ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಸ್ವಪ್ರತಿಷ್ಠೆ ಕೇಂದ್ರಗಳಾಗುತ್ತಿರುವ ಹಳ್ಳಿಗಳು: ಪ್ರಕಾಶ್ ಭಟ್

Vishwanath S
Updated On : 11 Jan 2014, 1:10 am

ಕ.ಪ್ರ.ವಾರ್ತೆ , ಮೈಸೂರು , ಜ. 10
ನಾವಲ್ಲದಿದ್ದರೆ ಇನ್ಯಾರೋ ಕೃಷಿ ಮಾಡುತ್ತಾರೆ ಎಂದು ಭಾವಿಸುತ್ತೇವೆ. ಅವರೂ ಮಾಡದೆ ಮತ್ಯಾರೋ ಮಾಡುತ್ತಾರೆ. ಯಾಕೆಂದರೆ ಕೃಷಿಯು ಒಂದು ಪರಂಪರೆ. ಅಂತಹ ಪರಂಪರೆಯನ್ನು ನಾವು ಯಾಕೆ ಮುಂದುವರಿಸಬಾರದು ಎಂಬ ಚಿಂತನೆ ಇಂದಿಗೆ ತುರ್ತಾಗಿದೆ ಎಂದು ಧಾರವಾಡದ ಸ್ಕೋಪ್ ಸಂಸ್ಥೆಯ ಸಿಇಒ ಪ್ರಕಾಶ್ ಎಸ್. ಭಟ್ ಹೇಳಿದರು.
ನಬಾರ್ಡ್, ಪ್ರಸಾರಭಾರತಿ, ಆಕಾಶವಾಣಿ ಹಾಗೂ ಮೈಸೂರು ವಿವಿ ಸಂಯುಕ್ತವಾಗಿ ಶುಕ್ರವಾರ ನಗರದ ಸಿಐಐಎಲ್‌ನಲ್ಲಿ ಏರ್ಪಡಿಸಿದ್ದ ಆರ್ಥಿಕ ಹಾಗೂ ಕೃಷಿ ಸಾಕ್ಷರತೆ ಕುರಿತ ವಿಚಾರ ಸಂಕಿರಣದಲ್ಲಿ ಸಮಗ್ರ ಕೃಷಿ ಹಾಗೂ ಯುವಜನತೆ ಬಗ್ಗೆ ಅವರು ಮಾತನಾಡಿದರು.
ಹಳ್ಳಿಗಳು ಸ್ವಪ್ರತಿಷ್ಠೆ ಕೇಂದ್ರವಾಗುತ್ತಿದ್ದು, ಈಗಿರುವ ಸಮಸ್ಯೆಯಿಂದ ಹೊರಬರಲು ಗುಳೆ ಹೋಗಲಾಗುತ್ತಿದೆ. ಆದರೆ ಮುಂದೊಂದು ದಿನ ಈಗ ಅನುಭವಿಸುತ್ತಿರುವ ಸಮಸ್ಯೆಗಳ ಜತೆ ಮತ್ತಷ್ಟು ಸೇರ್ಪಡೆಗೊಳ್ಳುತ್ತವೆ. ಯಾಕೆಂದರೆ ನಾವು ಆಹಾರವನ್ನೇ ತಿನ್ನುವುದು. ಸಂಪತ್ಭರಿತ ಕೃಷಿ ಜಮೀನನ್ನು ಹಣಕ್ಕಾಗಿ ನೀಡಿದರೆ ಮತ್ಯಾರೋ ಪರಿಸ್ಥಿತಿಯ ಲಾಭ ಪಡೆದು ಕೃಷಿಯನ್ನು ಕಾರ್ಪೊರೆಟ್ ವಲಯವನ್ನಾಗಿ ಬಳಸಿಕೊಳ್ಳುತ್ತಾರೆ. ಆಗ ಒಂದು ಕೆಜಿ ಅಕ್ಕಿಯನ್ನು 5 ಸಾವಿರ ನೀಡಿ ಖರೀದಿಸಬೇಕಾಗುತ್ತದೆ. ಅಂತಹದ್ದಕ್ಕೆ ನಾವು ಅವಕಾಶ ಮಾಡಿಕೊಡಬಾರದು ಎಂದರು.
ಹಣದ ದೃಷ್ಟಿಯಿಂದ ನೋಡಬೇಡಿ: ಕೃಷಿಯನ್ನು ಕೇವಲ ಹಣದ ದೃಷ್ಟಿಯಿಂದ ನೋಡಬಾರದು. ಇಲ್ಲಿ ಒಂದು ಬದುಕಿದೆ. ನಮ್ಮಂತೆಯೇ ಪ್ರಾಣಿ ಪಕ್ಷಿಗಳು ಬದುಕಬೇಕಿದೆ. ನಮಗೆ ಪುಕ್ಕಟೆಯಾಗಿ ಸಿಗುತ್ತಿರುವ ಭೂಮಿ, ನೀರು, ಸೂರ್ಯನ ಬೆಳಕನ್ನು ಸರಿಯಾದ ಕ್ರಮದಲ್ಲಿ ಬಳಸಿಕೊಳ್ಳಬೇಕು ಎಂದು ಆಶಿಸಿದರು. ಕಾಡಿನಲ್ಲಿ ವಾಸಿಸುತ್ತಿದ್ದ ಆದಿವಾಸಿಗಳನ್ನು ಒಕ್ಕಲೆಬ್ಬಿಸಿ ಪುನರ್ವಸತಿ ಕೇಂದ್ರಗಳನ್ನು ಸ್ಥಾಪಿಸಿ ಅಲ್ಲಿರಿಸಲಾಗುತ್ತಿದೆ. ಒಂದಿಪ್ಪೈತು ವರ್ಷಗಳ ಮತ್ತೆ ಅವರನ್ನು ಕಾಡಿಗೆ ಕಳುಹಿಸಿದರೆ ಅವರಿಗೆ ಬದುಕುವುದು ಕಷ್ಟವಾಗುತ್ತದೆ. ಅವರ ಕಾಡಿನ ಜ್ಞಾನ ಮಾಸಿ ಹೋಗಿರುತ್ತದೆ. ಈ ಪರಿಯು ಕೃಷಿಗೂ ಅನ್ವಯಿಸುತ್ತದೆ ಎಂದು ಅಭಿಪ್ರಾಯಪಟ್ಟರು. ಆಕಾಶವಾಣಿ ಸಹಾಯಕ ನಿರ್ದೇಶಕ ಡಾ. ಆನಂದ್ ವಿ. ಪಾಟೀಲ್ ಅಧ್ಯಕ್ಷತೆ ವಹಿಸಿದ್ದರು. ವಾರ್ತಾ ಇಲಾಖೆ ಉಪನಿರ್ದೇಶಕ ಎ.ಆರ್. ಪ್ರಕಾಶ್, ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಪ್ರಾದೇಶಿಕ ವ್ಯವಸ್ಥಾಪಕ ಎ. ಶ್ರೀಹರಿ ಇದ್ದರು.
ಸವಲತ್ತು ತಲುಪಿಸಲು ಆರ್ಥಿಕ ಸೇರ್ಪಡೆ ಅಗತ್ಯ: ವಡವಿ
ಮೈಸೂರು: ಸರ್ಕಾರ ಬಡವರಿಗಾಗಿ ರೂಪಿಸಿದ ಯೋಜನೆಗಳನ್ನು ಸಕಾಲದಲ್ಲಿ ತಲುಪಿಸುವಲ್ಲಿ ಆರ್ಥಿಕ ಸೇರ್ಪಡೆ ವ್ಯವಸ್ಥೆಯು ಅಗತ್ಯವಾಗಿದೆ ಎಂದು ಮಂಡ್ಯದ ನಬಾರ್ಡ್‌ನ ಸಹಾಯಕ ಮಹಾಪ್ರಬಂಧಕ ಬಿಂದು ಮಾಧವ ವಡವಿ ಅಭಿಪ್ರಾಯಪಟ್ಟರು. ಸೂಕ್ತ ಆರ್ಥಿಕ ಸೇವೆಗಳನ್ನು ಎಲ್ಲ ವರ್ಗದವರಿಗೂ, ದುರ್ಬಲರಿಗೂ, ಹಿಂದುಳಿದವರಿಗೆ ಸಕಾಲದಲ್ಲಿ, ಕೈಗೆಟುಕುವ ಮೊತ್ತದಲ್ಲಿ ಸಾಂಸ್ಥಿಕ ಸಂಸ್ಥೆಗಳ ಮೂಲಕ ತಲುಪಿಸುವ ಪ್ರಕ್ರಿಯೆಯನ್ನು ಆರ್ಥಿಕ ಸೇರ್ಪಡೆ ಎನ್ನಬಹುದು. ಉಳಿತಾಯ, ಹಣ ವರ್ಗಾವಣೆ, ಸಾಲ ಸೌಲಭ್ಯ, ವಿಮೆ ಪಿಂಚಣಿಯನ್ನು ಜನರು ಈ ವ್ಯವಸ್ಥೆಯ ಮೂಲಕ ಪಡೆದುಕೊಳ್ಳಬಹುದು. ಬ್ಯಾಂಕುಗಳ ಸಹ ಆರ್ಥಿಕ ಸೇರ್ಪಡೆ ಒದಗಿಸಲು ಕಟಿಬದ್ಧರಾಗಬೇಕು. ಆರ್‌ಬಿಐ ನಿರ್ದೇಶನದಂತೆ 2015ರ ಮಾರ್ಚ್ 31 ರೊಳಗೆ ದೇಶದ ಎಲ್ಲಾ ಕುಟುಂಬಗಳನ್ನು ಆರ್ಥಿಕ ಸೇರ್ಪಡೆಗೆ ಒಳಪಡಿಸಬೇಕಿದೆ ಎಂದು ಮಾಹಿತಿ ನೀಡಿದರು. ಭಾರತದಲ್ಲಿ ಪ್ರತಿ ಸಾವಿರ ಕಿ.ಮೀ.ಗೆ ಕೇವಲ ಶೇ.30.43 ರಷ್ಟು ಬ್ಯಾಂಕ್ ಶಾಖೆಗಳಿವೆ. ಚೀನಾದಲ್ಲಿ ಇದರ ಪ್ರಮಾಣ ಶೇ.1428.998 ರಷ್ಟಿದೆ. ಆರ್ಥಿಕ ಸೇರ್ಪಡೆಯಿಂದ ಉಳಿತಾಯ, ಆದಾಯದ ಕ್ರೋಡೀಕರಣ, ಹೂಡಿಕೆ ಪ್ರಮಾಣವನ್ನು ಹೆಚ್ಚಿಸಬಹುದು. ಸಾಮಾಜಿಕ ಅಭಿವೃದ್ಧಿ ವೇಗ ಪಡೆದುಕೊಳ್ಳಲಿದ್ದು, ಸರ್ಕಾರದ ಯೋಜನೆ ಜನಸಾಮಾನ್ಯರಿಗೆ ಬೇಗ ತಲುಪಲಿದೆ. ಅಭಿವೃದ್ಧಿಗೊಂಡ ತಂತ್ರಜ್ಞಾನ ಬಳಸಿಕೊಳ್ಳಲು ಮುಂದಾಗಬೇಕು ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement