ಧರ್ಮಸ್ಥಳ ಯೋಜನೆ ಬಡವರ ಆಶಾಕಿರಣ
ಹುಣಸೂರು: ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಕೃಷಿಕರು, ಮಹಿಳೆಯರು, ಸಣ್ಣ-ಪುಟ್ಟ ವ್ಯಾಪಾರಸ್ಥರು, ವಿದ್ಯಾರ್ಥಿಗಳಿಗೆ ಆಶಾಕಿರಣವಾಗಿದೆ ಎಂದು ಎಂಡಿಸಿಸಿ ಬ್ಯಾಂಕ್‌ನ ನಿರ್ದೇಶಕ ಹರೀಶ್‌ಗೌಡ ಶ್ಲಾಘಿಸಿದರು.
ತಾಲೂಕಿನ ಕಸಬಾ ವಲಯದ ಬನ್ನಿಕುಪ್ಪೆ ಕಾರ್ಯ ಕ್ಷೇತ್ರದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಪ್ರಗತಿಬಂಧು ಸ್ವಸಹಾಯ ಸಂಘಗಳ ಒಕ್ಕೂಟ ಉದ್ಘಾಟಿಸಿ ಮಾತನಾಡಿ, ಯೋಜನೆ ವತಿಯಿಂದ ಶ್ರೀಕ್ಷೇತ್ರದ ಶ್ರೀವೀರೇಂದ್ರ ಹೆಗ್ಗಡೆ ಅವರ ಆಶಯದಂತೆ ಕುಡಿತದ ಚಟ ಬಿಡಿಸುವ, ವಿದ್ಯಾರ್ಥಿಗಳಲ್ಲಿ ಮೂಢನಂಬಿಕೆ ಹೋಗಲಾಡಿಸುವ, ಸ್ವಾಸ್ಥ್ಯ ಸಂಕಲ್ಪದಂತಹ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ. ಸಮಯ ಪ್ರಜ್ಞೆ, ನಾಯಕತ್ವ ರೂಪಿಸಿ ಕೊಡುವ ಇದು ಸಮಾಜದ ಒಳಿತಿನ ಕಾರ್ಯಕ್ರಮ ಎಂದರು.
ಗ್ರಾಪಂ ಅಧ್ಯಕ್ಷೆ ಸಣ್ಣಮ್ಮ ಯೋಜನೆ ವತಿಯಿಂದ ಪುಷ್ಪ ಕೃಷಿ ನಾಟಿ ಮಾಡಿದ 15 ಕುಟುಂಬಕ್ಕೆ ತಲಾ 1,000 ಅನುದಾನ ನೀಡಿದರು. ಸತ್ಯ ಎಂಎಎಸ್ ಫೌಂಡೇಷನ್ ಅಧ್ಯಕ್ಷ ಸತ್ಯಪ್ಪ ಮಾತನಾಡಿದರು. ಜಿಪಂ ಸದಸ್ಯ ರಮೇಶ, ತಾಪಂ ಸದಸ್ಯ ಪ್ರಸನ್ನ ಕುಮಾರ್, ಗುಂಪು ಲೆಕ್ಕ ಪರಿಶೋಧನಾಧಿಕಾರಿ ಕುಶಾಲಪ್ಪ, ತಾಲೂಕು ಯೋಜನಾಧಿಕಾರಿ ಎಂ ರಾಮು, ವಲಯ ಮೇಲ್ವಿಚಾರಕ ಪ್ರಶಾಂತ್, ಸೇವಾ ಪ್ರತಿನಿಧಿಗಳಾದ ಕಾಂತರಾಜು, ಇಂದ್ರಮ್ಮ, ಒಕ್ಕೂಟದ ಪದಾಧಿಕಾರಿಗಳು ಇದ್ದರು.