ಬಾಲಏಸು ದೇವಾಲಯದಲ್ಲಿ ಕಳವು
ಹುಣಸೂರು: ಪಟ್ಟಣದ ಉದಯನಗರದ ಬಾಲ ಏಸು ದೇವಾಲಯದಲ್ಲಿ ಬಾಗಿಲು ಒಡೆದು ಕಳ್ಳತನ ಮಾಡಿರುವ ಘಟನೆ ಗುರುವಾರ ರಾತ್ರಿ ಜರುಗಿದೆ.
ಗೋಲಕದಲ್ಲಿದ್ದ ಸುಮಾರು 1,500 ನಷ್ಟು ಹಣ ಹೊತ್ತೊಯ್ದಿರುವ ಕಳ್ಳರು, ಎಲೆಕ್ಟ್ರಾನಿಕ್ಸ್ ವಸ್ತುಗಳನ್ನು ಕದ್ದೊಯ್ಯಲು ನಡೆಸಿರುವ ಯತ್ನ ನಿವಾಸಿಗಳ ಎಚ್ಚರದಿಂದ ತಪ್ಪಿದೆ.
ಮಧ್ಯರಾತ್ರಿ 2.45ರ ವೇಳೆಯಲ್ಲಿ ಚರ್ಚ್‌ನ ಮುಂಬಾಗಿಲನ್ನು ಮೀಟಿ ಒಳ ನುಗ್ಗಿದ ಕಳ್ಳರು, ಕಬ್ಬಿಣದ ಬೀರುವನ್ನು ಹಾರೆಯಿಂದ ಮೀಟುತ್ತಿದ್ದ ವೇಳೆ ಬಂದ ಶಬ್ದದಿಂದ ಎಚ್ಚರಗೊಂಡ ಪಕ್ಕದ ನಿವಾಸಿ ಫಿಲಿಫ್ಸ್ ಹೊರಬಂದು ನೋಡುತ್ತಿದ್ದಂತೆ ಮುಸುಕು ದಾರಿ ಕಳ್ಳರು ಕಬ್ಬಿಣದ ರಾಡ್‌ನಿಂದ ಹಲ್ಲೆ ನಡೆಸಲು ಮುಂದಾದರು. ಇದೇ ವೇಳೆ ಅವರು ಕೂಗಿಕೊಂಡಾಗ ಬಡಾವಣೆ ನಿವಾಸಿಗಳು ಎಚ್ಚರಗೊಂಡು ಬರುವಷ್ಟರಲ್ಲಿ ಕಳ್ಳರು ಪರಾರಿಯಾದರು.
ಎಲೆಕ್ಟ್ರಾನಿಕ್ಸ್ ವಸ್ತುಗಳನ್ನು ದೋಚಲು ಹಾಗೂ ಬಾಲ ಏಸುವಿದ್ದ ವಿಗ್ರಹವಿದ್ದ ಕಪಾಟನ್ನು ಒಡೆದು ಕಿರೀಟ ಹೊತ್ತೊಯ್ಯಲು ನಡೆಸಿದ ಯತ್ನ ವಿಫಲವಾಗಿದೆ. ಚರ್ಚ್ ಫಾದರ್ ಸಿರೀಲ್ ಡಿಸೋಜಾ ಪಟ್ಟಣ ಠಾಣೆಯಲ್ಲಿ ದೂರು ನೀಡಿದ್ದಾರೆ. ಸ್ಥಳಕ್ಕೆ ಸರ್ಕಲ್ ಇನ್‌ಸ್ಪೆಕ್ಟರ್ ಗಜೇಂದ್ರ ಪ್ರಸಾದ್, ಎಸ್‌ಐ ಲವ ಭೇಟಿ ನೀಡಿ ಪರಿಶೀಲಿಸಿದರು.
ಆಕಸ್ಮಿಕ ಬೆಂಕಿ: ಗುಡಿಸಲು ಭಸ್ಮ
ಎಚ್.ಡಿ. ಕೋಟೆ: ತಾಲೂಕಿನ ಬೂದನೂರು ಗ್ರಾಮದಲ್ಲಿ ಆಕಸ್ಮಿಕ ಬೆಂಕಿಗೆ ಗುಡಿಸಲು ಆಹುತಿಯಾಗಿರುವ ಘಟನೆ ಜರುಗಿದೆ. ಗ್ರಾಮದ ಮಹದೇವಯ್ಯ ಎಂಬವವರಿಗೆ ಸೇರಿದ ಗುಡಿಸಲು ಬೆಂಕಿಗಾಹುತಿಯಾಗಿದ್ದು, ಗುಡಿಸಲಿನಲ್ಲಿ ಇದ್ದ 30 ಕೆ.ಜಿ ಅಕ್ಕಿ, ದವಸ ದಾನ್ಯ ಹಾಗೂ 5 ಮೂಟೆ ಸಿಮೆಂಟ್ ಸಂಪೂರ್ಣ ಹಾಳಾಗಿದೆ. ಗುಡಿಸಲಿನಲ್ಲಿ ಯಾರು ಇಲ್ಲದ್ದರಿಂದ ಯಾವುದೇ ಪ್ರಾಣಾಪಾಯವಾಗಿಲ್ಲ. ಸ್ಥಳಕ್ಕೆ ಗ್ರಾಮ ಲೆಕ್ಕಾಧಿಕಾರಿ ತೆರಳಿ ಸೂಕ್ತ ಪರಿಹಾರ ನೀಡಲಾಗುವುದು ಎಂದು ತಿಳಿಸಿದರು. ಪಟ್ಟಣದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.