ಕಲಿಕೋತ್ಸವ ವಿದ್ಯಾರ್ಥಿಗಳಿಗೆ ಸಹಕಾರಿ
ಹುಣಸೂರು: ಸರ್ಕಾರಿ ಶಾಲಾ ಮಕ್ಕಳಲ್ಲಿ ಗುಣಾತ್ಮಕ ಶಿಕ್ಷಣಕ್ಕೆ ಪೂರಕವಾದ ಕಲಿಕೋತ್ಸವವು ವಿದ್ಯಾರ್ಥಿಗಳಲ್ಲಿ ಸ್ಪರ್ಧಾ ಮನೋಭಾವ ಬೆಳೆಸಲಿದೆ ಎಂದು ಶಾಸಕ ಎಚ್.ಪಿ. ಮಂಜುನಾಥ್ ಅಭಿಪ್ರಾಯಪಟ್ಟರು. ಪಟ್ಟಣದ ಶಿಕ್ಷಕರ ಭವನದಲ್ಲಿ ತಾಲೂಕು ಮಟ್ಟದ ಕಲಿಕೋತ್ಸವದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಒಂದೆಡೆ ಪ್ರತಿಭಾ ಕಾರಂಜಿಯಿಂದ ಮಕ್ಕಳ ಪ್ರತಿಭೆ ಅನಾವರಣ ಆಗುತ್ತದೆ. ಮತ್ತೊಂದೆಡೆ ಪಠ್ಯಕ್ಕೆ ಸಂಬಂಧಿಸಿದ ಹಾಗೂ ಕಲಿಕಾ ಸಾಮರ್ಥ್ಯ ಹೆಚ್ಚಿಸುವ ಕಲಿಕೋತ್ಸವ ಮಕ್ಕಳ ಸರ್ವಾಂಗೀಣ ಪ್ರಗತಿಗೆ ಪೂರಕವಾಗಿದೆ. ತಾಲೂಕಿನಲ್ಲಿ ಖಾಸಗಿ ಶಾಲೆಗಳನ್ನು ಮೀರಿಸುವ ಹಲವಾರು ಸರ್ಕಾರಿ ಶಾಲೆಗಳು ಇವೆ. ಆದರೆ ಕೆಲವು ಪ್ರೌಢಶಾಲೆ ಮಕ್ಕಳಿಗೆ ಕನ್ನಡ ಓದಲು- ಬರೆಯಲು ಬಾರದಿರುವುದು ನೋವಿನ ಸಂಗತಿ ಎಂದರು. ಇನ್ನು ಮುಂದೆ ಮಕ್ಕಳ ಕಾರ್ಯಕ್ರಮಗಳಲ್ಲಿ ಗಣ್ಯರನ್ನು ಕೆಳಗೆ ಕೂರಿಸಿ ಮಕ್ಕಳಿಗೆ ವೇದಿಕೆ ಮೀಸಲಿಡುವಂತೆ ಸೂಚಿಸಿದರು. ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೂ ಪ್ರತಿಭಾ ಪುರಸ್ಕಾರ ನೀಡಲಾಗುವುದು. ಜೊತೆಗೆ ಉತ್ತಮ ಶಿಕ್ಷಕರಿಗೂ ನಗದು ಬಹುಮಾನ ನೀಡುವುದಾಗಿ ತಿಳಿಸಿದರು. ಜಿಪಂ ಸದಸ್ಯರಾದ ಡಾ.ಪುಷ್ಪ ಅಮರನಾಥ್, ರಮೇಶ್, ತಾಪಂ ಅಧ್ಯಕ್ಷೆ ದೇವಕಿ ತಿಮ್ಮನಾಯ್ಕ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ವರದರಾಜು, ಬಿಇಒ ರಾಜಶೇಖರ್, ಬಿಆರ್ಸಿ ಮಂಗಳ, ತದೇವರಾಜೇಗೌಡ, ಚಿನ್ನವೀರಪ್ಪ ಇದ್ದರು.