ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಸಿಎಫ್‌ಟಿಆರ್‌ಐ ನಿರ್ದೇಶಕರ ವಿರುದ್ಧ ಪ್ರತಿಭಟನೆ

Vishwanath S
Updated On : 13 Jan 2014, 1:03 am

ಮೈಸೂರು: ಸಿಎಫ್‌ಟಿಆರ್‌ಐ ನಿರ್ದೇಶಕ ಡಾ. ರಾಮ್ ರಾಜಶೇಖರನ್ ಅವರ ಕನ್ನಡ ವಿರೋಧಿ ನೀತಿಯ ವಿರುದ್ಧ ಮೈಸೂರು ಕನ್ನಡ ವೇದಿಕೆಯವರು ನ್ಯಾಯಾಲಯದ ಎದುರಿನ ಗಾಂಧಿ ಪುತ್ಥಳಿ ಬಳಿ ಭಾನುವಾರ ಪ್ರತಿಭಟಿಸಿದರು.
ಸಿಎಫ್‌ಟಿಆರ್‌ಐನ ಹಿಂದಿನ ನಿರ್ದೇಶಕರಾದ ಡಾ. ಪ್ರಕಾಶ್ ಅವರು ಕನ್ನಡ ರಾಜ್ಯೋತ್ಸವದಲ್ಲಿ ಭಾಗವಹಿಸುತ್ತಿದ್ದರು. ಆದರೆ, ಈಗಿನ ನಿರ್ದೇಶಕ ಡಾ. ರಾಮ್ ರಾಜಶೇಖರನ್ ಅವರು ಸಿಎಫ್‌ಟಿಆರ್‌ಐ ಆವರಣದಲ್ಲಿ ಕನ್ನಡ ಕಾರ್ಯಕ್ರಮಗಳಿಗೆ ಅವಕಾಶ ನೀಡುತ್ತಿಲ್ಲ ಎಂದು ಆರೋಪಿಸಿದರು.
ಕನ್ನಡ ವಿರೋಧಿ ಪ್ರಚೋದನಕಾರಿ ಹೇಳಿಕೆ ನೀಡುವ ಮೂಲಕ ಭಾಷಾ ಸಂಘರ್ಷಕ್ಕೆ ಎಡೆ ಮಾಡಿಕೊಡುವ ಇಂಥ ಅಧಿಕಾರಿಗಳನ್ನು ಕೂಡಲೇ ರಾಜ್ಯದಿಂದ ವರ್ಗಾವಣೆ ಮಾಡಬೇಕು. ಸಂಸದ ಎಚ್.ವಿಶ್ವನಾಥ್ ಅವರು ಈ ಅಧಿಕಾರಿಯ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು. ಬಂಧಿತ ಕನ್ನಡ ಪರ ಹೋರಾಟಗಾರರನ್ನು ಬಿಡುಗಡೆಗೊಳಿಸಬೇಕು ಎಂದು ಅವರು ಒತ್ತಾಯಿಸಿದರು.
ವೇದಿಕೆಯ ಅಧ್ಯಕ್ಷ ಎಸ್.ಬಾಲಕೃಷ್ಣ, ಮುಖಂಡರಾದ ನಾಲಾಬೀದಿ ರವಿ, ಸುರೇಶಬಾಬು, ಅರವಿಂದ, ಪ್ರಕಾಶ, ಬಾಬು, ಗುರು, ಗೋಪಿ, ಕುಮಾರ್, ಮಂಜು, ಬಸವರಾಜು, ಮಂಜುಸ್ವಾಮಿ, ಸುನಿಲ್, ಕಾರ್ತಿಕ್, ಯೋಗೇಶ್, ಮಹದೇವ್, ಶ್ರೀನಿವಾಸ್ ಇದ್ದರು.
ಪಿಯುಸಿಎಲ್ ಖಂಡನೆ
ಸಿಎಫ್‌ಟಿಆರ್‌ಐ ನಿರ್ದೇಶಕ ಡಾ. ರಾಮ ರಾಜಶೇಖರನ್ ಅವರ ಮೇಲೆ ಮಸಿ ಎರಚಿರುವುದು ಸರಿಯಲ್ಲ ಎಂದು ಪಿಯುಸಿಎಲ್ ರಾಜ್ಯ ಕಾರ್ಯದರ್ಶಿ ಡಾ. ವಿ.ಲಕ್ಷ್ಮಿನಾರಾಯಣ ಖಂಡಿಸಿದ್ದಾರೆ. ಸಿಎಫ್‌ಟಿಆರ್‌ಐ ಕನ್ನಡ ಸಹೃದಯ ಬಳಗವು ಹಲವು ವರ್ಷಗಳಿಂದ ಕನ್ನಡ ಸಂಸ್ಕೃತಿ, ಸಾಹಿತ್ಯ ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಬಂದಿದೆ. ಸಂಸ್ಥೆಯಲ್ಲಿ ವಿವಿಧ ಭಾಷೆಯವರು ಕಾರ್ಯ ನಿರ್ವಹಿಸುತ್ತಿರುವುದುರಿಂದ ಎಲ್ಲ ಭಾಷೆಯವರಿಗೂ ಸೂಕ್ತ ರಕ್ಷಣೆ ಒದಗಿಸಬೇಕು. ಆ ಮೂಲಕ ವಿವಿಧತೆಯಲ್ಲಿ ಏಕತೆ ತತ್ವವನ್ನು ಎತ್ತಿ ಹಿಡಿಯಬೇಕು ಎಂದು ಅವರು ಒತ್ತಾಯಿಸಿದ್ದಾರೆ.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement