ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಮದ್ಯ ವ್ಯಸನ ಬಿಟ್ಟು ಸತ್ಕಾರ್ಯ ಮಾಡಿ

Vishwanath S
Updated On : 14 Jan 2014, 1:08 am

ಸುತ್ತೂರು: ಕವಿ, ಕಲಾವಿದ, ಸಂಶೋಧಕ, ವಿಜ್ಞಾನಿ ಮೊದಲಾದವರೆಲ್ಲರಲ್ಲೂ ಇರುವ ಅಮಲು ಸಾತ್ವಿಕವಾಗಿದ್ದಾಗ ಮಾತ್ರ ಸಾರ್ಥಕ ಜೀವನ ಸಾಧ್ಯವಾಗುತ್ತದೆ ಎಂದು ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಹೇಳಿದರು.
ಸುತ್ತೂರು ಶ್ರೀಕ್ಷೇತ್ರದ ಶ್ರೀ ಸಿದ್ಧನಂಜ ದೇಶಿಕೇಂದ್ರ ಮಂಗಳ ಮಂಟಪದಲ್ಲಿ ಕಳೆದ ಹತ್ತು ದಿನಗಳಿಂದ ನಡೆದ ಕುಡಿತ ತ್ಯಜಿಸುವ ಉಚಿತ ಶಿಬಿರದ ಸಮಾರೋಪ ಸಮಾರಂಭದಲ್ಲಿ ಆಶೀರ್ವಚನ ನೀಡಿದ ಅವರು, ಅಮಲು ಎಂದರೆ ಬೆನ್ನುಹತ್ತಿ ಹೋಗುವುದು. ಉಪಕಾರ, ಸೇವೆ, ಇವೇ ಮೊದಲಾದ ಜೀವನ ಮೌಲ್ಯಗಳನ್ನು ಅಳವಡಿಸಿಕೊಂಡಾಗ ಮಾತ್ರ ದುಶ್ಚಟಗಳಿಂದ ದೂರವಿರಲು ಸಾಧ್ಯವಾಗುತ್ತದೆ ಎಂದರು.
ದುಶ್ಚಟಗಳು ಹಳ್ಳಕೊಳ್ಳಗಳತ್ತಲೇ ಹರಿಯುವ ನೀರಿದ್ದಂತೆ. ಕೆಳಮುಖವಾಗಿ ಹರಿಯುವ ನೀರಿಗೆ ಅಣೆಕಟ್ಟು ಕಟ್ಟಿ ಅದರ ನೈಜ ಶಕ್ತಿ ಏನೆಂಬುದರ ಅರಿವು ಮೂಡಿಸುವ ಕಾರ್ಯವನ್ನು ಶಿಬಿರದಲ್ಲಿ ಮಾಡಲಾಗಿದೆ. ಸಾಮಾಜಿಕವಾಗಿ, ಮಾನಸಿಕವಾಗಿ ಹಾಗೂ ದೈಹಿಕವಾಗಿ ಕೆಡುಕುಂಟು ಮಾಡುವ ಮದ್ಯ ವ್ಯಸನದಿಂದ ಹೊರಬಂದು ಜೀವನ ಶಕ್ತಿಯನ್ನು ಸತ್ಕಾರ್ಯಗಳಿಗೆ ಬಳಸಿ, ಸುಗಮ ಜೀವನ ನಡೆಸುವಂತೆ ಶಿಬಿರಾರ್ಥಿಗಳಿಗೆ ಕರೆ ನೀಡಿದರು.
ಮೂರು ಮುಖದ ಕಾಯಿಲೆ: ಆಲ್ಕೋಹಾಲಿಕ್ ಅನಾನಿಮಸ್ ಇಂಡಿಯಾ ಸಂಸ್ಥೆಯ ಶ್ರೀಕಾಂತ್ ಮಾತನಾಡಿ, ಮದ್ಯಪಾನ ಎನ್ನುವುದು ಮೂರು ಮುಖದ ಕಾಯಿಲೆ. ವ್ಯಕ್ತಿಯ ದೈಹಿಕ, ಮಾನಸಿಕ ಹಾಗೂ ಆಧ್ಯಾತ್ಮಿಕ ಮುಖಗಳನ್ನು ಆವರಿಸಿಕೊಳ್ಳುವ ಈ ಕಾಯಿಲೆ ವ್ಯಸನಿಗಳನ್ನಷ್ಟೇ ಅಲ್ಲದೆ ಅವನ ಇಡೀ ಕುಟುಂಬವನ್ನೇ ಸರ್ವನಾಶದತ್ತ ದೂಡುತ್ತದೆ. ಬದಲಾವಣೆ ನಮ್ಮಿಂದಲೇ ಆಗಬೇಕು ಎಂಬುದನ್ನು ವ್ಯಸನಿಗಳು ಅರಿಯಬೇಕಿದೆ. ಇಂತಹ ಸ್ವಯಂ ಅರಿವು ಮೂಡಿಸುವ ಸ್ವಾರ್ಥರಹಿತ ಸೇವಾ ಶಿಬಿರ ಉಚಿತವಾಗಿ ಏರ್ಪಡಿಸಿರುವ ಸುತ್ತೂರು ಶ್ರೀಮಠಕ್ಕೆ ಎಷ್ಟು ಕೃತಜ್ಞತೆ ಸಲ್ಲಿಸಿದರೂ ಕಡಿಮೆಯೇ ಎಂದು ಧನ್ಯತಾಭಾವ ವ್ಯಕ್ತಪಡಿಸಿದರು.
ಮದ್ಯವ್ಯಸನ ನಿರ್ಮೂಲನಾ ತಂಡದ ಸದಸ್ಯ ಷಣ್ಮುಗಂ ಮಾತನಾಡಿ, ಕುಡಿತ ಬಿಡಿಸಲು ಪ್ರಪಂಚದಲ್ಲೇ ಯಾವುದೇ ರೀತಿಯ ಮದ್ದು-ಮಾತ್ರೆಗಳಿಲ್ಲ ಆದರೆ ಇವತ್ತೊಂದು ದಿನ ನಾನು ಕುಡಿತದಿಂದ ದೂರ ಇದ್ದೇನೆ ಎಂಬ ದೃಢ ಸಂಕಲ್ಪದೊಂದಿಗೆ ದಿನಚರಿ ಆರಂಭಿಸುವುದೇ ಈ ದಿಶೆಯಲ್ಲಿ ತಾವು ಗುರಿ ಮುಟ್ಟಲು ಕಂಡುಕೊಂಡಿರುವ ದಾರಿ ಎಂದರು.
ಸದಸ್ಯ ಲಕ್ಷ್ಮೀನಾರಾಯಣ್, ಜೆಎಸ್‌ಎಸ್ ಕಾಲೇಜಿನ ಕಾರ್ಯನಿರ್ವಾಹಕ ಅಧಿಕಾರಿ ಪ್ರೊ.ಬಿ.ವಿ. ಸಾಂಬಶಿವಯ್ಯ, ಪ್ರಾಂಶುಪಾಲ ಮಲ್ಲಿಕಾರ್ಜುನ ಪಂಡಿತ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement