ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಶರಣರಿಂದ ಸಾಮಾಜಿಕ ಕ್ರಾಂತಿ

Vishwanath S
Updated On : 13 Jan 2014, 1:02 am

ಕ.ಪ್ರ.ವಾರ್ತೆ ,  ಮೈಸೂರು ,  ಜ. 12
ಸಮಾನತೆ ಸಮಾಜ ನಿರ್ಮಾಣ ಹಾಗೂ ಸಾಮಾಜಿಕ ಕ್ರಾಂತಿಗೆ ಶರಣರ ಕೊಡುಗೆ ಅನನ್ಯ ಎಂದು ಜಿಲ್ಲಾ ಉಸ್ತುವಾರಿ ಸಚಿವ ವಿ.ಶ್ರೀನಿವಾಸ ಪ್ರಸಾದ್ ಹೇಳಿದರು.
ನಾಗರಿಕ ವೇದಿಕೆ ಹಾಗೂ ಭಕ್ತ ವೃಂದವು ದಸರಾ ವಸ್ತು ಪ್ರದರ್ಶನದ ಪಿ.ಕಾಳಿಂಗರಾವ್ ಸಭಾಂಗಣದಲ್ಲಿ ಭಾನುವಾರ ಏರ್ಪಡಿಸಿದ್ದ ವಾಟಾಳು ಶ್ರೀ ಸೂರ್ಯ ಸಿಂಹಾಸನ ಮಠದ ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ ಗುರುವಂದನೆ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಎಲ್ಲ ಜಾತಿಯ ಶರಣರನ್ನು ಸಮಾಜಕ್ಕೆ ಕೊಟ್ಟ ಕೀರ್ತಿ ವೀರಶೈವ ಸಮಾಜಕ್ಕೆ ಸಲ್ಲಲಿದೆ. ವಿದ್ಯೆ, ಬುದ್ಧಿ ಹಾಗೂ ಅಧಿಕಾರ ಕೆಳಸ್ತರದವರಿಗೆ ದೊರಕದಿದ್ದ ಸಂದರ್ಭದಲ್ಲಿ ಹೋರಾಟ ಮಾಡಿದವರು ಅಲ್ಲಮಪ್ರಭು, ಬಸವಣ್ಣ ಮತ್ತಿತರ ಶರಣರು. ಮಡಿವಂತಿಕೆಯ ಕಪಿಮುಷ್ಟಿಯಿಂದ ಸಮಾಜವನ್ನು ವಿಮೋಚನೆಗೊಳಿಸುವಲ್ಲಿ ಬುದ್ಧ ನಡೆಸಿದ ಚಿಂತನೆಯಂತೆ, ಬಸವಣ್ಣ ಚಿಂತಿಸಿದವರು.
ಜಾತಿರಹಿತ ಸಂಘಟನೆಗೆ ಬುದ್ಧ ಮತ್ತು ಬಸವಣ್ಣ ಅವರಂತೆ ಡಾ. ಬಿ.ಆರ್.ಅಂಬೇಂಡ್ಕರ್ ಅವರು ಸಂವಿಧಾನದ ಮೂಲಕ ಸಮಾನತೆ ಕಲ್ಪಿಸಿದರು ಎಂದು ಸ್ಮರಿಸಿದರು.
ಶರಣ ಸಾಹಿತ್ಯ, ದಾಸ ಸಾಹಿತ್ಯ ಹಾಗೂ ಜನಪದ ಸಾಹಿತ್ಯ ಜನಸಾಮಾನ್ಯರ ಬಗ್ಗೆ ಚಿಂತಿಸುವ ಸಾಹಿತ್ಯ. ಬಸವಣ್ಣನವರ ವಚನಗಳು ಇತ್ತೀಚೆಗೆ ದೇಶದ ನಾನಾ ಭಾಷೆಗೆ ಅನುವಾದ ಆಗುತ್ತಿರುವುದು ಉತ್ತಮ ಬೆಳವಣಿಗೆ. ಇಂತಹ ಗುರುವಂದನಾ ಸಂದರ್ಭದಲ್ಲಿ ಶರಣರ ಚಿಂತನೆಯ ಅನುಷ್ಠಾನದ ಬಗ್ಗೆ ಆತ್ಮಾವಲೋಕನ ನಡೆಸುವ ಅಗತ್ಯವಿದೆ ಎಂದರು.  
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್, ವಾಟಾಳ್ ಮಠಕ್ಕೂ ಸುತ್ತೂರು ಮಠಕ್ಕೂ ಅವಿನಾಭಾವ ಸಂಬಂಧವಿದೆ. ಅಂತೆಯೇ ಎರಡು ಕ್ಷೇತ್ರಗಳಿಗೆ ಸೇತುವೆಯಾಗಿರುವ ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಗಳು ಮೇಧಾವಿ ರಾಜಕಾರಣಿಗಳನ್ನು ನಾಡಿಗೆ ನೀಡಿವೆ ಎಂದರು.
ಸೂರ್ಯ ಅಭಿನಂದನಾ ಗ್ರಂಥವನ್ನು ತೋಟಗಾರಿಕೆ ಸಚಿವ ಶಾಮನೂರು ಶಿವಶಂಕರಪ್ಪ ಲೋಕಾರ್ಪಣೆಗೊಳಿಸಿದರು. ಮೂಗೂರು ನಂಜುಂಡಸ್ವಾಮಿ ಅವರ ಕನ್ನಡ ಬೆಳಕು ವಿಶೇಷ ಸಂಚಿಕೆಯನ್ನು ವಾಟಾಳ್ ನಾಗರಾಜ್ ಬಿಡುಗಡೆಗೊಳಿಸಿದರು.
ಸಹಕಾರ ಸಚಿವ ಮಹದೇವ ಪ್ರಸಾದ್ ವಿಭಿನ್ನ ಸರ್ಮಥರಿಗೆ ಅರ್ಥಿಕ ನೆರವು ವಿತರಿಸಿದರು. ವಾಟಾಳು ಶ್ರೀಗಳಿಗೆ ವೇದಿಕೆ ವತಿಯಿಂದ ಗುರುವಂದನೆ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ವಿವಿಧ ಮಠಾಧೀಶರು, ಸಂಘಸಂಸ್ಥೆಗಳು ಹಾಗೂ ಭಕ್ತರು ಅಭಿನಂದಿಸಿದರು.
ಸುತ್ತೂರು ಮಠದ ಶಿವರಾತ್ರಿ ದೇಶೀಕೇಂದ್ರ ಸ್ವಾಮೀಜಿ ಹಾಗೂ ಸಿದ್ಧಗಂಗಾ ಮಠದ ಕಿರಿಯಶ್ರೀ ಸಿದ್ಧಲಿಂಗ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ದೇವನೂರು ದಾಸೋಹ ಮಠದ ಮಹಾಂತ ಸ್ವಾಮೀಜಿ ಸಮ್ಮುಖ ವಹಿಸಿದ್ದರು.   
ಸಂಸದ ಆರ್.ಧ್ರುವಪ್ರನಾರಾಯಣ ಮುಖ್ಯ ಅತಿಥಿಯಾಗಿದ್ದರು. ಪ್ರೊ. ಡಿ.ಎಸ್.ಸದಾಶಿವಮೂರ್ತಿ ಅಭಿನಂದನಾ ನುಡಿಗಳಾಡಿದರು. ವೇದಿಕೆ ಅಧ್ಯಕ್ಷ ಪ್ರೊ. ಸುಬ್ಬಪ್ಪ ಸ್ವಾಗತಿಸಿದರು. ಜಿಲ್ಲಾ ಕಸಾಪ ಅಧ್ಯಕ್ಷ ಎಂ.ಚಂದ್ರಶೇಖರ್ ನಿರೂಪಿಸಿದರು. ಇದಕ್ಕೂ ಮುನ್ನ ವಾಟಾಳು ಶ್ರೀಗಳನ್ನು ಮೆರವಣಿಗೆ ಮೂಲಕ ಸಭೆಗೆ ಕರೆ ತರಲಾಯಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement