ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಕೇಂದ್ರ, ರಾಜ್ಯ ಸರ್ಕಾರಗಳ ವಿರುದ್ಧ ಜೆಡಿಎಸ್ ಧರಣಿ

Vishwanath S
Updated On : 12 Jan 2014, 1:19 am

ಮೈಸೂರು: ಕೇಂದ್ರದ ಯುಪಿಎ ಹಾಗೂ ರಾಜ್ಯದ ಕಾಂಗ್ರೆಸ್ ಸರ್ಕಾರಗಳ ವಿರುದ್ಧ ಜೆಡಿಎಸ್ ಮುಖಂಡರು ಹಾಗೂ ಕಾರ್ಯಕರ್ತರು ನಗರದ ಗಾಂಧಿ ಚೌಕದಲ್ಲಿ ಶನಿವಾರ ಪ್ರತಿಭಟಿಸಿದರು.
ಈ ಎರಡು ಸರ್ಕಾರಗಳು ಬಡವರ ಹಾಗೂ ಮಧ್ಯಮ ವರ್ಗದ ಜನರ ಸಮಸ್ಯೆಗಳನ್ನು ಪರಿಹರಿಸುವಲ್ಲಿ ವಿಫಲವಾಗಿವೆ. ಸಾಮಾನ್ಯ ಜನರು ಬಳಸುವ ಅಡುಗೆ ಅನಿಲ, ಪೆಟ್ರೋಲ್, ಡೀಸೆಲ್, ಸೀಮೆಎಣ್ಣೆ ಹಾಗೂ ಆಹಾರ ಪದಾರ್ಥಗಳ ದರವನ್ನು 15 ದಿನಕ್ಕೊಮ್ಮೆ ಏರಿಸುತ್ತಿವೆ. ಇದರಿಂದ ಜನಸಾಮಾನ್ಯರ ಜೀವನ ನಡೆಸುವುದು ದುಸ್ತರವಾಗಿದೆ ಎಂದು ಅವರು ಆರೋಪಿಸಿದರು.
ಜನ ಸಾಮಾನ್ಯರು ಮನೆ ಕಟ್ಟಲು ಮರಳು ಸುಲಭವಾಗಿ ಸಿಗುತ್ತಿಲ್ಲ. ಮರಳಿಗೆ ದುಪ್ಪಟ ಹಣ ನೀಡಬೇಕಾಗಿದೆ. ಇದನ್ನು ತಪ್ಪಿಸಲು ರಾಜ್ಯ ಸರ್ಕಾರವು ರಿಯಾಯಿತಿ ದರದಲ್ಲಿ ಮರಳು ಸಿಗುವಂತೆ ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದರು.
ಕೇಂದ್ರ ಸರ್ಕಾರವು ಮೊದಲಿನಂತೆ ವರ್ಷಕ್ಕೆ 12 ಸಿಲಿಂಡರ್‌ಗಳನ್ನು ರಿಯಾಯಿತಿ ದರದಲ್ಲಿ ನೀಡಬೇಕು. ಅಡುಗೆ ಅನಿಲ, ಇಂಧನ ಬೆಲೆ ದರವನ್ನು ಕೂಡಲೇ ಇಳಿಸಬೇಕು ಎಂದು ಅವರು ಒತ್ತಾಯಿಸಿದರು. ಇದೇ ವೇಳೆ ಗಾಂಧಿ ಚೌಕದ ಒಂದು ಭಾಗದಲ್ಲಿ ಜೆಡಿಎಸ್ ಮಹಿಳಾ ಕಾರ್ಯಕರ್ತರು ಸೌದೆ ಒಲೆಯಲ್ಲಿ ಅಡುಗೆ ತಯಾರಿಸುವ ಮೂಲಕ ಅಡುಗೆ ಅನಿಲ ದರ ಏರಿಕೆಯನ್ನು ಖಂಡಿಸಿದರು. ಮಧ್ಯ ಪ್ರವೇಶಿಸಿದ ಪೊಲೀಸರು ಅಡುಗೆ ತಯಾರಿಸಲು ತಂದಿದ್ದ ಸಾಮಗ್ರಿಗಳನ್ನು ತೆರವುಗೊಳಿಸಿದರು.
ಜೆಡಿಎಸ್ ನಗರಾಧ್ಯಕ್ಷ ರಾಜಣ್ಣ, ಶಾಸಕ ಹಾಗೂ ಜಿಲ್ಲಾಧ್ಯಕ್ಷ ಎಸ್. ಚಿಕ್ಕಮಾದು, ನಗರಪಾಲಿಕೆ ಸದಸ್ಯರಾದ ಕೆ.ಟಿ. ಚೆಲುವೇಗೌಡ, ಎಂ.ಜೆ. ರವಿಕುಮಾರ್, ಆರ್. ಲಿಂಗಪ್ಪ, ಬಿ.ಎಂ. ನಟರಾಜು, ಮುಖಂಡರಾದ ಎಸ್.ಬಿ.ಎಂ. ಮಂಜು, ಸುಶೀಲಾ, ರಿಜ್ವಾನ್ ಅಹಮದ್, ಕೆ.ಹೇಮಾವತಿ, ದಾಕ್ಷಾಯಣಿ, ರಾಜಮ್ಮ, ಶಾಂತಮ್ಮ, ಹೊನ್ನಪ್ಪಚಾರ್, ಬೋರೇಗೌಡ, ಪ್ರೇಮ ಶಂಕರೇಗೌಡ, ಸುಮಿತ್ರಾ, ಶಿವಣ್ಣ, ಅನಸೂಯ, ರಾಮಣ್ಣ, ಕೆ. ಸಿದ್ದರಾಜು, ಡಿ.ಜಿ. ಹೇಮಂತ್‌ಕುಮಾರ್, ಬಾಬು, ರವಿಚಂದ್ರೇಗೌಡ, ಚಿಕ್ಕತಾಯಮ್ಮ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement