಕೊಲಂಬಿಯಾದ ಮಕ್ಕಳ ಕ್ಯಾನ್ಸರ್ ಕೇಂದ್ರದ ನಿರ್ದೇಶಕ ಪ್ರೊ.ಪೀಟರ್ ಜೆ. ಹೌಗ್‌ಟನ್, ಡಾ. ಅಂಡ್ರೆಸ್ ಬೆಂಡರ್, ರಷ್ಯಿಯನ್ ಅಕಾಡೆಮಿ ಆಫ್ ಸೈನ್ಸ್‌ನ ಡಾ. ಅಲೆಕ್ಸಿ ಸುಖೊರುಕೊವ್ ಇದ್ದರು.