ಜಸ್ಕೋ ಅಧಿಕಾರ ಮೊಟಕು ಮಾಡಿ
ಮೈಸೂರು: ಜಸ್ಕೋ ಕಂಪನಿಗೆ ನೀಡಲಾದ ಮಾನವ ಸಂಪನ್ಮೂಲ, ಬಿಲ್ ವಿತರಣೆ ಅಧಿಕಾರವನ್ನು ಹಿಂದಕ್ಕೆ ಪಡೆಯದಿದ್ದರೆ ವಾಣಿವಿಲಾಸ ನೀರು ಸರಬರಾಜು ಕಾರ್ಯಾಗಾರದ ಎದುರು ತಮಟೆ ಚಳವಳಿ ನಡೆಸುವುದಾಗಿ ಪಾಲಿಕೆಯ ಹಣಕಾಸು ಮತ್ತು ಅಪೀಲುಗಳ ಸ್ಥಾಯಿ ಸಮಿತಿ ಅಧ್ಯಕ್ಷ ಬಿ.ಎಲ್. ಬೈರಪ್ಪ ಎಚ್ಚರಿಸಿದರು.
ವಾಣಿವಿಲಾಸ ನೀರು ಸರಬರಾಜು ಕಾರ್ಯಾಗಾರಕ್ಕೆ ಸೋಮವಾರ ಭೇಟಿ ನೀಡಿ ಪರಿಶೀಲಿಸಿದ ಅವರು, ನೀರಿನ ಬಾಕಿ ಶುಲ್ಕ ವಸೂಲಾತಿಯಲ್ಲಿ ಅಧಿಕಾರಿಗಳು ಹಿಂದೆ ಬಿದ್ದಿರುವುದನ್ನು ಮನಗಂಡು ನಿಂತುಕೊಂಡೆ ಮಾಹಿತಿ ಸಂಗ್ರಹಿಸಿದ ಬಳಿಕ ಸುದ್ದಿಗಾರರಿಗೆ ಈ ವಿಷಯ ತಿಳಿಸಿದರು.
ಜಸ್ಕೋ ಕಂಪನಿಗೆ ನೀರಿನ ಬಿಲ್ ವಿತರಿಸುವ ಅಧಿಕಾರ ನೀಡಲಾಗಿದೆ. ಆದರೆ ಜಸ್ಕೋ ಕಂಪನಿಯವರು ಬಿಲ್ ವಿತರಣೆಯಲ್ಲಿ ಹಿಂದೆ ಬಿದ್ದಿದ್ದಾರೆ. ಅಲ್ಲದೆ ನಾವು ನೀಡಿದ ಮಾನವ ಸಂಪನ್ಮೂಲವನ್ನು ಸರಿಯಾಗಿ ಬಳಸಿಕೊಳ್ಳುತ್ತಿಲ್ಲ. ಆದ್ದರಿಂದ ಈ ಬಾರಿಯ ಪಾಲಿಕೆ ಸಭೆಯ ಒಳಗೆ ಈ ಸಂಬಂಧ ಜಲಮಂಡಳಿಯ ಹಿರಿಯ ಅಧಿಕಾರಿಗಳ ಜೊತೆ ಚರ್ಚಿಸಿ ಸೂಕ್ತ ತೀರ್ಮಾನ ಕೈಗೊಳ್ಳಬೇಕು. ತಪ್ಪಿದರೆ ವಾಣಿ ವಿಲಾಸ ಕಾರ್ಯಾಗಾರದ ಬಳಿ ತಮಟೆ ಚಳವಳಿ ನಡೆಸುವುದಾಗಿ ಎಚ್ಚರಿಸಿದರು.
ಸಂಪರ್ಕ ಕಲ್ಪಿಸುವ ಅಧಿಕಾರಿ ನೀಡಿ: ನೀರಿನ ಸಂಪರ್ಕ ಕಲ್ಪಿಸುವ ಜವಾಬ್ದಾರಿಯನ್ನು ಮಾತ್ರ ಜಸ್ಕೋ ಕಂಪನಿಗೆ ನೀಡಬೇಕು. ಉಳಿದೆಲ್ಲ ಅಧಿಕಾರವು ಪಾಲಿಕೆ ಮತ್ತು ವಾಣಿವಿಲಾಸ ಕಾರ್ಯಾಗಾರದ ಅಧಿಕಾರಿಗಳಿಗೆ ಇರಬೇಕು. ನಗರದ ಪ್ರಮುಖ ಬಡಾವಣೆಗಳಲ್ಲಿ ನೀರಿನ ಕರ ವಸೂಲು ಮಾಡುವಂತೆ ನಗರದ ಹಳೆ ಪ್ರದೇಶಗಳಾದ ಕೆ.ಜಿ. ಕೊಪ್ಪಲು, ಕುಂಬಾರಕೊಪ್ಪಲು, ಅಶೋಕಪುರಂ ಮುಂತಾದ ಬಡಾವಣೆಯಿಂದಲೂ ನೀರಿನ ಕರ ವಸೂಲಿ ಮಾಡಬೇಕು. ತಪ್ಪಿದರೆ ಯಾರೊಬ್ಬರೂ ನೀರಿನ ಕಂದಾಯ ಕಟ್ಟುವುದಿಲ್ಲ. ಒಂದು ವೇಳೆ ಕರ ವಸೂಲಿ ಮಾಡಲು ಆಗದಿದ್ದರೆ ಆಮ್ ಆದ್ಮಿ ಪಕ್ಷದಂತೆ ಸಾರ್ವಜನಿಕರೆಲ್ಲರಿಗೂ ನೀರನ್ನು ಉಚಿತವಾಗಿ ನೀಡಿ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮೊಬೈಲ್ಗೆ ಕರೆನ್ಸಿ ಹಾಕಿಸಿಕೊಳ್ಳುವಷ್ಟೆ ಜವಾಬ್ದಾರಿಯಾಗಿ ನೀರಿನ ಕಂದಾಯ ಕಟ್ಟಬೇಕು. ಒಬ್ಬರು ಕಂದಾಯ ಕಟ್ಟುತ್ತಿರುವುದು, ಉಳಿದವರು ಪುಕ್ಕಟೆಯಾಗಿ ನೀರು ಪಡೆಯುವುದು ಸರಿಯಲ್ಲ. ನಗರದ ಹೊರ ವಲಯದ ಬಡಾವಣೆಗಳಲ್ಲಿ ಸುಮಾರು 10 ರಿಂದ 11 ಸಾವಿರ ನೀರಿನ ಸಂಪರ್ಕಕ್ಕೆ ಬಿಲ್ ನೀಡುತ್ತಿಲ್ಲ. ಆದರೆ ನೀರು ಸರಬರಾಜಾಗುತ್ತಿದೆ. ಇಂತಹ ವ್ಯವಸ್ಥೆ ಹೋಗಬೇಕು ಎಂದರು.
ನೀರಿನ ತೆರಿಗೆ ಪಾವತಿ ಅಭಿಯಾನ ಆರಂಭಿಸಿದ ಬಳಿಕ ಒಂದೂವರೆ ತಿಂಗಳಲ್ಲಿ ಸುಮಾರು 7 ಕೋಟಿ ಸಂಗ್ರಹವಾಗಿದೆ. ನೀರಿನ ತೆರಿಗೆ ಪಾವತಿಸದ ಪಾಲ್ಕಾನ್ ಟೈರ್ಗೆ ಸಂಪರ್ಕ ಕಡಿತಗೊಳಿಸಲಾಗಿತ್ತು. ಈಗ ಮಾತುಕತೆ ಮೂಲಕ ಬಗೆಹರಿಸಿಕೊಳ್ಳುತ್ತಿದ್ದಾರೆ. 1 ಲಕ್ಷಕ್ಕೂ ಮಿಕ್ಕಿದ ಹಲವಾರು ಸಂಪರ್ಕದಿಂದ 26 ಕೋಟಿ ಬರಬೇಕಿದೆ. ಇಂತಹ 395 ಸಂಪರ್ಕಕ್ಕೆ 7 ದಿನಗಳಲ್ಲಿ ನೀರಿನ ಕರ ಪಾವತಿಸುವಂತೆ ನೋಟಿಸ್ ನೀಡಲಾಗಿದೆ. ಅಷ್ಟರಲ್ಲಿ ಬಿಲ್ ಪಾವತಿಸದಿದ್ದರೆ ಸಂಪರ್ಕ ಕಡಿತಗೊಳಿಸುವುದಾಗಿ ಅಧಿಕಾರಿಗಳು ಹೇಳಿದರು.
ಪಾಲಿಕೆ ಸದಸ್ಯ ಶೌಕತ್ಪಾಷ ಮಾತನಾಡಿ, 5 ವರ್ಷಗಳಲ್ಲಿ ಜಸ್ಕೋ ಸಂಸ್ಥೆಯು ಕೇವಲ 11 ಸಾವಿರ ಮನೆಗೆ ಮಾತ್ರ ನೀರಿನ ಪೈಪ್ ಸಂಪರ್ಕ ಕಲ್ಪಿಸಿದೆ. 45 ಸಾವಿರ ಮನೆಗೆ ಸಂಪರ್ಕ ಕಲ್ಪಿಸಲು ಉದ್ದೇಶಿಸಿದೆ. ಇನ್ನೂ 45 ಸಾವಿರ ಮನೆಗೆ ಸಂಪರ್ಕ ಕಲ್ಪಿಸಲು ಉದ್ದೇಶಿಸಿರುವುದಾಗಿ ಹೇಳಿಕೆ ನೀಡುತ್ತದೆ. ಇಂಥ ಸಂಸ್ಥೆಯಿಂದ ಯಾವುದೆ ಪ್ರಯೋಜನ ಇಲ್ಲ ಎಂದರು.
ಪಾಲಿಕೆ ಸದಸ್ಯರಾದ ಬಿ.ವಿ. ಮಂಜುನಾಥ್, ಶಿವಮಾದು, ಪಾಲಿಕೆ ಎಸ್ಇ ಕೃಷ್ಣ, ಕರ್ನಾಟಕ ವಾಟರ್ ಬೋರ್ಡ್ನ ಇಇ ಕೆ.ಪಿ. ಜಯರಾಮು, ಇಇ ರಂಗಸ್ವಾಮಿ ಇದ್ದರು.
ಜಸ್ಕೋ, ಪಾಲಿಕೆ ಅಧಿಕಾರಿಗಳಿಗೆ ತರಾಟೆ
ನಗರದ 57ನೇ ವಾರ್ಡ್ನ ರಾಘವೇಂದ್ರ ನಗರದಲ್ಲಿ ಕುಡಿಯುವ ನೀರಿಗೆ ತೊಂದರೆಯಾಗಿದ್ದು, ಸ್ಥಳ ಪರಿಶೀಲಿಸಲು ಬಂದ ಜಸ್ಕೋ ಮತ್ತು ಪಾಲಿಕೆ ಅಧಿಕಾರಿಗಳನ್ನು ಪಾಲಿಕೆ ಸದಸ್ಯ ಬಿ.ಎಂ. ನಟರಾಜ್ ಹಾಗೂ ಸಾರ್ವಜನಿಕರು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು. ರಾಘವೇಂದ್ರ ನಗರದಲ್ಲಿ ಒಂದು ತಿಂಗಳಿಂದಲೂ ಸರಿಯಾಗಿ ನೀರು ಬಿಡುತ್ತಿಲ್ಲ. ಮಧ್ಯರಾತ್ರಿಯಲ್ಲಿ ನೀರು ಬಿಡುತ್ತಾರೆ. ಇಲ್ಲಿ ಬಡಜನರು ಹೆಚ್ಚಾಗಿ ವಾಸಿಸುತ್ತಿದ್ದು ಮನೆಗೆ ಸಂಪುಗಳನ್ನು ಕಟ್ಟಿಸಿಕೊಂಡಿಲ್ಲ. ನೀರು ಬಂದಾಗ ಸಂಗ್ರಹಿಸಿಕೊಳ್ಳಬೇಕು. ಹಬ್ಬಕ್ಕೂ ನಮಗೆ ನೀರಿಗೆ ತೊಂದರೆ ಅಗಿದೆ ಎಂದು ತಮ್ಮ ನೋವನ್ನು ಹೊರಹಾಕುತ್ತ ಅಧಿಕಾರಿಗಳನ್ನು ಹಿಗ್ಗಾಮುಗ್ಗಾ ಬೈದರು.
ಖಾಸಗೀಕರಣಕ್ಕೆ ವಿರೋಧ
ಮೈಸೂರು: ಕರ್ನಾಟಕದಲ್ಲಿ ನೀರಿನ ಖಾಸಗೀಕರಣ ನಿಲ್ಲಿಸಬೇಕು ಎಂದು ಆಗ್ರಹಿಸಿ ನೀರಿನ ಹಕ್ಕಿಗಾಗಿ ಜನಾಂದೋಲನ- ಕರ್ನಾಟಕ ಸಂಸ್ಥೆಯು ಸೋಮವಾರ ಜಿಲ್ಲಾಧಿಕಾರಿ ಕಚೇರಿ ಬಳಿ ಸಹಿ ಸಂಗ್ರಹ ಅಭಿಯಾನ ಆಯೋಜಿಸಿತ್ತು. ಕರ್ನಾಟಕದ ಎಲ್ಲಾ ತರಹದ ನೀರಿನ ಖಾಸಗೀಕರಣವನ್ನು ಕೂಡಲೇ ನಿಲ್ಲಿಸಬೇಕು, ಸರ್ಕಾರ ಪ್ರತಿದಿನ ವ್ಯಕ್ತಿಯೊಬ್ಬರಿಗೆ 135 ಲೀಟರ್ ನೀರನ್ನು ಉಚಿತವಾಗಿ ನೀಡಬೇಕು, ರಾಜ್ಯದ ಎಲ್ಲಾ ನಾಗರೀಕರಿಗೂ ನೀರಿನ ಭದ್ರತೆಯನ್ನು ಒದಗಿಸಲು ಅಗತ್ಯ ಕಾಯ್ದೆ ಹೊರ ತರಬೇಕು ಎಂದು ಆಗ್ರಹಿಸಿದರು. ನೀರಿನ ಸರಬರಾಜು ಮಾಡಲು ಸರ್ಕಾರಿ ಸಂಸ್ಥೆಗಳನ್ನು ಪ್ರಜಾತಂತ್ರಗೊಳಿಸಿ, ಅವು ಸಮರ್ಪಕವಾಗಿ ಕಾರ್ಯ ನಿರ್ವಹಿಸಲು ಕ್ರಮ ಕೈಗೊಳ್ಳಬೇಕು. ಒಂದು ತಿಂಗಳು ನಗರದ ಪ್ರತಿ ವಾರ್ಡ್ಲ್ಲೂ ನಾಗರಿಕರಲ್ಲಿ ನೀರು ಸರಬರಾಜು ಖಾಸಗೀಕರಣದಿಂದ ಆಗುವ ಅನಾನುಕೂಲದ ಬಗ್ಗೆ ಅರಿವು ಮೂಡಿಸಿ ಸಹಿ ಸಂಗ್ರಹಿಸುವುದಾಗಿ ಸಂಚಾಲಕ ಎಂ. ಬಸವರಾಜು ತಿಳಿಸಿದರು.