ಮೈಸೂರಿನಲ್ಲೂ ಲಾರಿ ಮುಷ್ಕರ ಆರಂಭ
ಮೈಸೂರು: ಹೊಸ ಮರಳು ನೀತಿ ವಿರೋಧಿಸಿ ಹಾಗೂ ತಮ್ಮ ವಿವಿಧ ಬೇಡಿಕೆಗಳ ಈಡೇರಿಸಲು ಆಗ್ರಹಿಸಿ ಮೈಸೂರು ನಗರ ಸ್ಥಳೀಯ ಲಾರಿ ಮಾಲೀಕರ ಸಂಘದವರು ಮುಷ್ಕರ ಆರಂಭಿಸಿದ್ದಾರೆ.
ಶನಿವಾರ ಮಧ್ಯರಾತ್ರಿಯಿಂದಲೇ ಮರಳು ಸಾಗಾಣಿಕೆಯನ್ನು ನಿಲ್ಲಿಸುವ ಮೂಲಕ ಮುಷ್ಕರ ಕೈಗೊಂಡಿರುವ ಲಾರಿ ಮಾಲೀಕರು ಮತ್ತು ಚಾಲಕರು, ತಮ್ಮ ವಿವಿಧ ಬೇಡಿಕೆಗಳನ್ನು ಸರ್ಕಾರ ಈಡೇರಿಸುವವರೆಗೂ ಅನಿರ್ದಿಷ್ಟಾವಧಿ ಮುಷ್ಕರವನ್ನು ಮುಂದುವರೆಸಲು ನಿರ್ಧರಿಸಿದ್ದಾರೆ. ಲಾರಿ, ಟ್ಯಾಂಕರ್, ಟೂರಿಸ್ಟ್ ಟ್ಯಾಕ್ಸಿ, ಮ್ಯಾಕ್ಸಿಕ್ಯಾಬ್, ಟೆಂಪೋ ಸೇರಿದಂತೆ ಎಲ್ಲ ವಾಣಿಜ್ಯ ವಾಹನ ಮಾಲೀಕರು ಈ ಮುಷ್ಕರಕ್ಕೆ ಬೆಂಬಲ ಸೂಚಿಸಿದ್ದಾರೆ. ಹಾಲು ಮತ್ತು ತರಕಾರಿ ಸಾಗಿಸುವ ವಾಹನಗಳು ಮಾತ್ರ ಯಾವುದೇ ತೊಂದರೆ ಇಲ್ಲದೆ ಸೇವೆ ನೀಡಲಿವೆ.
ಪ್ರತಿಭಟನೆ: ಹೊಸ ಮರಳು ನೀತಿಯನ್ನು ವಿರೋಧಿಸಿ ಮೈಸೂರು ನಗರ ಸ್ಥಳೀಯ ಲಾರಿ ಮಾಲೀಕರ ಸಂಘದವರು ಬೋಗಾದಿ ವರ್ತುಲ ರಸ್ತೆಯಲ್ಲಿ ಭಾನುವಾರ ಪ್ರತಿಭಟಿಸಿದರು. ಮರಳು ಲಾರಿ ಮಾಲೀಕರ ಮೇಲೆ ಮೊಕದ್ದಮೆ ದಾಖಲಿಸುವುದನ್ನು ಕೈಬಿಟ್ಟು, ದಂಡ ವಿಧಿಸಿ ಲಾರಿ ಬಿಡುಗಡೆಗೊಳಿಸಬೇಕು. ಚಾಲಕರು ಲೈಸನ್ಸ್ ಪಡೆಯಲು 8ನೇ ತರಗತಿ ಕಡ್ಡಾಯಗೊಳಿಸಿರುವುದನ್ನು ಕೈಬಿಡಬೇಕು. ಟ್ರಾನ್ಸಿಟ್ ಪಾಸ್ಗಳನ್ನು ರದ್ದುಗೊಳಿಸಬೇಕು. ಇ- ಸುಗಮ್ ಅವಧಿಯನ್ನು ಕನಿಷ್ಠ 30 ದಿನಕ್ಕೆ ವಿಸ್ತರಿಸಬೇಕು ಎಂದು ಅವರು ಆಗ್ರಹಿಸಿದರು. ಪ್ರತಿದಿನ 1 ಲಾರಿ ಒಂದು ಪರ್ಮಿಟ್ ವಿತರಿಸಬೇಕು. ಲಾರಿ ಮಾಲೀಕರಿಗೆ ನೇರವಾಗಿ ಮರಳು ಸಾಗಾಣಿಕೆಯ ಪರ್ಮಿಟ್ ನೀಡಬೇಕು. ಟಿಪ್ಪರ್ನಲ್ಲಿ ಮರಳು ಸಾಗಿಸಲು ಅವಕಾಶ ಕಲ್ಪಿಸಬೇಕು. ಮರಳು ವಾಹನಗಳ ನೋಂದಣಿ ಮುಂದುವರೆಸಬೇಕು. ನಗರದಲ್ಲಿ ಪೊಲೀಸರ ಕಿರುಕುಳ ತಪ್ಪಿಸಬೇಕು ಎಂದು ಒತ್ತಾಯಿಸಿದರು. ಸಂಘದ ಅಧ್ಯಕ್ಷ ಬಿ.ರೇವಣ್ಣ, ಉಪಾಧ್ಯಕ್ಷ ಅಬ್ದುಲ್ ಜಾವೀದ್, ಪ್ರಧಾನ ಕಾರ್ಯದರ್ಶಿ ಎಂ.ಸ್ವಾಮಿ, ಖಜಾಂಚಿ ಎಚ್.ಎಸ್.ಕೃಷ್ಣಮೂರ್ತಿ ಇದ್ದರು.