ಚಾಮರಾಜನಗರಕ್ಕೆ ಪ್ರತ್ಯೇಕ ಡಿಸಿಸಿ ಬ್ಯಾಂಕ್
ಮೈಸೂರು: ಮೈಸೂರಿನಿಂದ ಚಾಮರಾಜನಗರ ಜಿಲ್ಲೆ ಪ್ರತ್ಯೇಕವಾಗಿ ಸುಮಾರು 17 ವರ್ಷಗಳು ಸಂದಿವೆ. ಈವರೆಗೆ ಹಾಲು ಒಕ್ಕೂಟ ಹಾಗೂ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಪ್ರತ್ಯೇಕವಾಗಿರಲಿಲ್ಲ. ಇದೀಗ ಹಾಲು ಒಕ್ಕೂಟ ಪ್ರತ್ಯೇಕಕ್ಕೆ ಕಾಲ ಕೂಡಿ ಬಂದಿದೆ. ಎಲ್ಲವೂ ಅಂದುಕೊಂಡಂತೆ ಆದಲ್ಲಿ ಮುಂದಿನ ವರ್ಷದ ವೇಳೆಗೆ ಡಿಸಿಸಿ ಬ್ಯಾಂಕ್ ಕೂಡ ಪ್ರತ್ಯೇಕವಾಗಲಿದೆ.
ಚಾಮರಾಜನಗರ ಜಿಲ್ಲಾ ಉಸ್ತುವಾರಿ ಸಚಿವರೂ ಆದ ಸಹಕಾರ ಸಚಿವ ಎಚ್.ಎಸ್. ಮಹದೇವಪ್ರಸಾದ್ ಶನಿವಾರ 'ಕನ್ನಡಪ್ರಭ'ಕ್ಕೆ ಈ ವಿಷಯ ತಿಳಿಸಿದರು.
ಮೈಸೂರು- ಚಾಮರಾಜನಗರ ಜಿಲ್ಲಾ ಹಾಲು ಉತ್ಪಾದಕರ ಸಹಕಾರ ಸಂಘಗಳ ಒಕ್ಕೂಟ (ಮೈಮುಲ್) ವಿಭಜಿಸಿ, ಚಾಮರಾಜನಗರ ಜಿಲ್ಲಾ ಹಾಲು ಉತ್ಪಾದಕರ ಸಹಕಾರ ಸಂಘಗಳ ಒಕ್ಕೂಟ (ಚಾಮುಲ್) ರಚಿಸಲು ಕಳೆದ ವಾರ ಸಚಿವ ಸಂಪುಟ ಒಪ್ಪಿಗೆ ನೀಡಿದೆ. ಮೈಸೂರು ಜಿಲ್ಲೆಯವರೇ ಆದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇದಕ್ಕಾಗಿ 13 ಕೋಟಿ ಮಂಜೂರು ಮಾಡಿದ್ದಾರೆ. ಚಾಮರಾಜನಗರ ತಾಲೂಕು ಮಂಗಲ ಗ್ರಾಮದ ಬಳಿ ಚಾಮುಲ್ ತಲೆ ಎತ್ತಲಿದೆ. ಮೈಮುಲ್ ವ್ಯಾಪ್ತಿಯಲ್ಲಿರುವ ಚಾಮರಾಜನಗರ ಜಿಲ್ಲೆಯ ಹಾಲು ಉತ್ಪಾದಕರ ಸಂಘಗಳು, ಅವುಗಳ ಆಸ್ತಿಗಳು ಚಾಮುಲ್ ವ್ಯಾಪ್ತಿಗೆ ಸೇರ್ಪಡೆಯಾಗಲಿವೆ.
ಹಾಲು ಉತ್ಪಾದಕರ ಸಹಕಾರ ಸಂಘಗಳ ಒಕ್ಕೂಟದ ವಿಭಜನೆಯಂತೆ ಡಿಸಿಸಿ ಬ್ಯಾಂಕ್ ವಿಭಜನೆಗೂ ಬಹಳ ದಿನಗಳಿಂದ ಬೇಡಿಕೆ ಇತ್ತು. ಆದರೆ ಈಗ ಚಾಮರಾಜನಗರ ಜಿಲ್ಲೆಯವರೇ ಆದ ಎಚ್.ಎಸ್. ಮಹದೇವಪ್ರಸಾದ್ ಅವರು ಸಹಕಾರ ಸಚಿವರಾಗಿರುವುದರಿಂದ ಕಾಲಕೂಡಿ ಬಂದಿದೆ.
