ಲಾರಿ ಮಾಲೀಕರ ವಿಜಯೋತ್ಸವ
ಟಿ. ನರಸೀಪುರ: ಬೇಡಿಕೆಗಳನ್ನು ಈಡೇರಿಸಲು ಸರ್ಕಾರ ಭರವಸೆ ನೀಡಿದ ಹಿನ್ನೆಲೆಯಲ್ಲಿ ಟಿ.ನರಸೀಪುರದಲ್ಲಿ ಕಳೆದೆರಡು ದಿನಗಳಿಂದ ನಡೆಯುತ್ತಿದ್ದ ಲಾರಿ ಮುಷ್ಕರ ಹಿಂಪಡೆಯಲಾಗಿದೆ.
ರಾಜ್ಯ ಲಾರಿ ಮಾಲೀಕರ ಸಂಘಟನೆ ನಡೆಸುತ್ತಿದ್ದ ಮುಷ್ಕರಕ್ಕೆ ಬೆಂಬಲ ಸೂಚಿಸಿ ತಾ.ಟಿಪ್ಪರ್ ಹಾಗೂ ಲೈಲ್ಯಾಂಡ್ ಲಾರಿ ಮಾಲೀಕರ ಸಂಘಟನೆ ಕಾರ್ಯ ಚಟುವಟಿಕೆಗಳನ್ನು ಸ್ಥಗಿತಗೊಳಿಸಿ ಮುಷ್ಕರ ಆರಂಭಿಸಿದ್ದರು. ರಾಜ್ಯ ಸರ್ಕಾರ ಸೋಮವಾರ ಬೆಂಗಳೂರಿನಲ್ಲಿ ಲಾರಿ ಮಾಲೀಕರೊಂದಿಗೆ ನಡೆಸಿದ ಮಾತುಕತೆ ಫಲಪ್ರದವಾಗಿದ್ದಕ್ಕೆ ಲಾರಿ ಮುಷ್ಕರ ಕೈ ಬಿಡಲಾಯಿತು.
ಪಟ್ಟಣದ ಹೈವೇ ನೂತನ ಸೇತುವೆ ಬಳಿ ಶ್ರೀ ಗುಂಜಾ ನರಸಿಂಹಸ್ವಾಮಿ ದೇವಾಲಯದ ಸಮೀಪ ಎರಡು ದಿನಗಳಿಂದ ಲಾರಿಗಳನ್ನು ಸಾಲಾಗಿ ನಿಲ್ಲಿಸಿ, ಧರಣಿ ನಡೆಸುತ್ತಿದ್ದರು. ಮೈಸೂರ್ ಸಿಟಿ ಲೋಕಲ್ ಲಾರಿ ಮಾಲೀಕರ ಸಂಘದ ಅಧ್ಯಕ್ಷ ಬಿ.ರೇವಣ್ಣ ಮಾತನಾಡಿ, ಜಿಲ್ಲಾಡಳಿತ ಇಬ್ಬಗೆ ಧೋರಣೆ ಮೂಲಕ ಒಡೆದು ಆಳುವ ನೀತಿ ಅನುಸರಿಸುತ್ತಿದೆ. ಲಾರಿ ಮಾಲೀಕರ ನಡುವೆ ಕಂದಕ ಸೃಷ್ಟಿಸಿ, ಎತ್ತಿ ಕಟ್ಟಲಾಗುತ್ತಿದೆ. ಮುಷ್ಕರ ಆರಂಭಿಸುತ್ತಲೇ ಮರಳಿನ ಅಭಾವವಿದೆ ಎನ್ನುತ್ತಿದ್ದ ಅಧಿಕಾರಿಗಳು 500 ಪರ್ಮಿಟ್ ವಿತರಣೆ ಮಾಡಿದೆ ಎಂದು ಆರೋಪಿಸಿದರು.
ಟಿಪ್ಪರ್ ಲಾರಿ ಮಾಲೀಕರ ಸಂಘದ ಅಧ್ಯಕ್ಷ ಎಂ.ಪರಶಿವಮೂರ್ತಿ, ಲೋಕಲ್ ಲಾರಿ ಮಾಲೀಕರ ಸಂಘದ ಕಾರ್ಯದರ್ಶಿ ಸ್ವಾಮಿ ಮಾತನಾಡಿದರು. ಲೈಲ್ಯಾಂಡ್ ಲಾರಿ ಮಾಲೀಕರ ಸಂಘದ ಅಧ್ಯಕ್ಷ ಎಲ್. ರವಿ, ಲಾರಿ ಮಾಲೀಕರಾದ ಅಬ್ದುಲ್ ಜಾವಿದ್, ಪ್ರಸನ್ನ, ದಿನೇಶ್, ಮಹದೇವು, ಅತ್ತಿಕ್ ಅಹಮದ್, ಮಹದೇವು, ಭರತ್, ರಮೇಶ್, ಜಗದೀಶ್, ಲಾರಿ ಮಾಲೀಕ, ಉದ್ಯಮಿ ಶಂಭುದೇವನಪುರ ಸುರೇಶ್ ಮಾತನಾಡಿದರು.