ಲೋಹ, ಮಣ್ಣು ಸಂಗ್ರಹಕ್ಕೆ ಚಾಲನೆ
ಮೈಸೂರು: ಭಾರತೀಯ ಒಕ್ಕೂಟ ವ್ಯವಸ್ಥೆ ರಚನೆಯಲ್ಲಿ ಪ್ರಮುಖ ಪಾತ್ರ ವಹಿಸಿ ಉಕ್ಕಿನ ಮನುಷ್ಯ ಎಂದೇ ಕರೆಸಿಕೊಳ್ಳುವ ಸರ್ದಾರ್ ವಲ್ಲಭಾಯ್ ಪಟೇಲ್ ಅವರ ಏಕತಾ ಪ್ರತಿಮೆಯನ್ನು ನರ್ಮದಾ ನದಿ ತೀರದಲ್ಲಿ ಸ್ಥಾಪಿಸುವ ಬೃಹತ್ ಕಾಮಗಾರಿಗೆ ಹಳ್ಳಿ ಹಳ್ಳಿಗಳಿಂದ ಲೋಹ, ಮಣ್ಣು ಸಂಗ್ರಹಿಸುವ ಕಾರ್ಯಕ್ಕೆ ಬಿಜೆಪಿ ನಾಳೆಯಿಂದ ಚಾಲನೆ ನೀಡಲಿದೆ.
ಜ.16 ರಂದು ನಗರಮಟ್ಟದಿಂದ ಚಾಮುಂಡಿಪುರಂನಲ್ಲಿ ಹಾಗೂ ಗ್ರಾಮಾಂತರ ಮಟ್ಟದಿಂದ ನಂಜನಗೂಡು ತಾಲೂಕಿನ ಶಿರಮಳ್ಳಿ ಗ್ರಾಮದಲ್ಲಿ ಅರ್ಧ ಕೆಜಿಯಷ್ಟು ಲೋಹ ಹಾಗೂ ಪವಿತ್ರ ಮಣ್ಣನ್ನು ಸಂಗ್ರಹಿಸಲಾಗುವುದು. ಗ್ರಾಮಗಳಿಂದ ಸಂಗ್ರಹಿಸುವಾಗ ಆಯಾ ಗ್ರಾಪಂ ಪದಾಧಿಕಾರಿಗಳ ಭಾವಚಿತ್ರಗಳನ್ನು ಪಡೆದು, ನಂತರ ಅದನ್ನು ಏಕತಾ ಪ್ರತಿಮೆ ಬಳಿ ಸ್ಥಾಪಿಸುವ ವಸ್ತುಸಂಗ್ರಹಾಲಯದಲ್ಲಿ ಇಡಲಾಗುವುದು ಎಂದು ಸರ್ದಾರ್ ಪಟೇಲರ ಏಕತಾ ಪ್ರತಿಮೆ ಲೋಹ ಸಂಗ್ರಹಣಾ ಸಹಕಾರ ಸಮಿತಿ ನಗರ ಸಂಚಾಲಕ, ಮಾಜಿ ಶಾಸಕ ತೋಂಟದಾರ್ಯ ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
2500 ಕೋಟಿ ಬೇಕು: ನರ್ಮದಾ ನದಿ ತೀರದಲ್ಲಿ ಗಿರಿಜನರು ವಾಸಿಸುವ ಸ್ಥಳದಲ್ಲಿ ಸ್ಥಾಪಿಸಲು ಉದ್ದೇಶಿಸಿರುವ ಏಕತಾ ಪ್ರತಿಮೆ ನಿರ್ಮಾಣಕ್ಕೆ ಅಂದಾಜು 2500 ಕೋಟಿ ವೆಚ್ಚ ತಗುಲಲಿದೆ. ಈ ಕಾರ್ಯವನ್ನು ಗುಜರಾತ್ ಸರ್ಕಾರವೇ ಮಾಡಬಹುದಿತ್ತು. ಆದರೆ, ಭಾರತದ ಎಲ್ಲ ಹಳ್ಳಿಗಳು ಈ ಕಾರ್ಯದಲ್ಲಿ ಭಾಗವಹಿಸಲಿ ಎಂಬ ಉದ್ದೇಶದಿಂದ ಲೋಹ, ಮಣ್ಣು ಸಂಗ್ರಹಕ್ಕೆ ಮುಂದಾಗಿದ್ದೇವೆ. ದೇಶದ 650 ಲಕ್ಷ ಹಳ್ಳಿಗಳು ಇದರಲ್ಲಿ ಭಾಗವಹಿಸುತ್ತಿದ್ದು, ಪಕ್ಷಾತೀತವಾಗಿ ಸಂಗ್ರಹಿಸಲಾಗುವುದು.
ಇಲ್ಲಿ ಸಂಗ್ರಹಿಸಿದ ಮಣ್ಣು, ಲೋಹವನ್ನು ಭಾರಿ ವಾಹನದ ಮುಖಾಂತರ ಅಹಮದಾಬಾದ್‌ಗೆ ಕಳುಹಿಸಲಾಗುವುದು. ಇದರಲ್ಲಿ ರಾಜಕೀಯ ಬೆರಸದೆ ಇಡೀ ವಿಶ್ವದಲ್ಲಿಯೇ ಅತ್ಯಂತ ಎತ್ತರ ಪ್ರತಿಮೆ ನಿರ್ಮಿಸುತ್ತಿರುವ ನಮ್ಮ ಸಮಿತಿಗೆ ಬೆಂಬಲ ನೀಡಬೇಕು. ಈ ಮೂಲಕ ಹೊಸ ಚರಿತ್ರೆ ರೂಪಿಸಬೇಕು. ಮುಂದಿನ ದಿನಗಳಲ್ಲಿ ಶಾಲಾ- ಕಾಲೇಜು ಮಟ್ಟದಲ್ಲಿ ಏಕತೆ ಬಗ್ಗೆ ಪ್ರಬಂಧ ಸ್ಪರ್ಧೆ, ಚರ್ಚಾ ಸ್ಪರ್ಧೆ ಏರ್ಪಡಿಸುವ ಕುರಿತು ಚಿಂತಿಸಲಾಗಿದೆ ಎಂದರು.
ಲೋಹ ಸಂಗ್ರಹಣಾ ಸಮಿತಿಯ ಜಿಲ್ಲಾ ಸಂಚಾಲಕ ಮೃಗಾಲಯ ಪ್ರಾಧಿಕಾರದ ಮಾಜಿ ಅಧ್ಯಕ್ಷ ಎಂ. ನಂಜುಂಡಸ್ವಾಮಿ, ಎನ್.ಆರ್. ಕೃಷ್ಣಪ್ಪಗೌಡ, ರಮೇಶ್, ಶಾಸಕ ಗೋ. ಮಧುಸೂದನ್ ಇದ್ದರು.