ಹಾಲಿನ ಕಲಬೆರಕೆ ಬಗ್ಗೆ ಎಚ್ಚರದಿಂದಿರಿ
ಪಿರಿಯಾಪಟ್ಟಣ: ಹಾಲು ಅಮೃತದಷ್ಟು ಪವಿತ್ರವಾದದ್ದು. ಅದಕ್ಕೆ ಅನ್ಯ ಪದಾರ್ಥಗಳನ್ನು ಬೆರಕೆ ಮಾಡಬೇಡಿ. ಅದು ವಿಷ ಹಾಕಿದಂತಾಗುತ್ತದೆ ಎಂದು ಶಾಸಕ ಕೆ. ವೆಂಕಟೇಶ್ ಹೇಳಿದರು.
ತಾಲೂಕಿನ ನವಿಲೂರು ಗ್ರಾಮದಲ್ಲಿ ಹಾಲು ಉತ್ಪಾದಕರ ಸಹಕಾರ ಸಂಘದ ವತಿಯಿಂದ 15 ಲಕ್ಷ ವೆಚ್ಚದಲ್ಲಿ ಬಿಎಂಸಿ ಕೇಂದ್ರ ಉದ್ಘಾಟಿಸಿ ಅವರು ಮಾತನಾಡಿದರು.
ಇತ್ತೀಚೆಗೆ ಹಾಲು ಕಲಬೆರಕೆಯ ಬಗ್ಗೆ ಸಾಕಷ್ಟು ವರದಿಗಳು ಕೇಳಿ ಬರುತ್ತಿದ್ದು, ಖಾಸಗಿ ಹಾಲು ಸರಬರಾಜುದಾರರು ಮಾರಾಟ ಮಾಡುವ ಹಾಲಿನಲ್ಲಿ ಶೇ.35 ರಷ್ಟು ಬೆರಕೆ ಕಂಡುಬರುತ್ತಿದೆ. ನಂದಿನಿ ಹಾಲಿನ ಬಗ್ಗೆ ಸಾರ್ವಜನಿಕರಲ್ಲಿ ಬಹಳ ವಿಶ್ವಾಸವಿದ್ದು, ನಂಬಿಕೆ ಇಟ್ಟಿದ್ದಾರೆ. ರೈತರು ಬಿಎಂಸಿ ಕೇಂದ್ರಗಳಿಗೆ ಹಾಲು ಪೂರೈಸುವಾಗ ಯಾವುದೇ ಬೆರಕೆ ಮಾಡದಂತೆ ಹಾಲು ಪೂರೈಸಬೇಕು ಎಂದು ತಿಳಿಸಿದರು.
ಜಿಲ್ಲಾ ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕ ಡಾ.ಸುರೇಶ್‌ಬಾಬು ಮಾತನಾಡಿ, ತಾಲೂಕಿನಲ್ಲಿ 14 ಬಿಎಂಸಿ ಕೇಂದ್ರಗಳು ಈಗಾಗಲೇ ಕಾರ್ಯನಿರ್ವಹಿಸುತ್ತಿದ್ದು, ಮುಂದಿನ ದಿನಗಳಲ್ಲಿ ಮತ್ತೆ 4 ಕೇಂದ್ರಗಳನ್ನು ಸ್ಥಾಪಿಸಲಾಗುವುದು ಎಂದು ಅವರು ತಿಳಿಸಿದರು.
ನಂತರ ತಾಲೂಕಿನ ಹಬಟೂರು, ತೆಲಗಿನಕುಪ್ಪೆ, ಭುವನಹಳ್ಳಿ, ಚಿಕ್ಕನೇರಳೆ ಗ್ರಾಮಗಳಲ್ಲಿಯೂ ಸಹ ಹಾಲು ಉತ್ಪಾದಕರ ಸಹಕಾರ ಸಂಘಗಳ ವತಿಯಿಂದ ತಲಾ 15 ಲಕ್ಷ ವೆಚ್ಚದ ಬಿಎಂಸಿ ಕೇಂದ್ರಗಳನ್ನು ಉದ್ಘಾಟಿಸಿದರು.
ಜಿಪಂ ಸದಸ್ಯೆ ಮಂಜುಳಾರಾಜ್, ಕಾವೇರಿ ಶೇಖರ್, ಜಿಲ್ಲಾ ಒಕ್ಕೂಟದ ನಿರ್ದೇಶಕರಾದ ಸೋಮಶೇಖರ್, ರಾಜೇಗೌಡ, ವಿಜಯಲಕ್ಷ್ಮಿ, ತಾಪಂ ಸದಸ್ಯ ನವಿಲೂರು ಮಹದೇವ್, ಒಕ್ಕೂಟದ ಅಧಿಕಾರಿಗಳಾದ ಮಲ್ಲಿಕಾರ್ಜುನ, ಗೋವಿಂದರಾಜು, ಕಾಳೇಗೌಡ, ಮಹದೇವಮ್ಮ, ವಿರೂಪಾಕ್ಷ, ಮುಖಂಡರಾದ ಶಿವಣ್ಣ, ಆವರ್ತಿ ಚಂದ್ರು ಇದ್ದರು.