ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಗುಣಮಟ್ಟದ ಶಿಕ್ಷಣ ಕಲಿಕೆಗೆ ಪೂರಕ: ಕೆ.ವಿ. ಮಲ್ಲೇಶ್

Vishwanath S
Updated On : 14 Jan 2014, 1:08 am

ಮೈಸೂರು: ವಿದ್ಯಾರ್ಥಿಗಳ ಗುಣಮಟ್ಟದ ಶಿಕ್ಷಣ ಕಲಿಕೆಗೆ ಈ ಕಲಿಕೋತ್ಸವ ಪೂರಕ ಎಂದು ನಗರ ಪಾಲಿಕೆ ಆಡಳಿತ ಪಕ್ಷದ ನಾಯಕ ಕೆ.ವಿ. ಮಲ್ಲೇಶ ಅಭಿಪ್ರಾಯಪಟ್ಟರು.
ಸಾರ್ವಜನಿಕ ಶಿಕ್ಷಣ ಇಲಾಖೆಯ ಮೈಸೂರು ದಕ್ಷಿಣ ವಲಯ ಕ್ಷೇತ್ರಾಧಿಕಾರಿ ಕಾರ್ಯಾಲಯದ ವತಿಯಿಂದ ಕುವೆಂಪುನಗರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸೋಮವಾರ ಏರ್ಪಡಿಸಿದ್ದ ಬ್ಲಾಕ್ ಮಟ್ಟದ ಕಲಿಕೋತ್ಸವ ಉದ್ಘಾಟಿಸಿ ಅವರು ಮಾತನಾಡಿದರು.
ಇಂದಿನ ಖಾಸಗೀಕರಣದ ಸ್ಪರ್ಧಾತ್ಮಕ ಯುಗದಲ್ಲಿ ನಗರ ಮಟ್ಟದಲ್ಲಿ ಸರ್ಕಾರಿ ಶಾಲೆಗಳನ್ನು ಉಳಿಸಿಕೊಳ್ಳುವುದು ಬಹುದೊಡ್ಡ ಸವಾಲು. ಹೀಗಿರುವಾಗ ಸರ್ಕಾರದ ಸವಲತ್ತುಗಳನ್ನು ಸದ್ವಿನಿಯೋಗ ಪಡಿಸಿಕೊಂಡು ಈ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ ನೀಡುವ ಮೂಲಕ ಮಕ್ಕಳನ್ನು ಆಕರ್ಷಿಸಬೇಕು ಎಂದರು.
ಸರ್ಕಾರ ಅನೇಕ ಯೋಜನೆಗಳನ್ನು ಜಾರಿಗೆ ತರಲಿದೆ. ಆದರೆ ಅದನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸದೆ ಹೋದರೆ ಪ್ರಯೋಜನವಾಗುವುದಿಲ್ಲ. ಯೋಜನೆಗಳ ಬಗ್ಗೆ ನಾಗರಿಕರು ಅರಿವು ಹೊಂದಬೇಕು. ಇಂತಹ ಕಲಿಕೋತ್ಸವವು ಮಕ್ಕಳ ಗುಣಮಟ್ಟದ ಶಿಕ್ಷಣ ಕಲಿಕೆಗೆ ಪೂರಕ ಎಂದು ಅವರು ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ದಕ್ಷಿಣ ವಲಯ ಬಿಇಒ ಬಿ.ಎನ್. ಶಿವರಾಮೇಗೌಡ ಮಾತನಾಡಿ, ಪ್ರತಿಭಾ ಕಾರಂಜಿಯಂತೆ ಈ ಕಲಿಕೋತ್ಸವವು ಕ್ಲಸ್ಟರ್ ಮಟ್ಟದಿಂದ ರಾಜ್ಯಮಟ್ಟದವರೆಗೆ ನಡೆಯಲಿದೆ. ಇದೇ ಮೊದಲ ಬಾರಿಗೆ ಮೈಸೂರಿನಲ್ಲಿ ಆಯೋಜಿಸಲಾಗಿದೆ. ತರಗತಿಯಲ್ಲಿ ಮಕ್ಕಳು ಕಲಿತಿರುವ ಶೈಕ್ಷಣಿಕ ಚಟುವಟಿಕೆಗಳನ್ನು ಮೌಲ್ಯಮಾಪನ ಮಾಡುವುದೇ ಈ ಕಾರ್ಯಕ್ರಮದ ಉದ್ದೇಶ ಎಂದರು.
ಬ್ಲಾಕ್ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಸೋಮೇಗೌಡ ಮುಖ್ಯ ಅತಿಥಿಯಾಗಿದ್ದರು. ಬಿಆರ್‌ಸಿಗಳಾದ ಪುಷ್ಪ, ಕೃಷ್ಣೇಗೌಡ, ಶಾಲೆಯ ಉಪಪ್ರಾಂಶುಪಾಲ ನಟೇಶ್, ಮುಖ್ಯ ಶಿಕ್ಷಕಿ ಬೃಂದಾಮಣಿ ಇದ್ದರು.
ಪಠ್ಯ ಚಟುವಟಿಕೆಗಳಿಗೆ ಪೂರಕವಾದ ವಿವಿಧ ಸ್ಪರ್ಧೆಗಳನ್ನು ನಡೆಸಲಾಯಿತು. ಕುವೆಂಪುನಗರ, ಕನಕಗಿರಿ, ಲಕ್ಷ್ಮೀಪುರಂ, ಅಶೋಕಪುರಂ ಹಾಗೂ ಕುರುಬಾರಹಳ್ಳಿ ಕ್ಲಸ್ಟರ್‌ಗಳ ವಿದ್ಯಾರ್ಥಿಗಳು ಭಾಗವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement