ಕರಾಟೆ ಕಲಿಯಲು ಮಕ್ಕಳನ್ನು ಪ್ರೇರೇಪಿಸಿ
ಮೈಸೂರು: ಪೋಷಕರು ಮತ್ತು ಶಿಕ್ಷಕರು ಮಕ್ಕಳಿಗೆ ಕರಾಟೆ ಕಲಿಯುವಂತೆ ಪ್ರೇರೇಪಿಸಬೇಕು ಎಂದು ಸಂಸದ ಎಚ್. ವಿಶ್ವನಾಥ್ ಕರೆ ನೀಡಿದರು.
ನಗರ ನಂಜರಾಜ ಬಹದ್ದೂರ್ ಛತ್ರದಲ್ಲಿ ಒಕಿನವಾ ಕರಾಟೆ ಡು ಶೋರಿನ್ ರಿವ್ ಶೋರಿನ್ಕೈ ಸಂಸ್ಥೆಯು ಆಯೋಜಿಸಿರುವ 11ನೇ ಶೋರಿನ್ಕೈ ರಾಷ್ಟ್ರೀಯ ಕರಾಟೆ ಪಂದ್ಯಾವಳಿಯನ್ನು ಅವರು ಉದ್ಘಾಟಿಸಿ ಮಾತನಾಡಿದರು.
ಈಗಿನ ಮಕ್ಕಳು ಶಿಕ್ಷಣದಲ್ಲಿ ಹೆಚ್ಚು ಅಂಕಗಳಿಸುವ ಒತ್ತಡದಲ್ಲಿ ಕಾಲ ಕಳೆಯುತ್ತಿದ್ದಾರೆ. ಶಿಕ್ಷಣದ ಜೊತೆಗೆ ಗಂಡು- ಹೆಣ್ಣು ಎಂಬ ಭೇದವಿಲ್ಲದೆ ಎಲ್ಲ ಮಕ್ಕಳ ಸ್ವಯಂ ರಕ್ಷಣೆಗಾಗಿ ಕರಾಟೆ ಕಲಿಯುವುದು ಅಗತ್ಯ. ಪೊಲೀಸ್ ಇಲಾಖೆಯ ತರಬೇತಿಯಲ್ಲೂ ಕರಾಟೆ ಒಂದು ಭಾಗವಾಗಿ ಅಳವಡಿಕೊಳ್ಳುವುದು ಉತ್ತಮ ಎಂದು ಅವರು ಸಲಹೆ ನೀಡಿದರು.
ಕುಗ್ಗುತ್ತಿರುವ ಮಕ್ಕಳು: ದಕ್ಷಿಣ ವಲಯದ ಐಜಿಪಿ ಡಾ.ಕೆ. ರಾಮಚಂದ್ರರಾವ್ ಮಾತನಾಡಿ, ತಂತ್ರಜ್ಞಾನ ಪ್ರಭಾವದಿಂದ ಈಗಿನ ಮಕ್ಕಳು ವೀಡಿಯೋ ಗೇಮ್ನಲ್ಲಿ ಹೆಚ್ಚಿನ ಕಾಲ ಕಳೆಯುತ್ತಿದ್ದಾರೆ. ಮೈದಾನದ ಆಟಗಳನ್ನು ಮಕ್ಕಳು ಮರೆಯುತ್ತಿದ್ದಾರೆ. ಇದರಿಂದ ಮಕ್ಕಳ ದೈಹಿಕ ಮತ್ತು ಮಾನಸಿಕ ದೃಢತೆ ಕುಗ್ಗುತ್ತಿದೆ. ಶಿಸ್ತು ಹಾಗೂ ಸ್ವಯಂ ರಕ್ಷಣೆಗಾಗಿ ಮಕ್ಕಳು ಕರಾಟೆ ಕಲಿಯುವುದು ಅಗತ್ಯ ಎಂದರು. ಎರಡು ದಿನಗಳ ಈ ಕರಾಟೆ ಪಂದ್ಯಾವಳಿಯಲ್ಲಿ ಕೇರಳ, ತಮಿಳುನಾಡು, ಆಂಧ್ರಪ್ರದೇಶ ಹಾಗೂ ಕರ್ನಾಟಕದ ಪ್ರಾಥಮಿಕ ಮತ್ತು ಪ್ರೌಢಶಾಲಾ ವಿದ್ಯಾರ್ಥಿಗಳು ಪಾಲ್ಗೊಂಡಿದ್ದಾರೆ.
ಪತ್ರಿಕೋದ್ಯಮಿ ರಾಜಶೇಖರ ಕೋಟಿ ಅಧ್ಯಕ್ಷತೆ ವಹಿಸಿದ್ದರು. ಶಾಸಕ ವಾಸು, ಸಿಐಐಎಲ್ನ ದಕ್ಷಿಣ ಪ್ರಾದೇಶಿಕ ಭಾಷಾ ಕೇಂದ್ರದ ಪ್ರಾಂಶುಪಾಲ ಡಾ.ಜಿ. ಪ್ರಭಾಕರ್, ನಗರಪಾಲಿಕೆ ಮಾಜಿ ಸದಸ್ಯ ಸುನಂದ್ಕುಮಾರ್, ಚಾಮರಾಜನಗರ ಗ್ರಾಮಾಂತರ ಸರ್ಕಲ್ ಇನ್ಸ್ಪೆಕ್ಟರ್ ಎಚ್.ಎಂ. ಮಹದೇವಪ್ಪ, ಪ್ರೆಸೆಂಟೇಷನ್ ಪಬ್ಲಿಕ್ ಶಾಲೆಯ ಪ್ರಾಂಶುಪಾಲ ರೋಷಿ ಜೋಷೆಫ್, ಸಂಘಟನಾ ಸಮಿತಿ ಕಾರ್ಯದರ್ಶಿ ಟಿ.ಕೆ. ಸುಕುಮಾರನ್, ಒಕಿನೋವಾ ಕರಾಟೆ ಸಂಸ್ಥೆಯ ಮುಖ್ಯಸ್ಥ ಎಸ್. ಸುನಿಲ್ಕುಮಾರ್ ಇದ್ದರು.