ಜಿಲ್ಲೆಯ ವಿವಿಧೆಡೆ ಕರವೇ ಪ್ರತಿಭಟನೆ
ಪಿರಿಯಾಪಟ್ಟಣ: ಕನ್ನಡಿಗರ ಬಗ್ಗೆ ತತ್ಸಾರ ಮನೋಭಾವ ಹೊಂದಿರುವ ಸಿಎಫ್ಟಿಆರ್ಐ ನಿರ್ದೇಶಕ ಪ್ರೊ.ರಾಮರಾಜಶೇಖರ್ ಅವರನ್ನು ಗಡಿಪಾರು ಮಾಡುವಂತೆ ಒತ್ತಾಯಿಸಿ, ಕರವೇ ಕಾರ್ಯಕರ್ತರು ಪಟ್ಟಣದ ಬಸವೇಶ್ವರ ವೃತ್ತದಲ್ಲಿ ಪ್ರತಿಭಟಿಸಿದರು.
ಪ್ರತಿಭಟನೆಯ ನೇತೃತ್ವ ವಹಿಸಿದ್ದ ಕರವೇ ತಾಲೂಕು ಅಧ್ಯಕ್ಷ ಎನ್.ಎಲ್. ಗಿರೀಶ್ ಮಾತನಾಡಿ, ಕನ್ನಡಿಗರನ್ನು ಬೇಕಾಬಿಟ್ಟಿಯಾಗಿ ಕಾಣುವ, ಸಿಎಫ್ಟಿಆರ್ಐನ ಕನ್ನಡ ಸಂಘದವರಿಗೆ ಕಾರ್ಯಕ್ರಮ ನಡೆಸಲು ಬಿಡದೆ ಕನ್ನಡಿಗರಿಗೆ ಗೌರವ ನೀಡದೆ, ಕನ್ನಡಿಗರನ್ನು ಸಿಎಫ್ಟಿಆರ್ಐನಿಂದ ಬೇರೆಡೆಗೆ ಎತ್ತಂಗಡಿ ಮಾಡುತ್ತಿರುವ ನಿರ್ದೇಶಕ ರಾಮರಾಜಶೇಖರ್ ಅವರನ್ನು ಗಡಿಪಾರು ಮಾಡಬೇಕು. ಇಲ್ಲವಾದಲ್ಲಿ ಬೇರೆಡೆಗೆ ವರ್ಗಾವಣೆ ಮಾಡಬೇಕು. ನಿರ್ದೇಶಕ ರಾಜಶೇಖರ್ ವರ್ತನೆ ವಿರುದ್ಧ ಪ್ರತಿಭಟಿಸಿ ಬಂಧನಕ್ಕೊಳಗಾಗಿರುವ ಕರವೇ ಕಾರ್ಯಕರ್ತರನ್ನು ಬಿಡುಗಡೆ ಮಾಡುವಂತೆ ಒತ್ತಾಯಿಸಿದರು.
ಕರವೇ ಪದಾಧಿಕಾರಿಗಳಾದ ರವಿ, ಪ್ರವೀಣ್ಕುಮಾರ್, ಫಯಾಜ್, ಸಿ.ಎನ್. ವಿಜಯ್, ಸಂತೋಷ್, ದೇವರಾಜ್, ವೆಂಕಟೇಶ್ ಇದ್ದರು.
ಕೆ.ಆರ್. ನಗರದಲ್ಲೂ ಧರಣಿ
ಕೆ.ಆರ್. ನಗರ: ಸಿಎಫ್ಟಿಆರ್ಐ ನಿರ್ದೇಶಕ ರಾಮ್ ರಾಜಶೇಖರನ್ ಮುಖಕ್ಕೆ ಮಸಿ ಎರಚಲು ಯತ್ನಿಸಿದ ಕಾರ್ಯಕರ್ತರನ್ನು ತಕ್ಷಣ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆಯ ತಾ. ಘಟಕದ ಕಾರ್ಯಕರ್ತರು ಶುಕ್ರವಾರ ಪ್ರತಿಭಟಿಸಿದರು. ಪಟ್ಟಣದ ಅಂಬೇಡ್ಕರ್ ಪುತ್ಥಳಿ ಬಳಿಯಿಂದ ಗರುಡ ಗಂಭದ ವೃತ್ತ, ಪುರಸಭಾ ವೃತ್ತದ ಮೂಲಕ ಮಿನಿ ವಿಧಾನಸೌಧದವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದ ಕಾರ್ಯಕರ್ತರು, ಗಾಂಧಿ ಪ್ರತಿಮೆ ಮುಂಭಾಗ ಧರಣಿ ನಡೆಸಿ ತಹಸೀಲ್ದಾರ್ ವೀಣಾ ಅವರಿಗೆ ಮನವಿ ಸಲ್ಲಿಸಿದರು. ತಾಲೂಕು ಅಧ್ಯಕ್ಷ ರುದ್ರೇಶ್ ಮಾತನಾಡಿ, ರಕ್ಷಣಾ ವೇದಿಕೆಯ ಕಾರ್ಯಕರ್ತರನ್ನು ಕೂಡಲೇ ಬಿಡುಗಡೆ ಮಾಡಬೇಕು. ನಾಡದ್ರೋಹಿಯನ್ನು ವೃತ್ತಿಯಿಂದ ವಜಾಗೊಳಿಸಿ ಗಡಿಪಾರು ಮಾಡಬೇಕು. ಇಲ್ಲದಿದ್ದರೆ ವೇದಿಕೆಯ ರಾಜ್ಯಾಧ್ಯಕ್ಷ ಟಿ. ನಾರಾಯಣಗೌಡರ ಸೂಚನೆಯಂತೆ ರಾಜ್ಯಾದ್ಯಂತ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು. ಅನುಸೂಯ ಶಿವಣ್ಣ, ಹೆಬ್ಬಾಳು ಹೋಬಳಿ ಅಧ್ಯಕ್ಷ ಗಿರೀಶ್, ಗರುಡಗಂಭದ ಸ್ವಾಮಿ, ಮಂಜುನಾಥ್, ಭರತ್, ನವೀನ್, ಸತೀಶ್, ನಾಗೇಶ್, ಕೆ. ದಿನೇಶ್ಕುಮಾರ್, ಎಂ.ಬಿ. ಮೋಕ್ಷಿತ್, ಅಭಿ, ನಂದೀಶ್, ದಿವಾಕರ, ಪ್ರಸನ್ನ, ಸಂದೀಪ್, ಚೇತನ್, ಮೋಹನ್ಣಕುಮಾರಿ, ಶ್ವೇತಾ ಭಾಗವಹಿಸಿದ್ದರು.
