ಸಂಸ್ಕೃತ ಅಧ್ಯಯನದಿಂದ ಸಂಸ್ಕಾರವಂತರಾಗಲು ಸಾಧ್ಯ
ಕ.ಪ್ರ.ವಾರ್ತೆ , ಮೈಸೂರು , ಜ. 10
ಸಂಸ್ಕೃತ ಭಾಷೆಯು ಸುಮಧುರ ರಮಣೀಯವಾದ ಭಾಷೆಯಾಗಿದ್ದು, ಈ ಭಾಷೆಯನ್ನು ಯಾರು ಅಧ್ಯಯನ ಮಾಡುತ್ತಾರೋ ಅವರು ಸಂಸ್ಕಾರವಂತರಾಗುತ್ತಾರೆ ಎಂದು ಎಸ್ಡಿಎಂ ಕಾಲೇಜಿನ ಸಂಸ್ಕೃತ ವಿಭಾಗದ ಮುಖ್ಯಸ್ಥ ಪ್ರೊ.ಎನ್. ದೇವೇಂದ್ರಕುಮಾರ್ ಹೇಳಿದರು.
ಸರಸ್ವತಿಪುರಂನ ಜೆಎಸ್ಎಸ್ ಮಹಿಳಾ ಪದವಿ ಪೂರ್ವ ಕಾಲೇಜಿನ ನವಜ್ಯೋತಿ ಸಭಾಂಗಣದಲ್ಲಿ ನಡೆದ ಸಂಸ್ಕೃತೋತ್ಸವ ಉದ್ಘಾಟಿಸಿ ಅವರು ಮಾತನಾಡಿದರು.
ಈ ಸಂಸ್ಕೃತ ಭಾಷೆಯನ್ನು ಹಿಂದೆ ಪ್ರತಿಯೊಬ್ಬರೂ ಸಹ ಅಧ್ಯಯನ ಮಾಡುತ್ತಿದ್ದು, ಅದನ್ನು ರಾಷ್ಟ್ರ ಭಾಷೆಯನ್ನಾಗಿ ಸ್ವೀಕರಿಸಿದ್ದರು. ಭಾರತಕ್ಕೆ ಪ್ರವಾಸ ಬಂದ ವಿದೇಶಿಯರು ಈ ಭಾಷೆಯ ಸೌಂದರ್ಯಕ್ಕೆ ಮಾರು ಹೋಗಿ ಭಾರತ ಬಿಟ್ಟು ಹೋಗುವುದರೊಳಗೆ ಈ ಭಾಷೆಯನ್ನು ಕಲಿಯುತ್ತಿದ್ದರು. ಅಷ್ಟರ ಮಟ್ಟಿಗೆ ವಿದೇಶಿಯರು ಸಹ ಈ ಭಾಷೆಯ ಮೇಲೆ ಪ್ರೀತಿ ತೋರಿಸುತ್ತಿದ್ದರು. ಇಂತಹ ಸುಮಧುರ ಭಾಷೆಯನ್ನು ಇತ್ತೀಚಿನ ದಿನಗಳಲ್ಲಿ ನಿರ್ಲಕ್ಷಿಸುತ್ತಿರುವುದು ದುರ್ದೈವವೇ ಸರಿ. ಆದರೆ ಎಷ್ಟೇ ನಿರ್ಲಕ್ಷಕ್ಕೆ ಒಳಾದರೂ ಇಂದಿಗೂ ತನ್ನ ಸತ್ವ ಶ್ರೇಷ್ಠೆತೆಯನ್ನು ಪಡೆದುಕೊಂಡಿರುವುದು ಸಂಸ್ಕೃತ ಭಾಷೆ ಎಂದು ಇದರ ಮಹತ್ವ ತಿಳಿಸಿದರು.
ಇದೇ ವೇಳೆ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಪದವಿ ಕಾಲೇಜಿನ ಪ್ರಾಂಶುಪಾಲ ಪ್ರೊ.ಲೋಕೇಶಮೂರ್ತಿಅಧ್ಯಕ್ಷತೆ ವಹಿಸಿ ಮಾತನಾಡಿದರು. ದ್ವಿತೀಯ ಪಿಯುಸಿ ವಿದ್ಯಾರ್ಥಿಗಳು ಸಂಸ್ಕೃತ ಪ್ರಸಿದ್ಧ ನಾಟಕಕಾರರಾದ ಭಾಸ ವಿರಚಿತ ಪ್ರತಿಮಾ ನಾಟಕದ ಪ್ರತಿಮಾ ಗೃಹಮ್ ಎಂಬ ನಾಟಕ ಭಾಗವನ್ನು ಪ್ರದರ್ಶಿಸಿದರು. ಈ ವಿದ್ಯಾರ್ಥಿಗಳಿಗೆ ಕಾಲೇಜಿನ ವತಿಯಿಂದ ನೆನಪಿನ ಕಾಣಿಕೆ ವಿತರಿಸಲಾಯಿತು.
ಪದವಿ ಪೂರ್ವ ಕಾಲೇಜಿನ ಇಂಗ್ಲಿಷ್ ಉಪನ್ಯಾಸಕ ಡಿ.ಎಂ. ಶೇಖರ್, ಸಂಸ್ಕೃತ ಉಪನ್ಯಾಸಕ ಡಾ.ಎಂ.ಬಿ. ಸರ್ವಮಂಗಳ, ಬಿ.ಪಿ. ಷಡಕ್ಷರಿ ಇದ್ದರು. ಶ್ರೇಯಾರಾವ್ ಸ್ವಾಗತಿಸಿದರು. ಟಿ.ಪಿ. ಸುಭಾಷಿಣಿ ವಂದಿಸಿದರು. ಪಯಸ್ವಿನಿ ನಿರೂಪಿಸಿದರು.