ನಾಳೆ ವಾಟಾಳು ಶ್ರೀಗಳಿಗೆ ಗುರುವಂದನೆ
ಮೈಸೂರು: ವಾಟಾಳು ಶ್ರೀ ಸೂರ್ಯಸಿಂಹಾಸನ ಮಠದ ಶ್ರೀ ಸಿದ್ಧಲಿಂಗ ಶಿವಾಚಾರ್ಯ ಸ್ವಾಮಿಗಳಿಗೆ ಜ.12ರ ಬೆಳಗ್ಗೆ 10.30ಕ್ಕೆ ದಸರಾ ವಸ್ತು ಪ್ರದರ್ಶನ ಆವರಣದ ಪಿ.ಕಾಳಿಂಗರಾವ್ ಸಭಾಂಗಣದಲ್ಲಿ ಗುರುವಂದನೆ ಕಾರ್ಯಕ್ರಮ ಆಯೋಜಿಸಲಾಗಿದೆ.
ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಮತ್ತು ಶ್ರೀ ಸಿದ್ಧಗಂಗಾ ಮಠದ ಕಿರಿಯಶ್ರೀ ಸಿದ್ದಲಿಂಗ ಸ್ವಾಮಿಗಳು ಸಾನ್ನಿಧ್ಯ ವಹಿಸುವರು. ದೇವನೂರಿನ ಶ್ರೀ ಗುರುಮಲ್ಲೇಶ್ವರ ಮಠದ ಶ್ರೀ ಮಹಂತಸ್ವಾಮೀಜಿ ಸಮ್ಮುಖ ವಹಿಸುವರು. ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಗಳ ಎಲ್ಲಾ ಮಠಾಧೀಶರು ಭಾಗವಹಿಸುವರು ಎಂದು ಮೈಸೂರು ನಾಗರೀಕರ ವೇದಿಕೆ ಮತ್ತು ಭಕ್ತ ವೃಂದದ ಅಧ್ಯಕ್ಷ ಪ್ರೊ.ಸುಬ್ಬಪ್ಪ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಮಾಜಿ ಶಾಸಕ ವಾಟಾಳ್ ನಾಗರಾಜ್ ಕಾರ್ಯಕ್ರಮ ಉದ್ಘಾಟಿಸಲಿದ್ದು, ಕಂದಾಯ ಸಚಿವ ವಿ. ಶ್ರೀನಿವಾಸಪ್ರಸಾದ್ ಅಧ್ಯಕ್ಷತೆ ವಹಿಸುವರು. ತೋಟಗಾರಿಕೆ ಸಚಿವ ಶ್ಯಾಮನೂರು ಶಿವಶಂಕರಪ್ಪ ಅಭಿನಂದನಾ ಗ್ರಂಥ ಬಿಡುಗಡೆಗೊಳಿಸುವರು. ಲೋಕೋಪಯೋಗಿ ಸಚಿವ ಡಾ.ಎಚ್.ಸಿ. ಮಹದೇವಪ್ಪ ವಿಶೇಷ ಸಂಚಿಕೆ ಬಿಡುಗಡೆಗೊಳಿಸಲಿದ್ದು, ಸಹಕಾರ ಸಚಿವ ಎಚ್.ಎಸ್. ಮಹದೇವಪ್ರಸಾದ್ ವಿಭಿನ್ನ ಸಮರ್ಥರಿಗೆ ಆರ್ಥಿಕ ನೆರವು ನೀಡುವರು. ಸಾಹಿತಿ ಪ್ರೊ.ಮಲೆಯೂರು ಗುರುಸ್ವಾಮಿ ಅಭಿನಂದನಾ ಭಾಷಣ ಮಾಡಲಿದ್ದು, ಸಂಸದರಾದ ಆರ್. ಧ್ರುವನಾರಾಯಣ ಮತ್ತು ಎಚ್. ವಿಶ್ವನಾಥ್ ಭಾಗವಹಿಸುವರು.
ಅಂದು ಬೆಳಗ್ಗೆ 9ಕ್ಕೆ ವಾಟಾಳು ಶ್ರೀಗಳ ಉತ್ಸವವು ತೆರೆದ ಕುದುರೆ ಸಾರೋಟಿನಲ್ಲಿ ಜನಪದ ಕಲಾತಂಡಗಳೊಂದಿಗೆ 101 ಗಣಪತಿ ದೇವಸ್ಥಾನದಿಂದ ಎನ್. ಮಾಧವರಾವ್ ವೃತ್ತ, ಮಹಾತ್ಮಗಾಂಧಿ ರಸ್ತೆ ಮೂಲಕ ರಾಮಾನುಜ ರಸ್ತೆ, ಡಾ.ಶಿವರಾತ್ರಿ ರಾಜೇಂದ್ರ ವೃತ್ತ, ಗನ್ಹೌಸ್ ಮೂಲಕ ದಸರಾ ವಸ್ತುಪ್ರದರ್ಶನ ಆವರಣ ತಲುಪುವುದು. 9.30ಕ್ಕೆ ಶ್ರೀ ಶಿವರಾತ್ರಿ ರಾಜೇಂದ್ರ ಕಲಾತಂಡದಿಂದ ಭಜನೆ ಇದೆ. ಜಿಲ್ಲಾ ಕಸಾಪ ಅಧ್ಯಕ್ಷ ಎಂ. ಚಂದ್ರಶೇಖರ್, ತಾಲೂಕು ಕಸಾಪ ಅಧ್ಯಕ್ಷ ಎಸ್. ಶಿವಮೂರ್ತಿ ಕಾನ್ಯ, ಮೂಗೂರು ನಂಜುಂಡಸ್ವಾಮಿ, ಗೌರಿಶಂಕರ್, ಶಿವಕುಮಾರ್ ಇದ್ದರು.