ಬ್ಯಾಂಕ್ ವಿಭಜನೆಯಾಗಬೇಕಾದರೆ ಭಾರತೀಯ ರಿಸರ್ವ್ ಬ್ಯಾಂಕ್ನ ಸಮ್ಮತಿ ಬೇಕು. ಠೇವಣಿ, ವಹಿವಾಟು, ಆಸ್ತಿಪಾಸ್ತಿ ತೋರಿಸಬೇಕು. ಈ ಸಂಬಂಧ ಅಧ್ಯಯನ ನಡೆಸಿ, ವರದಿ ನೀಡಲು ಸಮಿತಿಯೊಂದನ್ನು ರಚಿಸಲಾಗಿದೆ. ಆ ಸಮಿತಿಯ ವರದಿ ಬಂದ ನಂತರ, ಡಿಸಿಸಿ ಬ್ಯಾಂಕ್ ವಿಭಜಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಮಹದೇವಪ್ರಸಾದ್ ಹೇಳಿದರು.
ಅಲ್ಲದೇ ಪ್ರತಿ ಗ್ರಾಪಂಗೆ ಒಂದು ಸಹಕಾರ ಸಂಘ ಇರಬೇಕು ಎಂಬುದು ನಮ್ಮ ಸರ್ಕಾರದ ನಿಲುವು. ಚಾಮರಾಜನಗರ ಜಿಲ್ಲೆಯಲ್ಲಿ 120 ಗ್ರಾಪಂಗಳಿದ್ದು, ಸದ್ಯ 80 ಸಹಕಾರ ಸಂಘಗಳಿವೆ. ಇನ್ನೂ 30-40 ಸಹಕಾರ ಸಂಘಗಳ ಸ್ಥಾಪನೆಗೆ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಅವರು ತಿಳಿಸಿದರು.
ಕೈವಾಡ ಇಲ್ಲ
ಡಿಸಿಸಿ ಬ್ಯಾಂಕ್ ಅಧ್ಯಕ್ಷ- ಉಪಾಧ್ಯಕ್ಷರ ಚುನಾವಣೆಯಲ್ಲಿ ತಮ್ಮ ಕೈವಾಡ ಏನೂ ಇಲ್ಲ ಎಂದು ಮಹದೇವಪ್ರಸಾದ್ ಸ್ಪಷ್ಟಪಡಿಸಿದರು.
ಸಹಕಾರ ಸಂಘದ ಚುನಾವಣೆಗಳು ಪಕ್ಷದ ಆಧಾರದ ಮೇಲೆ ನಡೆಯುವುದಿಲ್ಲ. ಹೀಗಾಗಿ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಇಬ್ಬರೂ ಕಾಂಗ್ರೆಸ್ ಪಕ್ಷದವರೇ. ಒಬ್ಬರು ಗೆದ್ದರು. ಮತ್ತೊಬ್ಬರು ಸೋತರು. ಗೆದ್ದವರಿಗೆ ಜೆಡಿಎಸ್ನ ಮೂವರು ಬೆಂಬಲ ನೀಡಿದ್ದರೆ, ಸೋತವರಿಗೂ ಜೆಡಿಎಸ್ನ ಒಬ್ಬರು ಬೆಂಬಲ ನೀಡಿದ್ದರು. ನಾನು ಚಾಮರಾಜನಗರ ಜಿಲ್ಲೆಯ ಪ್ರತಿನಿಧಿಸುತ್ತಿದ್ದು, ಆ ಜಿಲ್ಲೆಯವರಿಗೂ ಅಧ್ಯಕ್ಷ ಸ್ಥಾನ ಸಿಗಬೇಕು ಎಂಬುದು ನನ್ನ ಉದ್ದೇಶವಾಗಿತ್ತು. ಮುಖ್ಯಮಂತ್ರಿ ಕೂಡ ಈ ಚುನಾವಣೆ ಪಕ್ಷಾತೀತವಾಗಿ ನಡೆಯಲಿ ಎಂಬ ಆಶಯ ಹೊಂದಿದ್ದರು. ಹೀಗಾಗಿ ಹೆಚ್ಚು ನಿರ್ದೇಶಕರ ಬೆಂಬಲವಿದ್ದ ಹನೂರು ಶಾಸಕ ಆರ್. ನರೇಂದ್ರ ಅವರು ಅಧ್ಯಕ್ಷರಾಗಿ ಆಯ್ಕೆಯಾದರು ಎಂದರು. ಅದೇ ರೀತಿ ಅಪೆಕ್ಸ್ ಬ್ಯಾಂಕ್ನಿಂದ ಬಿ.ವಿ. ಶೇಷಾದ್ರಿ ಅವರನ್ನು ನಾಮನಿರ್ದೇಶನ ಮಾಡಲಾಗಿತ್ತು. ನಂತರ ಆ ಸ್ಥಾನದಲ್ಲಿ ವೈ.ಎನ್. ಶಂಕರೇಗೌಡ ಅವರನ್ನು ನಾಮನಿರ್ದೇಶನ ಮಾಡಲಾಗಿತ್ತು. ನಿರ್ದೇಶಕರಲ್ಲದವರನ್ನು ಅಪೆಕ್ಸ್ ಬ್ಯಾಂಕ್ ಪ್ರತಿನಿಧಿಯಾಗಿ ಕಳುಹಿಸಬಾರದು ಎಂಬ ನಿಯಮದ ಆಧಾರದ ಮೇಲೆ ರಾಜ್ಯದ ಎಲ್ಲಾ ಡಿಸಿಸಿ ಬ್ಯಾಂಕ್ ಬ್ಯಾಂಕ್ಗಳಲ್ಲೂ ಅಪೆಕ್ಸ್ ಬ್ಯಾಂಕ್ ಪ್ರತಿನಿಧಿಗಳ ನಾಮನಿರ್ದೇಶನ ಹಿಂಪಡೆಯಲಾಗಿದೆ. ಅದೇ ರೀತಿ ಮೈಸೂರು- ಚಾಮರಾಜನಗರ ಡಿಸಿಸಿ ಬ್ಯಾಂಕ್ನಿಂದ ವೈ.ಎನ್. ಶಂಕರೇಗೌಡರ ನಾಮನಿರ್ದೇಶನ ವಾಪಸ್ ಪಡೆಯಲಾಗಿದೆ. ಹೀಗಿರುವಾಗ ತಮ್ಮ ಪಾತ್ರ ಬರುವುದಿಲ್ಲ. ಅಲ್ಲದೇ ಶಂಕರೇಗೌಡರ ನಾಮನಿರ್ದೇಶನ ಇಲ್ಲದಿದ್ದರೂ ಹೆಚ್ಚು ನಿರ್ದೇಶಕರ ಬೆಂಬಲವಿದ್ದ ನರೇಂದ್ರ ಅವರೇ ಅಧ್ಯಕ್ಷ ಸ್ಥಾನಕ್ಕೆ ಆಯ್ಕೆಯಾಗುತ್ತಿದ್ದರು ಎಂದು ಅವರು ಹೇಳಿದರು.
ಸಮತೋಲನ ಇರಲಿಲ್ಲ
ಮೈಸೂರು ಜಿಲ್ಲೆ 7 ತಾಲೂಕುಗಳನ್ನು ಒಳಗೊಂಡ ದೊಡ್ಡ ಜಿಲ್ಲೆ. ಚಾಮರಾಜನಗರ 4 ತಾಲೂಕುಗಳನ್ನು ಒಳಗೊಂಡ ಚಿಕ್ಕ ಜಿಲ್ಲೆ. ಮುಂದೆ ಕೊಳ್ಳೇಗಾಲ ತಾಲೂಕು ಹನೂರು ಕೂಡ ತಾಲೂಕು ಕೇಂದ್ರವಾಗುವ ಸಾಧ್ಯತೆ ಇದೆ. ಡಿಸಿಸಿ ಬ್ಯಾಂಕ್ ಸಾಲ ನೀಡುವಾಗ ಮೂರನೇ ಎರಡರಷ್ಟನ್ನು ಮೈಸೂರು ಜಿಲ್ಲೆಗೆ ನೀಡಿದರೆ, ಮೂರನೇ ಒಂದರಷ್ಟನ್ನು ಚಾಮರಾಜನಗರ ಜಿಲ್ಲೆಗೆ ನೀಡಬೇಕಿತ್ತು. ಅಂದರೆ 300 ಕೋಟಿ ಸಾಲ ನೀಡಿದರೆ ಚಾಮರಾಜನಗರ ಜಿಲ್ಲೆಗೆ 100 ಕೋಟಿ ನೀಡಬೇಕಿತ್ತು. ಈವರೆಗೆ ಈ ಅನುಪಾತ ಕಂಡು ಬಂದಿರಲಿಲ್ಲ. ಈಗ ಉಭಯ ಜಿಲ್ಲೆಗಳ ನಡುವೆ ಸಮತೋಲನ ಕಾಯ್ದುಕೊಳ್ಳುವಂತೆ ಸೂಚಿಸಲಾಗಿದೆ. ವಿಭಜನೆಗೆ ಸಾಲ, ವಹಿವಾಟು, ಮರುಪಾವತಿ ಎಲ್ಲಾ ಅಂಶಗಳು ಕೂಡ ಕಾರಣವಾಗುತ್ತವೆ.
-ಅಂಶಿ ಪ್ರಸನ್ನಕುಮಾರ್