ತಾಲೂಕಾಭಿವೃದ್ಧಿಗೆ 300 ಕೋಟಿ ಮಂಜೂರು
ಕ.ಪ್ರ.ವಾರ್ತೆ , ನಂಜನಗೂಡು , ಜ. 13
ನಂಜನಗೂಡು ತಾಲೂಕಿನ ಸಮಗ್ರ ಅಭಿವೃದ್ಧಿಗಾಗಿ 300 ಕೋಟಿ ಕಾಮಗಾರಿಗೆ ಆಡಳಿತಾತ್ಮಕ ಮಂಜೂರಾತಿ ದೊರಕಿದ್ದು ಫೆಬ್ರವರಿ 15 ರ ಒಳಗೆ ಪಟ್ಟಣಕ್ಕೆ ಭೇಟಿ ನೀಡುವ ಮುಖ್ಯಮಂತ್ರಿ ಸಿದ್ದರಾಮಯ್ಯ ಇವುಗಳಿಗೆ ಚಾಲನೆ ನೀಡುವರಲ್ಲದೆ ನೂತನ ಯೋಜನೆಗಳನ್ನು ಘೋಷಿಸಲಿದ್ದಾರೆ ಎಂದು ಕಂದಾಯ ಸಚಿವ ವಿ.ಶ್ರೀನಿವಾಸ್ ಪ್ರಸಾದ್ ತಿಳಿಸಿದರು.
ಸೋಮವಾರ ಪ್ರವಾಸಿ ಮಂದಿರದಲ್ಲಿ ಜಿಲ್ಲಾಮಟ್ಟದ ಅಧಿಕಾರಿಗಳ ಸಭೆ ನಡೆಸಿ ನಾಲ್ಕು ಗಂಟೆಗಳ ಕಾಲ ಈ ಕುರಿತು ಚರ್ಚೆ ನಡೆಸಿದ ಅವರು ನಂತರ ವರದಿಗಾರರೊಂದಿಗೆ ಮಾತನಾಡಿ ಈ ವಿಷಯ ತಿಳಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ತಾವು ಪ್ರತಿನಿಧಿಸುತ್ತಿರುವ ನಂಜನಗೂಡು ತಾಲೂಕಿನ ಸಮಗ್ರ ಅಭಿವೃದ್ಧಿಯನ್ನು ಗಮನದಲ್ಲಿರಿಸಿ ಈ ಯೋಜನೆಗಳನ್ನು ರೂಪಿಸಲಾಗಿದೆ ಎಂದ ಅವರು, ಮುಖ್ಯಮಂತ್ರಿಗಳು ಚಾಲನೆ ನೀಡುವ ಮುಂಚಿತವಾಗಿ ಈ ಎಲ್ಲಾ ಯೋಜನೆಗಳ ಅನುಷ್ಠಾನದ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಲು ಇಂದಿನ ಸಭೆ ಕರೆಯಲಾಗಿದೆ ಎಂದರು.
ನಬಾರ್ಡಿನ 100 ಕೋಟಿ ವೆಚ್ಚದಲ್ಲಿ ತಾಲೂಕಿನ ಸಮಗ್ರ ರಸ್ತೆಗಳ ಅಭಿವೃದ್ಧಿ, 124 ಗ್ರಾಮಗಳಿಗೆ 91 ಕೋಟಿ ಅನುದಾನದಲ್ಲಿ ಶುದ್ಧ ಕುಡಿಯುವ ನೀರು, 9 ಕೋಟಿ ವೆಚ್ಚದ ಸುಸಜ್ಜಿತ ಕೆಎಸ್ಆರ್ಟಿಸಿ ಬಸ್ ನಿಲ್ದಾಣ, ನಂಜನಗೂಡು ಪಟ್ಟಣಕ್ಕೆ ದಿನದ 24 ಗಂಟೆಗಳ ಕಾಲ 24 ಕೋಟಿ ವೆಚ್ಚದಲ್ಲಿ ಶುದ್ಧ ಕುಡಿಯುವ ನೀರು, 25 ಕೋಟಿ ವೆಚ್ಚದಲ್ಲಿ ಒಳಚರಂಡಿ ತ್ಯಾಜ್ಯ ನೀರಿನ ಶುದ್ಧೀಕರಣ ಘಟಕ, 12.5 ಕೋಟಿ ವೆಚ್ಚದಲ್ಲಿ ಮಿನಿ ವಿಧಾನಸೌಧದ ಪ್ರಥಮ ಹಂತದ ಕಟ್ಟಡ, ನಂಜನಗೂಡು ಪಟ್ಟಣ ಹಾಗೂ ಹುಲ್ಲಹಳ್ಳಿಯ ಪದವಿ ಕಾಲೇಜುಗಳ ಕಾಮಗಾರಿಗೆ ಅಂದು ಮುಖ್ಯಮಂತ್ರಿ ಚಾಲನೆ ನೀಡಲಿದ್ದಾರೆ ಎಂದು ತಿಳಿಸಿದರು.
ಭವನಗಳಿಗೆ ಅನುದಾನ: ವಾಲ್ಮೀಕಿ ಭವನ, ಜಗಜೀವನ್ ರಾಮ್ ಭವನಗಳಿಗೆ ತಲಾ ಒಂದು ಕೋಟಿ ರು., ಹುಲ್ಲಹಳ್ಳಿ, ಹೆಡಿಯಾಲಗಳಲ್ಲಿ ನೂತನ ಪ್ರವಾಸಿ ಮಂದಿರ, ಹೆಡಿಯಾಲದಲ್ಲಿ ಐಟಿಐ ಕಾಲೇಜು, ಪಟ್ಟಣದ ಮಧ್ಯದಲ್ಲಿ ಹಾದುಹೋಗುವ ಹುಲ್ಲಹಳ್ಳಿ ನಾಲೆಗೆ ಕವರ್ ಡೆಕ್ ಹಾಗೂ ಪಟ್ಟಣದಲ್ಲಿ ಅತ್ಯಾಧುನಿಕ ಖಾಸಗಿ ಬಸ್ ನಿಲ್ದಾಣ ಯೋಜನೆಗಳನ್ನು ಅಂದು ಮುಖ್ಯಮಂತ್ರಿಗಳು ಘೋಷಿಸಲಿದ್ದಾರೆ ಎಂದರು. 2 ಕೋಟಿ ವೆಚ್ಚದ ಅಂಬೇಡ್ಕರ್ ಭವನ ಹಾಗೂ 50 ಲಕ್ಷ ವೆಚ್ಚದಲ್ಲಿ ನಿರ್ಮಿಸಲಾಗಿರುವ ಅಂಬೇಡ್ಕರ್ ಪುತ್ಥಳಿಯನ್ನು ಅಂದೇ ಮುಖ್ಯಮಂತ್ರಿಗಳು ಲೋಕಾರ್ಪಣೆ ಮಾಡಲಿದ್ದಾರೆ.
ಸಭೆಯಲ್ಲಿ ಜಿಲ್ಲಾಧಿಕಾರಿ ಶಿಖಾ, ರಾಜ್ಯ ಮುಜರಾಯಿ ಆಯುಕ್ತೆ ಸಾವಿತ್ರಿ, ಜಿಪಂ ಇಒ ಗೋಪಾಲ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಭಿನವ್ ಖರೆ, ಡಿಡಿಪಿಐ, ಬಸಪ್ಪ, ಉಪ-ವಿಭಾಗಾಧಿಕಾರಿ ಬಸವರಾಜು, ಡಿಎಸ್ಡಬ್ಲೂ ಸರಸ್ವತಿ, ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಕಾರ್ಯಪಾಲಕ ಅಭಿಯಂತರ ಪ್ರಭಾಕರ್, ಲೋಕೋಪಯೋಗಿ ಇಲಾಖೆಯ ಸತ್ಯನಾರಾಯಣ, ಕಾವೇರಿ ನೀರಾವರಿ ನಿಗಮದ ಶಿವಮೂರ್ತಿ, ತಹಸೀಲ್ದಾರ್ ಅರುಳ್ ಕುಮಾರ್, ಪ್ರೊಬೇಷನರಿ ಐಎಎಸ್ ಅಧಿಕಾರಿ ಅನಿಯಸ್ ಜಾಯ್, ಪುರಸಭಾ ಮುಖ್ಯಾಧಿಕಾರಿ ಡಿ.ರಮೇಶ್, ಶ್ರೀಕಂಠೇಶ್ವರ ಕಾರ್ಯನಿರ್ವಾಹಕ ಅಧಿಕಾರಿ ಶಿವಲಿಂಗೇಗೌಡ, ಸಹಾಯಕ ಅಧಿಕಾರಿ ಜಾಗರಾಜ್ ಇನ್ನಿತರರು ಉಪಸ್ಥಿತರಿದ್ದರು.