ಮಲಿನ ನೀರು ತಡೆಗೆ ಸಲಹೆ
ಕುಕ್ಕರಹಳ್ಳಿ ಕೆರೆ ಹಾಗೂ ಕಾರಂಜಿ ಕೆರೆಗೆ ಹರಿಯುತ್ತಿರುವ ಮಲಿನ ನೀರು ತಡೆಗಟ್ಟಲು ಕಾಮಗಾರಿ ಸಮರ್ಪಕವಾಗಿ ನಡೆಯಬೇಕಾದರೆ ಸಲಹಾ ಸಮಿತಿ ರಚಿಸಬೇಕು. ಒಂದು ವೇಳೆ ಕಾಮಗಾರಿಯಲ್ಲಿ ಲೋಪಗಳು ಕಂಡು ಬಂದರೆ ತಜ್ಞರ ಅನುಭವದ ಮಾರ್ಗದರ್ಶನದಿಂದ ಅದನ್ನು ಸರಿಪಡಿಸಲು ಸಾಧ್ಯ. ಆದ್ದರಿಂದ ಮೈಸೂರು ನಗರ ಪಾಲಿಕೆ ಆಯುಕ್ತರು ಈ ಸಲಹೆ ಪರಿಗಣಿಸಿ ಸಲಹಾ ಸಮಿತಿ ರಚಿಸಲಿ.
ಕೆ.ಎಂ. ಜಯರಾಮಯ್ಯ, ಸಂಚಾಲಕ, ಕುಕ್ಕರಹಳ್ಳಿಕೆರೆ ಸಂರಕ್ಷಣಾ ಸಮಿತಿ
ಕಾಮಗಾರಿ ಆರಂಭ: ಕೃತಜ್ಞತೆ
ಮೈಸೂರಿನ ಪ್ರತಿಷ್ಠಿತ ಬಡಾವಣೆ ಕುವೆಂಪುನಗರದ ಉದಯರವಿ ರಸ್ತೆ ಸೇತುವೆ ದುರಸ್ತಿ ಬಗ್ಗೆ ಕನ್ನಡಪ್ರಭದ ಪೌರ ಸಮಸ್ಯೆಗಳ ವಿಭಾಗಕ್ಕೆ ಪತ್ರ ಬರೆಯಲಾಗಿತ್ತು. ಇದಕ್ಕೆ ಸ್ಪಂದಿಸಿರುವ ಅಧಿಕಾರಿಗಳು ಈ ರಸ್ತೆ ಸೇತುವೆ ಕಾಮಗಾರಿಯನ್ನು ಆರಂಭಿಸಿದ್ದು, ಇದಕ್ಕಾಗಿ ಕನ್ನಡಪ್ರಭಕ್ಕೆ ನಾಗರಿಕರ ಪರವಾಗಿ ಕೃತಜ್ಞತೆಗಳು.
ಪಿ.ಜೆ. ರಾಘವೇಂದ್ರ, ವಕೀಲರು, ಮೈಸೂರು
ನಿರ್ವಹಣೆ ಇಲ್ಲದೆ ನಾರುತ್ತಿರುವ ಶೌಚಾಲಯ
ಪಿರಿಯಾಪಟ್ಟಣ ತಾಲೂಕಿನ ಹೋಬಳಿ ಕೇಂದ್ರವೆನಿಸಿದ ರಾವಂದೂರಿನಲ್ಲಿ ಕೆಎಸ್‌ಆರ್‌ಟಿಸಿ ವತಿಯಿಂದ 30 ಲಕ್ಷ ವೆಚ್ಚದಲ್ಲಿ ಸುಸಜ್ಜಿತ ಬಸ್ ನಿಲ್ದಾಣ ನಿರ್ಮಿಸಲಾಗಿದ್ದು, ಇಲ್ಲಿನ ಶೌಚಾಲಯ ನಿರ್ವಾಹಕರಿಲ್ಲದೆ ಗುಬ್ಬು ನಾರುತ್ತಿದೆ. ಈ ಬಸ್ ನಿಲ್ದಾಣದಲ್ಲಿ ಸ್ವಚ್ಛತೆ ನಿರ್ವಹಣೆ ಮಾಡಲು ಖಾಸಗಿ ಕಂಪನಿಗೆ ಗುತ್ತಿಗೆ ನೀಡಲಾಗಿದೆ. ಗುತ್ತಿಗೆದಾರರು ಸರಿಯಾಗಿ ಸ್ವಚ್ಛತಾ ಕಾರ್ಯ ಮಾಡದೆ ಇರುವುದರಿಂದ ಶೌಚಾಲಯಕ್ಕೆ ಹೋಗುವವರು ಹಾಗೂ ಬಸ್ ನಿಲ್ದಾಣದಲ್ಲಿ ಬಸ್‌ಗಾಗಿ ಕಾಯುವ ಪ್ರಯಾಣಿಕರು ಮೂಗು ಮುಚ್ಚಿ ಕೂರುವ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಬಗ್ಗೆ ಸಾರಿಗೆ ಅಧಿಕಾರಿಗಳು, ಗುತ್ತಿಗೆದಾರರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳದೆ ಇರುವುದು ಅಶ್ಚರ್ಯದ ಸಂಗತಿಯಾಗಿದೆ. ಅಲ್ಲದೆ, ಈ ಶೌಚಾಲಯದ ಗುತ್ತಿಗೆದಾರರು ಮನಬಂದಂತೆ ಬೀಗ ತೆಗೆಯುವುದು ಹಾಕುವುದು ಮಾಡುತ್ತಿದ್ದು, ಇದರಿಂದ ಸಾರ್ವಜನಿಕರಿಗೆ ಅತೀವ ಕಿರಿಕಿರಿ ಉಂಟಾಗಿದೆ. ಈ ನಿಲ್ದಾಣವು ಕೆ.ಆರ್. ನಗರ ಘಟಕ ಆಡಳಿತಕ್ಕೆ ಒಳಪಟ್ಟಿದ್ದು, ಇದರ ಕಡೆ ಯಾವುದೇ ಅಧಿಕಾರಿಗಳು ಗಮನ ಹರಿಸುತ್ತಿಲ್ಲ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಈಗಲಾದರೂ ಇತ್ತ ಗಮನಹರಿಸಿ ಅವ್ಯವಸ್ಥೆಯ ಆಗರವಾಗಿರುವ ಬಸ್ ನಿಲ್ದಾಣದ ಸಮಸ್ಯೆಗಳನ್ನು ಪರಿಹರಿಸುವವರೆ ಕಾದು ನೋಡಬೇಕಿದೆ. ಖಾಸಗಿ ಗುತ್ತಿಗೆದಾರರ ವಿರುದ್ಧ ಘಟಕ ವ್ಯವಸ್ಥಾಪಕರಿಗೆ ಹಾಗೂ ವಿಭಾಗೀಯ ಅಧಿಕಾರಿಗಳಿಗೆ ದೂರು ನೀಡಿದ್ದು, ಈ ಬಗ್ಗೆ ಮೇಲಾಧಿಕಾರಿಗಳು ಕ್ರಮ ಕೈಗೊಳ್ಳಬೇಕಾಗಿದೆ.
ಲಕ್ಕಯ್ಯ, ಸಂಚಾರಿ ನಿರೀಕ್ಷಕರು, ಸಾರಿಗೆ ಇಲಾಖೆ
ಬೋಗಾದಿಯಲ್ಲಿ ಐಸ್ ಕ್ರೀಂ ಕಾರ್ಖಾನೆ ಕಿರಿಕಿರಿ
ಬೋಗಾದಿ ಗ್ರಾಮದ ಬ್ಯಾಂಕ್ ಕಾಲೋನಿ ರಸ್ತೆಯಲ್ಲಿರುವ ಸ್ಕೈ ಎಂಬ ಹೆಸರಿನ ಐಸ್ ಕ್ರೀಂ ಕಾರ್ಖಾನೆಯಿಂದ ಅಕ್ಕಪಕ್ಕದ ನಿವಾಸಿಗಳಿಗೆ ತೊಂದರೆ ಆಗುತ್ತಿದೆ. ಈ ಸಂಬಂಧ ಅಕ್ಕಪಕ್ಕದ ನಿವಾಸಿಗಳು ಸರಸ್ವತಿಪುರಂ ಪೊಲೀಸ್ ಠಾಣೆಯಲ್ಲಿ ದೂರು ಸಹ ದಾಖಲಿಸಿದ್ದಾರೆ. ರಾಜೇಂದ್ರಪ್ಪ ಎಂಬವರ ಮಾಲೀಕತ್ವದ ನಿವೇಶನದಲ್ಲಿ ಕಲ್ನಾರ್ ಶೀಟಿನ ಶೆಡ್‌ನಲ್ಲಿ ಸ್ಕೈ ಎಂಬ ಹೆಸರಿನ ಐಸ್ ಕ್ರೀಂ ಕಂಪನಿಯನ್ನು ಸೈಯದ್ ಫಾರೂಕ್ ಎಂಬವರು ನಡೆಸುತ್ತಿದ್ದಾರೆ. ಈ ಫ್ಯಾಕ್ಟರಿಯಲ್ಲಿ ರಾತ್ರಿವೇಳೆ ವಾಹನಗಳಲ್ಲಿ ಐಸ್ ಕ್ರೀಂ ತುಂಬಿದ ಡಬ್ಬಗಳನ್ನು ಲೋಡ್ ಹಾಗೂ ಅನ್ ಲೋಡ್ ಮಾಡಲಾಗುತ್ತದೆ. ಇದರಿಂದ ಜೋರಾಗಿ ಶಬ್ದ ಬರುತ್ತಿದೆ. ಮಧ್ಯರಾತ್ರಿ 12 ರವರೆಗೆ ಕಂಪನಿಯವರು ಮೊಬೈಲ್‌ನಲ್ಲಿ ಮಾತನಾಡುವುದು ಹಾಗೂ ಹಾಡು ಕೇಳುವುದರಿಂದ ತೊಂದರೆ ಆಗುತ್ತಿದೆ. ಈ ಕಾರ್ಖಾನೆಯಲ್ಲಿ ಉತ್ಪತ್ತಿಯಾಗುವ ಕಸ, ಕೊಳೆತ ಪದಾರ್ಥಗಳನ್ನು ಅಲ್ಲಿಯೇ ಬಿಸಾಡುವುದರಿಂದ ದುರ್ವಾಸನೆ ಬರುತ್ತಿದೆ. ಇದರಿಂದ ಸೊಳ್ಳೆ, ಕ್ರಿಮಿಕೀಟಗಳು ಉತ್ಪತ್ತಿಯಾಗುತ್ತಿದ್ದು, ವಾಯುಮಾಲಿನ್ಯ, ಶಬ್ದಮಾಲಿನ್ಯ ಉಂಟಾಗುತ್ತಿದೆ. ಇದರಿಂದ ಅಕ್ಕಪಕ್ಕದವರಿಗೆ ತೊಂದರೆ ಆಗುತ್ತಿದ್ದು, ಇದನ್ನು ತಪ್ಪಿಸುವಂತೆ ನಿವಾಸಿಗಳು ಪೊಲೀಸರಿಗೆ ದೂರು ನೀಡಿದ್ದಾರೆ. ಸಾರ್ವಜನಿಕರ ದೂರಿನ ಹಿನ್ನೆಲೆಯಲ್ಲಿ ಬೋಗಾದಿ ಗ್ರಾಪಂ ಪಿಡಿಒ ಅವರು ಸಂಬಂಧಪಟ್ಟವರಿಗೆ ನೋಟಿಸ್ ಜಾರಿಗೊಳಿಸಿ, ಕಾನೂನು ಕ್ರಮ ಕೈಗೊಳ್ಳುವ ಎಚ್ಚರಿಕೆ ಸಹ ನೀಡಿದ್ದರೂ, ಕಾರ್ಖಾನೆಯು ಎಂದಿನಂತೆ ನಡೆಯುತ್ತಿದೆ.
ನಿವಾಸಿಗಳು, ಬೋಗಾದಿ ಗ್ರಾಮ