ಬಡ್ತೆಕದಂ ಕಾರ್ಯಕ್ರಮಕ್ಕೆ ಡಿಸಿ ಚಾಲನೆ
ಮೈಸೂರು: ಜಿಲ್ಲಾಡಳಿತ, ಜಿಪಂ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮತ್ತು ಅಂಗವಿಕಲರು ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಹಾಗೂ ಅಂಗವಿಕಲರ ವಿವಿಧ ಸ್ವಯಂ ಸೇವಾ ಸಂಸ್ಥೆಗಳ ಸಹಯೋಗದೊಂದಿಗೆ ಹಮ್ಮಿಕೊಂಡಿದ್ದ ನ್ಯಾಷನಲ್ ಟ್ರಸ್ಟ್ ಕಾಯ್ದೆ- 1999ರ ಅಡಿ ಬಡ್ತೆಕದಂ ಎಂಬ ಕಾರ್ಯಕ್ರಮದ ಜಾಥಾಗೆ ಜಿಲ್ಲಾಧಿಕಾರಿ ಸಿ.ಶಿಖಾ ಚಾಲನೆ ನೀಡಿದರು.
ಬುದ್ದಿಮಾಂದ್ಯ, ಸೆರೆಬ್ರಲ್ ಪಾಲ್ಸಿ, ಆಟಿಸಂ ಮತ್ತು ಬಹುವಿಧ ಅಂಗವಿಕಲ ಮಕ್ಕಳು ಮತ್ತು ಪೋಷಕರಿಗೆ ನ್ಯಾಷನಲ್ ಟ್ರಸ್ಟ್ ಕಾಯ್ದೆಯಡಿಯಲ್ಲಿ ಅನುಷ್ಠಾನಗೊಳಿಸುತ್ತಿರುವ ವಿವಿಧ ಪ್ರಮುಖ ಯೋಜನೆಗಳಾದ ನಿರಾಮಯ, ಪೋಷಕತ್ವ ಮುಂತಾದವುಗಳ ಬಗ್ಗೆ ಅರಿವು ಮೂಡಿಸುವುದು ಮತ್ತು ಸಮುದಾಯದ ಜನರಿಗೆ ಈ ಕಾಯ್ದೆಯ ಬಗ್ಗೆ ಜಾಗೃತಿ ಮೂಡಿಸಲು ಜಾಥಾ ಹಮ್ಮಿಕೊಳ್ಳಲಾಗಿತ್ತು.
ಈ ಕಾರ್ಯಕ್ರಮದಲ್ಲಿ ಸುಮಾರು 18 ಸ್ವಯಂ ಸೇವಾ (ಬುದ್ಧಿಮಾಂದ್ಯ, ಸೆರೆಬ್ರಲ್ ಪಾಲ್ಸಿ, ಆಟಿಸಂ ಮತ್ತು ಬಹುವಿಧ ವಿಕಲಚೇತನರಿಗೆ ಸೇವೆ ಸಲ್ಲಿಸುತ್ತಿರುವ) ಸಂಸ್ಥೆಗಳಿಂದ ಮಕ್ಕಳು, ಪೋಷಕರು, ಶಿಕ್ಷಕರು ಮತ್ತು ಆ ಗ್ರಾಮೀಣ ಪುನರ್ವಸತಿ ಕಾರ್ಯಕರ್ತರು ಹಾಗೂ ಅಧಿಕಾರಿಗಳು ಭಾಗವಹಿಸಿದ್ದ ಜಾಥಾವು ಜಿಲ್ಲಾಧಿಕಾರಿ ಕಚೇರಿಯಿಂದ ಆರಂಭವಾಗಿ ನಂಜರಾಜ ಬಹದ್ದೂರ್ ಕಲ್ಯಾಣ ಮಂಟಪಕ್ಕೆ ಬಂದು ತಲುಪಿತು.
ನಂಜರಾಜ ಬಹದ್ಧೂರ್ ಛತ್ರದಲ್ಲಿ ನಡೆದ ಸಭಾ ಕಾರ್ಯಕ್ರಮವನ್ನು ಹೆಲ್ಲನ್ ಕೆಲ್ಲರ್ ವಿಶೇಷ ಶಿಕ್ಷಕರ ತರಬೇತಿ ಕೇಂದ್ರದ ಉಪನಿರ್ದೇಶಕಿ ಭಾಗ್ಯ ಮಹದೇವಪ್ಪ ಉದ್ಘಾಟಿಸಿದರು. ಸಂಪನ್ಮೂಲ ವ್ಯಕ್ತಿಗಳಾದ ದೇವಿಕಲಾ, ಬಿ.ಎಸ್.ಆರ್. ಮುದ್ರೆ, ಲಲಿತಾ ನಾರಾಯಣ್ ಉಪನ್ಯಾಸ ನೀಡಿದರು. ಪ್ರೋಗ್ರಾಂ ಆಫೀಸರ್ ನಾಗೇಶ್ ಬಿಲ್ವಾ, ರಾಚಪ್ಪ, ಶ್ರೀಧರ್ ದೀಕ್ಷಿತ್, ಭಾರತೀಯ ರೆಡ್ಕ್ರಾಸ್ ಸೊಸೈಟಿ ಸಭಾಪತಿ ಕಮಲಾ ರಾಮನ್ ಇದ್ದರು. ಆರ್. ಮುನಿರಾಜು ನಿರೂಪಿಸಿದರು, ಹೇಮಾಮಾಲಿನಿ ಕೃಪಾಕರ್ ಸ್ವಾಗತಿಸಿದರು. ಎಂ. ಮುರಳೀಧರ ಪ್ರಾಸ್ತಾವಿಕವಾಗಿ ಮಾತನಾಡಿದರು. ಎಚ್.ಎಸ್. ಬಲರಾಮ ವಂದಿಸಿದರು.