ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ನಮೋ ವೆಂಕಟೇಶ, ನಮೋ ತಿರುಮಲೇಶ...

Vishwanath S
Updated On : 12 Jan 2014, 1:18 am

ಮೈಸೂರು: ಧನುರ್ಮಾಸದ ಏಕಾದಶಿಯಂದು ವೆಂಕಟೇಶ್ವರ ದೇವಾಲಯಗಳಲ್ಲಿನ ಉತ್ತರ ದ್ವಾರವನ್ನು ಪ್ರವೇಶಿಸಿದರೆ ಮುಕ್ತಿ ಪ್ರಾಪ್ತಿಯಾಗಲಿದೆ ಎಂಬ ಪ್ರತೀತಿ ಹಿನ್ನೆಲೆಯಲ್ಲಿ ವಿವಿಧ ದೇವಾಲಯಗಳಲ್ಲಿ ವೈಕುಂಠ ಏಕಾದಶಿಯನ್ನು ಶನಿವಾರ ಶ್ರದ್ಧಾ, ಭಕ್ತಿಗಳಿಂದ ಆಚರಿಸಲಾಯಿತು.
ಚಿಕ್ಕತಿರುಪತಿ ಎಂದೇ ಪ್ರಸಿದ್ಧಿಯಾಗಿರುವ ವಿವಿ ಮೊಹಲ್ಲಾದ ಶ್ರೀಲಕ್ಷ್ಮೀ ವೆಂಕಟರಮಣಸ್ವಾಮಿ ದೇವಸ್ಥಾನದಲ್ಲಿ ವೈಕುಂಠ ಏಕಾದಶಿ ಪ್ರಯುಕ್ತ ದೇವರಿಗೆ ವಿಶೇಷ ಪೂಜೆ, ಅಭಿಷೇಕ ಹಾಗೂ ಅಲಂಕಾರ ನಡೆಯಿತು. ದೇವಾಲಯವು ಹೂವಿನಿಂದ ಕಂಗೊಳಿಸುತ್ತಿತ್ತು. ಉತ್ತರ ದ್ವಾರ ದರ್ಶನಕ್ಕಾಗಿ ಬೆಳಗ್ಗೆಯಿಂದಲೇ ಅಪಾರ ಸಂಖ್ಯೆಯಲ್ಲಿ ಭಕ್ತರು ಸೇರಿದ್ದು ಕಂಡುಬಂತು. ಸರತಿಯಲ್ಲಿ ನಿಂತು ದೇವರ ದರ್ಶನ ಪಡೆದ ಜನರು, ವರ್ಷಕ್ಕೊಮ್ಮೆ ತೆರೆಯುವ ಸ್ವರ್ಗದ ಬಾಗಿಲು (ಉತ್ತರ ದ್ವಾರವನ್ನು) ಪ್ರವೇಶಿಸಿ ಪುನೀತರಾದರು.
ಮೈಸೂರು ಊಟಿ ರಸ್ತೆಯಲ್ಲಿರುವ ದತ್ತ ವೆಂಕಟೇಶ್ವರ ದೇವಾಲಯದಲ್ಲಿ ವೈಕುಂಠ ಏಕಾದಶಿ ಅಂಗವಾಗಿ ವಿಶೇಷ ಅಭಿಷೇಕ ಹಾಗೂ ಪೂಜೆ ನಡೆಯಿತು. ಹೆಚ್ಚಿನ ಭಕ್ತರು ಬೆಳಗ್ಗಿನಿಂದಲೇ ಆಗಮಿಸಿ ಉತ್ತರ ದ್ವಾರದ ದರ್ಶನ ಪಡೆದರು.
ಭಕ್ತರಿಂದ ಭಜನೆ: ಮೇಟಗಳ್ಳಿಯ ಕೆಆರ್‌ಎಸ್ ರಸ್ತೆಯ ಮಾರಮ್ಮ ದೇವಸ್ಥಾನದ ಹತ್ತಿರ ಇರುವ ಶ್ರೀಲಕ್ಷ್ಮೀ ವೆಂಕಟೇಶ್ವರಸ್ವಾಮಿ ದೇವಸ್ಥಾನ ಟ್ರಸ್ಟ್ ವತಿಯಿಂದ ಸ್ವಾಮಿಗೆ ಹಾಗೂ ಅಮ್ಮನವರಿಗೆ ವಿಶೇಷ ಅಲಂಕಾರ ಹಾಗೂ ಪೂಜೆ ನಡೆಯಿತು. ಭಕ್ತರು ಭಜನಾ ಕಾರ್ಯಕ್ರಮ ನಡೆಸಿಕೊಟ್ಟರು. ಸಮಿತಿ ಅಧ್ಯಕ್ಷ ಟಿ. ಜಯರಾಮು, ಉಪಾಧ್ಯಕ್ಷ ಚಿಕ್ಕತಮ್ಮೇಗೌಡ, ಚಿಕ್ಕರಾಮು ಕಾರ್ಯದರ್ಶಿ ಎಂ.ವಿ. ರಾಮಚಂದ್ರ ಇದ್ದರು. ಸಯ್ಯಾಜಿರಾವ್ ರಸ್ತೆಯ ಅಶ್ವತ್ಥನಾರಾಯಣ ದೇವಸ್ಥಾನ ಟ್ರಸ್ಟ್ ವತಿಯಿಂದ ಸತ್ಯನಾರಾಯಣ ದೇವಸ್ಥಾನದಲ್ಲಿ ಏಕಾದಶಿ ಪ್ರಯುಕ್ತ ಸುಪ್ರಭಾತ ಸೇವೆ, ಪುಷ್ಪಲಂಕಾರ, ಮಹಾರಾಧನೆ, ತಿರುಪ್ಪಾವೈ ಸೇವೆ ನಡೆಸಲಾಯಿತು. ವೈಕುಂಠದ್ವಾರದಲ್ಲಿ ಮಂತ್ರ ಪುಷ್ಪ ಹಾಗೂ ಮಹಾನಿವೇದನೆ ಅರ್ಪಿಸಲಾಯಿತು. ಭೂನೀಳಾ ಸಮೇತ ಸ್ವಾಮಿಗೆ ವಜ್ರಕವಚ ಅಲಂಕಾರ ಮಾಡಲಾಯಿತು. ನಂತರ ಪ್ರಮುಖ ಬೀದಿಗಳಲ್ಲಿ ಉತ್ಸವ ನಡೆಯಿತು.
ವಿವೇಕಾನಂದನಗರ ಬ್ರಾಹ್ಮಣ ಮಹಾಸಭಾ ವತಿಯಿಂದ ಶ್ರೀರಾಮಪುರದ ಎಸ್‌ಬಿಎಂ ಕಾಲೋನಿಯಲ್ಲಿರುವ ಲಕ್ಷ್ಮೀನರಸಿಂಹಸ್ವಾಮಿ ದೇವಸ್ಥಾನದ ಪ್ರಾರ್ಥನಾ ಮಂದಿರದಲ್ಲಿ ವೈಕುಂಠ ಏಕಾದಶಿ ಪ್ರಯುಕ್ತ ವಿಶೇಷ ಪೂಜೆ ಹಾಗೂ ಅಲಂಕಾರ ನಡೆಯಿತು. ಸ್ವರ್ಗದ ಬಾಗಿಲು ಪ್ರತಿಷ್ಠಾಪಿಸಿ ಭಕ್ತರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಭಜನೆ ಹಾಗೂ ನಾಮ ಸಂಕೀರ್ತನೆಗಳು ನಡೆಯಿತಲ್ಲದೆ ಶ್ರೀನಿವಾಸ ಕಲ್ಯಾಣ ಗೀತ ರೂಪಕ ಸಾದರ ಪಡಿಸಲಾಯಿತು. ಸಭಾದ ಅಧ್ಯಕ್ಷ ಜಯರಾಮ ಮತ್ತು ಪದಾಧಿಕಾರಿಗಳು ಭಾಗವಹಿಸಿದ್ದರು.
ನರಸಿಂಹರಾಜ ಮೊಹಲ್ಲಾದ ರಜಪೂತ್ ಬ್ಲಾಕ್‌ನಲ್ಲಿರುವ ವೆಂಕಟರಮಣಸ್ವಾಮಿ ದೇವಸ್ಥಾನ ಟ್ರಸ್ಟ್ ವತಿಯಿಂದ ವೈಕುಂಠ ಏಕಾದಶಿಯ ಅಂಗವಾಗಿ ವಿಶೇಷ ಪೂಜೆ ನಡೆಯಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement