ಇಂದು ಈದ್ಮಿಲಾದ್, ನಾಳೆ ಸಂಕ್ರಾಂತಿ
ಮೈಸೂರು: ಮುಸ್ಲಿಮರ ಪವಿತ್ರ ಹಬ್ಬ ಈದ್ ಮಿಲಾದ್ ಜ.14 ರಂದು ಹಾಗೂ ಹಿಂದುಗಳ ಮಹತ್ವದ ಹಬ್ಬ ಮಕರ ಸಂಕ್ರಾಂತಿಯು ಜ.15 ರಂದು ನಡೆಯುತ್ತಿರುವುದು ವಿಶೇಷ. ಸಂಕ್ರಾಂತಿ ಆಚರಣೆಗಾಗಿ ಕಬ್ಬು ಹಾಗೂ ಎಳ್ಳುಬೆಲ್ಲ ಖರೀದಿಸಲು ದೇವರಾಜ ಮಾರುಕಟ್ಟೆ ಹಾಗೂ ವಾಣಿ ವಿಲಾಸ ಮಾರುಕಟ್ಟೆಗೆ ಜನರು ಹೆಚ್ಚಿನ ಸಂಖ್ಯೆಯಲ್ಲಿ ಸೋಮವಾರ ಭೇಟಿ ನೀಡಿದ್ದು ಕಂಡುಬಂತು. ಅಲ್ಲದೆ ವಿವಿಧ ಬಡಾವಣೆಗಳ ಪ್ರಮುಖ ರಸ್ತೆ ಹಾಗೂ ವೃತ್ತಗಳಲ್ಲಿಯೂ ಕಬ್ಬು ಮಾರುವವರು ಹಾಗೂ ಕೊಳ್ಳುವ ಗ್ರಾಹಕರು ಅಧಿಕ ಸಂಖ್ಯೆಯಲ್ಲಿದ್ದರು. ಮೈಸೂರು, ಮಂಡ್ಯ ಹಾಗೂ ಹಾಸನ ಮುಂತಾದ ಜಿಲ್ಲೆಗಳಿಂದ ರೈತರು ಕಬ್ಬು ತಂದು ಮಾರುತ್ತಿದ್ದರು. ಒಂದು ಕಬ್ಬಿನ ಜಲ್ಲೆಗೆ 15 ರಿಂದ 20 ಕೆಜಿ ಎಳ್ಳಿಗೆ 240 ಕೊಬ್ಬರಿಗೆ 200 ಕಡಲೇಬೀಜ 160, ಹುರಿಗಡಲೆ 80 ಇತ್ತು. ಹಬ್ಬದ ಹಿನ್ನೆಲೆಯಲ್ಲಿ ಸಕ್ಕರೆ ಅಚ್ಚು, ಹೂವು, ಹಣ್ಣು ಹಾಗೂ ಇತರೆ ಪೂಜಾ ಸಾಮಗ್ರಿ ಅಲ್ಲದೆ ತರಕಾರಿಗಳ ಬೆಲೆ ಬಿಸಿಯೂ ಗ್ರಾಹಕರಿಗೆ ತಟ್ಟದೆ ಇರಲಿಲ್ಲ.
ವಿವಿಧ ಸಂಘಟನೆಗಳಿಂದ ಸಿಎಂಗೆ ಮನವಿ
ಮೈಸೂರು: ದಿನಗೂಲಿ ನೌಕರರ ಕ್ಷೇಮಾಭಿವೃದ್ಧಿ ಅಧಿನಿಯಮ- 2012 ಅನ್ನು ಈ ಕೂಡಲೇ ಜಾರಿಗೊಳಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ಸರ್ಕಾರಿ ಅರಣ್ಯ ಇಲಾಖೆ ದಿನಗೂಲಿ ನೌಕರರ ಸಂಘ ಹಾಗೂ ಅರಣ್ಯ ಇಲಾಖೆ ಎಸ್ಸಿ, ಎಸ್ಟಿ ದಿನಗೂಲಿ ನೌಕರರ ಸಂಘ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಜ.14 ರಂದು ಮನವಿ ಸಲ್ಲಿಸಲಿದೆ. ಕಾರ್ಯಕ್ರಮ ನಿಮಿತ್ತ ನಗರಕ್ಕೆ ಆಗಮಿಸುತ್ತಿರುವ ಸಿಎಂ ಅವರನ್ನು ಭೇಟಿ ಮಾಡಿ ದಿನಗೂಲಿ ನೌಕರರು ಅನುಭವಿಸುತ್ತಿರುವ ಕಷ್ಟಗಳನ್ನು ಮನವರಿಕೆ ಮಾಡಿಕೊಡಲಾಗುವುದು ಎಂದು ಸಂಘದ ಪ್ರಧಾನ ಕಾರ್ಯದರ್ಶಿ ಗಂಗಾಧರಯ್ಯ ಕೋರಿದ್ದಾರೆ. ನಗರಕ್ಕೆ ಆಗಮಿಸುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಜಿಲ್ಲಾ ಉಸ್ತುವಾರಿ ಸಚಿವ ವಿ.ಶ್ರೀನಿವಾಸಪ್ರಸಾದ್ ಅವರನ್ನು ಜ.14ರ ಸಂಜೆ 4.30ಕ್ಕೆ ರಾಜ್ಯ ದ್ರಾವಿಡ ಮಹಾಸಭಾದಿಂದ ಅಭಿನಂದಿಸಿ, ಕುಂದು ಕೊರತೆ ಬಗ್ಗೆ ಮನವಿ ಸಲ್ಲಿಸಿ ನಂತರ ಆರ್ಡಿಎಂಸಿ ನಡೆದು ಬಂದ ಹಾದಿ ಕುರಿತ ಪುಸ್ತಕ ಬಿಡುಗಡೆ ಸಮಾರಂಭ ಏರ್ಪಡಿಸಲಾಗಿದೆ ಎಂದು ಕಾರ್ಯದರ್ಶಿ ಗಾಂಧಿನಗರ ಶಾಂತಿ ತಿಳಿಸಿದ್ದಾರೆ.
ವಿವೇಕಾನಂದ ಜಯಂತಿ ಆಚರಣೆ
ಮೈಸೂರು: ವಿವೇಕಾನಂದ ನಗರದ ಸಮೀಪವಿರುವ ಶ್ರೀಪಾದಶಿಲೆ ಉದ್ಯಾನದಲ್ಲಿ ವಿವೇಕಾನಂದ ಜಯಂತಿ ಆಚರಿಸಲಾಯಿತು. ನಗರಪಾಲಿಕೆ ಸದಸ್ಯೆ ಮಂಜುಳಾ ಮಾನಸ ವಿವೇಕಾನಂದ ಪ್ರತಿಮೆಗೆ ಮಾರ್ಲಾಪಣೆ ಮಾಡಿದರು. ಸ್ವಾತಂತ್ರ್ಯ ಹೋರಾಟಗಾರ ಜಗದೀಶ್ ಮಾತನಾಡಿ, ಉದ್ಯಾನದ ಅಭಿವೃದ್ಧಿಗೆ ಗಮನಹರಿಸುವಂತೆ ನಗರಪಾಲಿಕೆ ಸದಸ್ಯರಿಗೆ ಮನವಿ ಮಾಡಿದರು. ವಿವಿಧ ಸ್ಪರ್ಧೆಯಲ್ಲಿ ವಿಜೇತರಾದ ಹಾಗೂ ಭಾಗವಹಿಸಿದ್ದ ಎಲ್ಲಾ ಪುಟಾಣಿಗಳಿಗೆ ಬಹುಮಾನ, ಸಿಹಿ ವಿತರಿಸಲಾಯಿತು. ಯುವ ವಕೀಲ ಪಿ.ಜೆ. ರಾಘವೇಂದ್ರ ಸೇರಿದಂತೆ ಹಲವಾರು ನಿವಾಸಿಗಳು ಇದ್ದರು. ಸಹನಾ ನಿರೂಪಿಸಿದರು. ಹಶ್ಮಿತಾ ಪ್ರಾರ್ಥಿಸಿದರು.
ನಾಳೆ ಭಟ್ಟಾಕಲಂಕ ಪಟ್ಟಾಚಾರ್ಯರಿಗೆ ಗುರುವಂದನೆ
ಮೈಸೂರು: ಶ್ರೀ ದಿಗಂಬರ ಜೈನ ಸಮಾಜದ ವತಿಯಿಂದ ಜ.15ರ 3ಕ್ಕೆ ನಗರದ ಚಂದ್ರಗುಪ್ತ ರಸ್ತೆಯಲ್ಲಿರುವ ಎಂ.ಎಲ್. ಜೈನ್ ಬೋರ್ಡಿಂಗ್ ಹೋಂನಲ್ಲಿ ಶ್ರೀಕ್ಷೇತ್ರ ಸ್ವಾದಿ ದಿಗಂಬರ ಜೈನ ಮಠದ ಸ್ವಸ್ತಿಶ್ರೀ ಅಭಿನವ ಭಟ್ಟಾಕಲಂಕ ಪಟ್ಟಾಚಾರ್ಯವರ್ಯ ಸ್ವಾಮಿಗಳಿಗೆ ಗುರುವಂದನೆ ಹಮ್ಮಿಕೊಳ್ಳಲಾಗಿದೆ.
ನಗರಕ್ಕೆ ಆಗಮಿಸುವ ಶ್ರೀಗಳಿಗೆ ಮೇಯರ್ ಎನ್.ಎಂ. ರಾಜೇಶ್ವರಿ ಸ್ವಾಗತ ಕೋರಲಿದ್ದು, ಬೆಳಗ್ಗೆ 9.30ಕ್ಕೆ ವರ್ಧಮಾನಯ್ಯ ಸಭಾಂಗಣದಲ್ಲಿ ಸಿದ್ದಚಕ್ರ ಆರಾಧನೆ ನಡೆಯಲಿದೆ. ಮಧ್ಯಾಹ್ನದ ಸಮಾರಂಭದಲ್ಲಿ 108 ಪ್ರಸಂಗ ಸಾಗರ ಮುನಿಮಹಾರಾಜರ ಸಾನ್ನಿಧ್ಯ ವಹಿಸಲಿದ್ದು, ಶಾಸಕ ವಾಸು, ದಿಗಂಬರ ಜೈನ ಸಮಾಜದ ಅಧ್ಯಕ್ಷ ಎಸ್.ಎನ್. ಪ್ರಕಾಶ್ಬಾಬು ಭಾಗವಹಿಸುವರು.
ಫೋನ್ಇನ್ ಕಾರ್ಯಕ್ರಮ ರದ್ದು
ಮೈಸೂರು: ಸಾರ್ವಜನಿಕರ ಕುಂದುಕೊರತೆ ಆಲಿಸಲು ಪ್ರತಿ ತಿಂಗಳ ಮೂರನೇ ಗುರುವಾರ ಫೋನ್ಇನ್ ಕಾರ್ಯಕ್ರಮ ಏರ್ಪಡಿಸುತ್ತಾ ಬಂದಿದ್ದು, ಈ ಬಾರಿ ಬೆಂಗಳೂರಿನಲ್ಲಿ ಆಯೋಜಿಸಿರುವ ಸಭೆಗೆ ಜಿಲ್ಲಾಧಿಕಾರಿ ಮತ್ತು ಇತರೆ ಅಧಿಕಾರಿಗಳು ತೆರಳಬೇಕಾಗಿದೆ. ಈ ಹಿನ್ನೆಲೆಯಲ್ಲಿ ಜ.16 ರಂದು ನಡೆಯಬೇಕಿದ್ದ ಫೋನ್ಇನ್ ಕಾರ್ಯಕ್ರಮ ರದ್ದುಪಡಿಸಲಾಗಿದೆ ಎಂದು ಜಿಲ್ಲಾಧಿಕಾರಿ ಸಿ. ಶಿಖಾ ತಿಳಿಸಿದ್ದಾರೆ.
ಲಾರಿ ಮಾಲೀಕರ ಪ್ರತಿಭಟನೆ ಹಿಂದಕ್ಕೆ
ಹೊಸ ಮರಳು ನೀತಿ ವಿರೋಧಿಸಿ ಮತ್ತು ತಮ್ಮ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಲಾರಿ ಮಾಲೀಕರ ಸಂಘದವರು ನಡೆಸುತ್ತಿದ್ದ ಹೋರಾಟ ಅಂತ್ಯಗೊಂಡಿದೆ. ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಲಾರಿ ಮಾಲೀಕರ ಸಂಘದ ಪದಾಧಿಕಾರಿಗಳ ಜೊತೆ ಮಾತುಕತೆ ನಡೆಸಿ ಮುಂದಿನ 10 ದಿನದ ಒಳಗಾಗಿ ತಮ್ಮ ಬೇಡಿಕೆ ಈಡೇರಿಸುವ ಭರವಸೆ ನೀಡಿದ ಹಿನ್ನೆಲೆಯಲ್ಲಿ ಪ್ರತಿಭಟನೆ ಹಿಂತೆಗೆದುಕೊಳ್ಳಲಾಗಿದೆ. ಹೊಸ ಮರಳು ನೀತಿಯಿಂದ ಲಾರಿ ಮಾಲೀಕರಿಗೆ ತೊಂದರೆ ಆಗುತ್ತಿದೆ. ಮರಳು ಲಾರಿ ಮಾಲೀಕರ ಮೇಲೆ ಹೂಡಲಾದ ಮೊಕದ್ದಮೆ ಕೈಬಿಟ್ಟು ದಂಡ ವಿಧಿಸಿ ಲಾರಿ ಬಿಡಬೇಕು, ಚಾಲಕರು ಲೈಸೆನ್ಸ್ ಪಡೆಯಲು 8ನೇ ತರಗತಿ ಓದಿರುವುದನ್ನು ಕಡ್ಡಾಯಗೊಳಿಸಬಾರದು, ಇ- ಸುಗಮ್ ಅವಧಿಯನ್ನು ಕನಿಷ್ಠ 30 ದಿನಕ್ಕೆ ವಿಸ್ತರಿಸಬೇಕೆಂದು ಆಗ್ರಹಿಸಿ ಮುಷ್ಕರ ನಡೆಸುತ್ತಿದ್ದರು.
ವಿದ್ಯಾರ್ಥಿಗಳಿಗೆ ರಂಗ ತರಬೇತಿ
ಮೈಸೂರು: ಅಭಿಯಂತರರು ವೇದಿಕೆಯಿಂದ ಫೆಬ್ರವರಿ ಮತ್ತು ಮಾರ್ಚ್ ತಿಂಗಳಲ್ಲಿ ಎಂಜನಿಯರ್ಗಳಿಗೆ, ಎಂಜಿನಿಯರಿಂಗ್ ಮತ್ತು ಡಿಪ್ಲೊಮಾ ಕಾಲೇಜಿನ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ರಂಗಭೂಮಿಯತ್ತ ರಂಗ ತರಬೇತಿ ಶಿಬಿರ ಹಮ್ಮಿಕೊಂಡಿದೆ. ರಂಗಕರ್ಮಿ ಹಾಗೂ ರಂಗಾಯಣದ ಮಾಜಿ ನಿರ್ದೇಶಕ ಸಿ. ಬಸವಲಿಂಗಯ್ಯ ಈ ಶಿಬಿರದ ನಿರ್ದೇಶಕರಾಗಿರುತ್ತಾರೆ. ನಾಟಕಕಾರರು ಮತ್ತು ರಂಗಕರ್ಮಿಗಳು ಈ ಶಿಬಿರದಲ್ಲಿ ರಂಗಕಲೆಯ ವಿವಿಧ ಆಯಾಮಗಳತತ ಕ್ಷ-ಕಿರಣ ಬೀರಲಿದ್ದಾರೆ. ಶಿಬಿರದಲ್ಲಿ ಹೊಸ ನಾಟಕಗಳ ಪ್ರದರ್ಶನ, ವಿಚಾರ ಸಂಕಿರಣ, ಜನಪದ ನೃತ್ಯ ಮುಂತಾದವುಗಳನ್ನು ಪ್ರಸ್ತುತಪಡಿಸಲಿದ್ದಾರೆ. ಶಿಬಿರದಲ್ಲಿ ಭಾಗವಹಿಸುವವರು ಫೆ.10 ರೊಳಗೆ ಎಚ್.ಎಸ್. ಸುರೇಶ್ಬಾಬು, ಮೊ. 9945355777, ತಾಂಡವಪುರಮೂರ್ತಿ, ಮೊ. 9902238443, ಲಕ್ಷ್ಮಣ್ ದತ್ತ, ಮೊ. 9986821919 ಸಂಪರ್ಕಿಸಬಹುದು.
ಕಾರ್ಯಾಗಾರ
ಸಾಲಿಗ್ರಾಮ: ವಿದ್ಯಾರ್ಥಿಗಳು ದುಶ್ಚಟಗಳಿಂದ ದೂರವಿದ್ದಾಗ ಮಾತ್ರ ಸ್ವಾಸ್ಥ್ಯ ಸಮಾಜ ನಿರ್ಮಾಣ ಮಾಡಲು ಸಾಧ್ಯವೆಂದು ಸಂಪನ್ಮೂಲ ವ್ಯಕ್ತಿ ಆರ್. ಯಶವಂತ್ಕುಮಾರ್ ಅಭಿಪ್ರಾಯಪಟ್ಟರು. ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಆಯೋಜಿಸಿದ್ದ ಸ್ವಾಸ್ಥ್ಯ ಸಂಕಲ್ಪ ಕಾರ್ಯಾಗಾರದಲ್ಲಿ ಮಾತನಾಡಿದ ಅವರು, ಧರ್ಮಾಧಿಕಾರಿಗಳಾದ ಡಾ. ವೀರೇಂದ್ರ ಹೆಗ್ಗಡೆಯವರ ನೇತೃತ್ವದಲ್ಲಿ ಕಾರ್ಯನಿರ್ವಹಿಸುತ್ತಿರುವ ಗ್ರಾಮಭಿವೃದ್ಧಿ ಯೋಜನೆ ವತಿಯಿಂದ ಆರೋಗ್ಯವಂತ ಸಮಾಜ ಕಟ್ಟಲಾಗುತ್ತಿದೆ. ಇಂತಹ ಮಹತ್ಕಾರ್ಯಕ್ಕೆ ಎಲ್ಲರೂ ಕೈಜೋಡಿಸುವುದರ ಮೂಲಕ ಸುಂದರ ಬದುಕನ್ನು ಸರ್ವರು ಕಟ್ಟಿಕೊಳ್ಳುವಂತೆ ಮಾಡಬೇಕೆಂದು ಕರೆ ನೀಡಿದರು. ಸರ್ಕಾರಿ ಪದವಿ ಪೂರ್ವ ಕಾಲೇಜಿನ ಉಪ ಪ್ರಾಂಶುಪಾಲರಾದ ಭಾಗ್ಯವತಿ, ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸಾಲಿಗ್ರಾಮ ವಲಯ ಮೇಲ್ವಿಚಾರಕ ನಿರಂಜನ್, ಶಿಕ್ಷಕರಾದ ಸುಧಾಕರ್, ಮಹೇಶ್ ಇದ್ದರು.
ಎಂಡಿಸಿಸಿ ಬ್ಯಾಂಕ್ ನಿರ್ದೇಶಕರಿಗೆ ಅಭಿನಂದನೆ
ಹುಣಸೂರು: ಯುವಪೀಳಿಗೆ ಶಿಕ್ಷಣ ಪಡೆದು ಗ್ರಾಮದ ಅಭಿವೃದ್ಧಿಗೆ ಒತ್ತು ನೀಡಬೇಕು ಎಂದು ಎಂಡಿಸಿಸಿ ಬ್ಯಾಂಕ್ ನಿರ್ದೇಶಕ ಜಿ.ಡಿ. ಹರೀಶ್ಗೌಡ ಅಭಿಪ್ರಾಯಪಟ್ಟರು. ತಾಲೂಕಿನ ಮುತ್ತುರಾಯನ ಹೊಸಳ್ಳಿಯಲ್ಲಿ ಏರ್ಪಡಿಸಿದ್ದ ನೂತನ ನಿರ್ದೇಶಕರಿಗೆ ಅಭಿನಂದನಾ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಸಮುದಾಯದಲ್ಲಿ ಹುಟ್ಟಿದ ಪ್ರತಿಯೊಬ್ಬರಿಗೂ ಸಮಾಜ ನಮಗೆ ಏನು ನೀಡಿದೆ ನಾವು ಏನು ನೀಡುತ್ತಿದ್ದೇವೆ ಎಂಬ ಅರಿವು ಬಂದಾಗ ಮಾತ್ರ ಗ್ರಾಮೀಣ ಪ್ರದೇಶವನ್ನು ಅಭಿವೃದ್ಧಿ ಪಡಿಸಲು ಸಾಧ್ಯ ಎಂದರು. ಕಲ್ಲಹಳ್ಳಿ ಗ್ರಾಪಂ ಮಾಜಿ ಅಧ್ಯಕ್ಷ ಜಗದೀಶ್ ಮತ್ತು ಚಿಲ್ಕುಂದ ಕೃಷಿ ಪತ್ತಿನ ಸಹಕಾರ ಬ್ಯಾಂಕಿನ ನಿರ್ದೇಶಕರಾದ ಅಣ್ಣಯ್ಯನಾಯ್ಕ, ಪ್ರೆಮಕುಮಾರ್, ಎಪಿಎಂಸಿ ಅಧ್ಯಕ್ಷ ಈರಣ್ಣ, ಮಾಜಿ ನಿರ್ದೇಶಕ ಗೋವಿಂದೇಗೌಡ, ಮುಖಂಡರಾದ ಮಹದೇವ್, ಜವರೇಗೌಡ, ರಾಜಣ್ಣ, ನಟೇಶ್ ಮತ್ತು ದಿನೇಶ್ ಇದ್ದರು.
ಕಾರ್ಮಿಕರ ಧರಣಿ ಮುಂದುವರಿಕೆ
ಪಿರಿಯಾಪಟ್ಟಣ: ತಾಲೂಕಿನ ಕಂಪಲಾಪುರದ ವಿಷ್ಣು ಟೆಕ್ಸ್ಟೈಲ್ಸ್ ಮುಂಭಾಗ ಕಾರ್ಮಿಕರು ನಡೆಸುತ್ತಿರುವ ಧರಣೆಯು 5ನೇ ದಿನವು ಮುಂದುವರಿದಿದೆ. ಕಾರ್ಖಾನೆಯ ಮಾಲೀಕರು ಯಾವುದೇ ಮುನ್ಸೂಚನೆ ನೀಡದೆ ಐವರು ಕಾರ್ಮಿಕರನ್ನು ಅಮಾನತುಪಡಿಸಿರುವುದನ್ನು ಖಂಡಿಸಿ ಜ. 9ರಿಂದ ಸಿಐಟಿಯು ಕಾರ್ಯಕರ್ತರು ಹಾಗೂ ಕರವೇ ಕಾರ್ಯಕರ್ತರು ಪ್ರಾರಂಭಿಸಿರುವ ಧರಣಿಯು ಮುಂದುವರಿದಿದೆ.
ಸಾಗರೆಯಲ್ಲಿ ವಿವೇಕ ಜಯಂತಿ
ಸರಗೂರು: ಸಮೀಪದ ಸಾಗರೆಯಲ್ಲಿ ಸ್ವಾಮಿ ವಿವೇಕಾನಂದ ಯುವಕ ಸಂಘದಿಂದ ಸ್ವಾಮಿ ವಿವೇಕಾನಂದರ ಜಯಂತಿಯನ್ನು ಭಾನುವಾರ ಆಚರಿಸಲಾಯಿತು. ಸಾಗರೆ ಸರ್ಕಾರಿ ಪ್ರೌಢಶಾಲೆಯ ಆವರಣದಲ್ಲಿ ಸಸಿ ನೆಡುವ ಮೂಲಕ ಶ್ರಮದಾನ ಮಾಡಲಾಯಿತು. ಜಯಂತಿ ಅಂಗವಾಗಿ ಗ್ರಾಮ ದೇವತೆ ಮಾರಮ್ಮನ ದೇವಾಲಯದಲ್ಲಿ ವಿಶೇಷ ಪೂಜೆ ನಡೆಯಿತು.
ಪಾರದರ್ಶಕತೆ ಇಲ್ಲದ ಸಂದರ್ಶನ
ನಂಜನಗೂಡು: ಕರ್ನಾಟಕ ಲೋಕ ಸೇವಾ ಆಯೋಗವು ದ್ವಿತೀಯ ದರ್ಜೆ ಲೆಕ್ಕ ಸಹಾಯಕ ಹುದ್ದೆ ನೇಮಕಾತಿ ಪರೀಕ್ಷೆ ನಡೆಸಿದೆ. ಆದರೆ ಕಟ್ಆಫ್ ಮಾರ್ಕ್ಸ್ ಪ್ರಕಟಿಸಿದೆ ನೇರವಾಗಿ ಸಂದರ್ಶನಕ್ಕೆ ಕರೆಯುವ ಮೂಲಕ ಅವ್ಯವಹಾರ ಆಗಿರಬಹುದು ಎಂಬ ಅನುಮಾನ ಕಾಡಿದೆ ಎಂದು ಪರೀಕ್ಷೆ ಬರೆದ ಅಭ್ಯರ್ಥಿಗಳು ದೂರಿದ್ದಾರೆ.