ಕಾರ್ಯಕರ್ತರ ಬಂಧನಕ್ಕೆ ವಿರೋಧ
ಎಚ್.ಡಿ. ಕೋಟೆ: ಕೇಂದ್ರೀಯ ಆಹಾರ ಮತ್ತು ತರಬೇತಿ ಸಂಶೋಧನಾ ಸಂಸ್ಥೆ ನಿರ್ದೇಶಕ ರಾಮ್ ರಾಜಶೇಖರನ್ ಅವರನ್ನು ವರ್ಗಾವಣೆ ಮಾಡುವಂತೆ ಆಗ್ರಹಿಸಿ ಹಾಗೂ ಕರವೇ ಕಾರ್ಯಕರ್ತರನ್ನು ಬಂಧಿಸಿರುವುದನ್ನು ಖಂಡಿಸಿ ಕರವೇ ವತಿಯಿಂದ ಪಟ್ಟಣದ ತಾಲೂಕು ಕಚೇರಿ ಎದುರು ಶುಕ್ರವಾರ ಪ್ರತಿಭಟಿಸಿದರು.
ಕರವೇ ತಾ. ಅಧ್ಯಕ್ಷ ನಟರಾಜು ಮಾತನಾಡಿ, ಕೇಂದ್ರೀಯ ಆಹಾರ ಸಂಸ್ಥೆಯಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆಗೆ ಅವಕಾಶ ನೀಡದ ಸಂಸ್ಥೆ ನಿರ್ದೇಶಕ ರಾಮ್ ರಾಜಶೇಖರನ್ ಅವರನ್ನು ಪ್ರಶ್ನಿಸಲು ಮುಂದಾದ ಕರವೇ ಕಾರ್ಯಕರ್ತರನ್ನು ಬಂಧಿಸಿದ್ದಾರೆ. ಇಂತಹ ಕನ್ನಡ ವಿರೋಧಿ ಅಧಿಕಾರಿಗಳನ್ನು ಬೇರೆ ರಾಜ್ಯಕ್ಕೆ ವರ್ಗಾಹಿಸುವಂತೆ ಎಂದು ಆಗ್ರಹಿಸಿದರು. ಕರವೇ ಗೌರವಾಧ್ಯಕ್ಷ ರಾಜೇಗೌಡ ಮಾತನಾಡಿ, ಬಂಧಿತ ಕರವೇ ಕಾರ್ಯಕರ್ತರನ್ನು ಕೂಡಲೇ ಬಿಡುಗಡೆ ಗೊಳಿಸದಿದ್ದಲ್ಲಿ ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು. ತಹಸೀಲ್ದಾರ್ ಕೆ. ಕೃಷ್ಣ ಅವರಿಗೆ ಮನವಿ ಸಲ್ಲಿಸಿದರು. ಕಾರ್ಯಾಧ್ಯಕ್ಷ ಸ್ವಾಮಿ, ಮಹೇಶ್, ಉಪಾಧ್ಯಕ್ಷ ಮಂಜುನಾಥ್, ಚುಂಚೇಗೌಡ, ಕೃಷ್ಣಸ್ವಾಮಿ, ಕಾರ್ಯದರ್ಶಿಗಳಾದ ನಂದೀಶ್, ಮಲ್ಲೇಶ್, ಬಸವಣ್ಣ, ವಿನೋದ್, ಟೌನ್ ಅಧ್ಯಕ್ಷ ಪ್ರಸಾದ್, ರಾಚಾಚಾರಿ, ಇನಾಯತ್, ರಾಜು, ರವಿ, ವಿಜಿ, ಮೀನಾ, ರಾಜಮ್ಮ, ಪದ್ಮ, ರಾಣಿ ಭಾಗವಹಿಸಿದ್ದರು.