ಬೆಳೆ ಕಟಾವು ರೈತರಿಗೆ ಸಲಹೆ
ಮೈಸೂರು: ಜಿಲ್ಲೆಯಲ್ಲಿ ಜ.14 ರಿಂದ 17 ರವರೆಗೆ ಮಳೆ ಬರುವ ಸಾಧ್ಯತೆ ಇಲ್ಲದಿರುವ ಹಿನ್ನೆಲೆಯಲ್ಲಿ ರೈತರು ತಮ್ಮ ಬೆಳೆಗಳನ್ನು ಕಟಾವು ಮಾಡಬಹುದು ಎಂದು ನಾಗನಹಳ್ಳಿಯ ಸಮಗ್ರ ಕೃಷಿ ಹವಾಮಾನ ವಿಭಾಗದ ತಜ್ಞರು ತಿಳಿಸಿದ್ದಾರೆ.
ಈ ವಾರದ ಹವಾಮಾನ ಮುನ್ಸೂಚನೆ ಪ್ರಕಾರ ಗರಿಷ್ಠ ಉಷ್ಣಾಂಶ 30 - 31 ಮತ್ತು ಕನಿಷ್ಠ ಉಷ್ಣಾಂಶ 16 - 17 ರವರೆಗೆ ದಾಖಲಾಗುವ ಸಾಧ್ಯತೆಯಿದೆ ಎಂದು ವಿಭಾಗದ ಕ್ಷೇತ್ರಾಧೀಕ್ಷಕ ಡಾ.ಸಿ. ಗೋವಿಂದರಾಜು ಹಾಗೂ ಸಹಸಂಶೋಧಕ ಎನ್.ನರೇಂದ್ರಬಾಬು ತಿಳಿಸಿದ್ದಾರೆ.
ಬೆಳಗಿನ ಗಾಳಿಯ ತೇವಾಂಶ ಶೇ.72 ರಿಂದ 75 ರವರೆಗೆ, ಮಧ್ಯಾಹ್ನದ ತೇವಾಂಶ ಶೇ.41 ರಿಂದ 44 ಮತ್ತು ಗಾಳಿಯು ಗಂಟೆಗೆ ಸರಾಸರಿ 5-6 ಕಿ.ಮೀ ವೇಗದಲ್ಲಿ ಬೀಸುವ ಸಾಧ್ಯತೆಯಿದೆ ಎಂದಿದ್ದಾರೆ.
ಕೃಷಿ ಮತ್ತು ತೋಟಗಾರಿಕೆ ಬೆಳೆಗೆ ಮುಂದಿನ 4 ದಿನಗಳಲ್ಲಿ ಒಣಹವೆ ಇರುವುದರಿಂದ ನೀರನ್ನು ಹಾಯಿಸುವುದು ಸೂಕ್ತ.
ದವಸ ದಾನ್ಯಗಳನ್ನು ಕಟಾವು ಮಾಡಿ, ಬಿತ್ತನೆ ಬೀಜಗಳನ್ನು ಸರಿಯಾಗಿ ಒಣಗಿಸಿಡಬೇಕು. ಅಂದರೆ ಏಕದಳ ಧಾನ್ಯಗಳ ತೇವಾಂಶ ಶೇ.11 ರಿಂದ 12, ದ್ವಿದಳ ದಾನ್ಯಗಳ ತೇವಾಂಶ 9, ಎಣ್ಣೆಕಾಳುಗಳ ತೇವಾಂಶ ಶೇ. 8 ಹಾಗೂ ತರಕಾರಿ ಬೀಜಗಳು ಶೇ.5 ರಿಂದ 6 ರಷ್ಟಿರಬೇಕು. ಇದರಿಂದ ಹೆಚ್ಚು ಕೆಡದಂತೆ ಬೀಜಗಳನ್ನು ಸಂಸ್ಕರಣೆ ಮಾಡಬಹುದು. ಜತೆಗೆ ಉಗ್ರಾಣ ಕೀಟದ ಬಾಧೆಯನ್ನು ಕಡಿಮೆ ಮಾಡಬಹುದು.
ಮಾವು ಹೂವು ಬಿಡುವ ಸಂದರ್ಭದಲ್ಲಿ ತಗಲುವ ಜಿಗಿಹುಳು ಮತ್ತು ಬೂದಿರೋಗ ಹತೋಟಿಗೆ ಗಿಡಗಳಿಗೆ 1.5 ಮಿ.ಲೀ. ರೋಗರ್ ಜತೆಗೆ 3 ಗ್ರಾಂ ನೀರಿನಲ್ಲಿ ಕರಗುವ ಗಂಧಕವನ್ನು ಪ್ರತಿ ಲೀಟರ್ ನೀರಿನಲ್ಲಿ ಮಿಶ್ರಣ ಮಾಡಿ ಸಿಂಪರಣೆ ಮಾಡಬೇಕು ಎಂದು ಅವರು ಸಲಹೆ ನೀಡಿದ್ದಾರೆ. ಆಸಕ್ತರು ಮಾಹಿತಿಗೆ ದೂ. 0821 2591267, ಮೊ. 8095227713 ಅಥವಾ 9343532154 ಸಂಪರ್ಕಿಸಬಹುದು.