ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಸಚಿವರ ಮನೆ ಎದುರು ಕಬ್ಬು ಬೆಳೆಗಾರರ ಧರಣಿ

Vishwanath S
Updated On : 14 Jan 2014, 1:06 am

ಕ.ಪ್ರ.ವಾರ್ತೆ ,  ಮೈಸೂರು ,  ಜ. 13
ನಂಜನಗೂಡು ತಾ. ಅಳಗಂಚಿಯಲ್ಲಿರುವ ಬಣ್ಣಾರಿ ಅಮ್ಮನ್ ಸಕ್ಕರೆ ಕಾರ್ಖಾನೆ ಸರ್ಕಾರದ ಆದೇಶ ಪಾಲಿಸದೆ ಪ್ರತಿ ಟನ್ ಕಬ್ಬಿಗೆ 2400 ಮಾತ್ರ ನೀಡಿದೆ ಎಂದು ಆರೋಪಿಸಿ ಕಬ್ಬು ಬೆಳೆಗಾರರ ಸಂಘದ ಪದಾಧಿಕಾರಿಗಳು ಜಿಲ್ಲಾ ಉಸ್ತುವಾರಿ ಸಚಿವ ವಿ. ಶ್ರೀನಿವಾಸಪ್ರಸಾದ್ ಅವರ ನಿವಾಸದ ಎದುರು ಸೋಮವಾರ ಪ್ರತಿಭಟಿಸಿದರು.
ರಾಜ್ಯ ಸರ್ಕಾರ ಟನ್ ಕಬ್ಬಿಗೆ 2,650 ನಿಗದಿಪಡಿಸಿ ಆದೇಶಿಸಿದೆ. ಆದರೂ ಬಣ್ಣಾರಿ ಕಾರ್ಖಾನೆಯು ಸರ್ಕಾರದ ಆದೇಶ ಪಾಲಿಸದೆ ನಿರ್ಲಕ್ಷ್ಯವಹಿಸಿ ಟನ್‌ಗೆ 2,400 ಮಾತ್ರ ಪಾವತಿಸುತ್ತಿದೆ. ಇದರಿಂದ ರೈತರನ್ನು ಸಂಕಷ್ಟಕ್ಕೆ ತಳ್ಳಿದಂತಾಗಿದೆ. ಅಲ್ಲದೆ ಹಿಂದಿನ ವರ್ಷದ ಕಬ್ಬಿನ ಬಾಕಿ ಹಣದ ಬಗ್ಗೆ ಸರ್ಕಾರ ಯಾವುದೆ ನಿರ್ಧಾರ ಕೈಗೊಂಡಿಲ್ಲ ಎಂದು ಆರೋಪಿಸಿದರು.
ಬಣ್ಣಾರಿ ಸಕ್ಕರೆ ಕಾರ್ಖಾನೆಯಲ್ಲಿ ಟನ್ ಕಬ್ಬಿಗೆ 110 ಕೆ.ಜಿ ಸಕ್ಕರೆ ಇಳುವರಿ ಬರುತ್ತಿದೆ. ಎಲ್ಲಾ ಉಪ ಉತ್ಪನ್ನಗಳ ಆದಾಯ ಬರುತ್ತಿದ್ದರೂ ಸಹ ಕಬ್ಬು ಬೆಲೆ ನಿಗದಿ ಮಾಡುವಾಗ ರಾಜ್ಯ ಸರ್ಕಾರ ನ್ಯಾಯಯುತ ಕಬ್ಬಿನ ಬೆಲೆ ನಿಗದಿ ಮಾಡದೆ ರೈತರಿಗೆ ದ್ರೋಹ ಬಗೆಯುತ್ತಿದೆ. ಸಚಿವ ವಿ.ಶ್ರೀನಿವಾಸಪ್ರಸಾದ್ ಅವರು ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಭೆ ನಡೆಸಿ ರೈತರಿಗೆ ನ್ಯಾಯಯುತ ಬೆಲೆ ನಿಗದಿಪಡಿಸಿ ಕೊಡುವಲ್ಲಿ ವಿಫಲರಾಗಿದ್ದಾರೆ ಎಂದು ಅವರು ಆರೋಪಿಸಿದರು.
ಕೂಡಲೇ ಸಚಿವರು ಬಣ್ಣಾರಿ ಅಮ್ಮನ್ ಸಕ್ಕರೆ ಕಾರ್ಖಾನೆ ಮಾಲೀಕರ ಜೊತೆ ಮಾತುಕತೆ ನಡೆಸಿ ರೈತರಿಗೆ ಸರ್ಕಾರ ನಿಗದಿಪಡಿಸಿರುವ ಮೊತ್ತದ ಜೊತೆಗೆ ಬಾಕಿ ಹಣ ಕೊಡಿಸಬೇಕು ಎಂದು ಆಗ್ರಹಿಸಿದರು.
ಮಾತಿನ ಚಕಮಕಿ: ಸಚಿವರ ಮನೆ ಮುಂದೆ ಧರಣಿ ನಡೆಸುತ್ತಿದ್ದ ರೈತರು ಸ್ಥಳದಲ್ಲಿಯೇ ಅಡುಗೆ ಮಾಡಲು ಮುಂದಾದರು. ಈ ವೇಳೆ ಪೊಲೀಸರು ಮಧ್ಯ ಪ್ರವೇಶಿಸಿ ಅಡುಗೆ ಮಾಡಬೇಡಿ. ನಾವೆ ನಿಮಗೆ ಊಟ ಕೊಡಿಸುವುದಾಗಿ ಭರವಸೆ ನೀಡಿದರು.
ಈ ವೇಳೆ ಸಂಘದ ಅಧ್ಯಕ್ಷ ಕುರುಬೂರು ಶಾಂತಕುಮಾರ್ ಮಾತನಾಡಿ, ನಿಮ್ಮ ಸಂಬಳದ ಅಥವಾ ಯಾರನ್ನೊ ಬೆದರಿಸಿ ತಂದ ಊಟ ನಮಗೆ ಬೇಡ. ಸರ್ಕಾರದಿಂದ ಊಟ ಕೊಡಿಸುವುದಾದರೆ ಕೊಡಿಸಿ, ನಾಳೆಯೂ ಒಂದಷ್ಟು ಮಂದಿ ರೈತರು ಬರುತ್ತಾರೆ. ಆದರೆ ನೀವು ಬೆದರಿಸಿ ತರುವ ಊಟವನ್ನು ನಾವು ಮಾಡುವುದಿಲ್ಲ. ನಾವೆ ತಯಾರಿಸಿಕೊಳ್ಳುತ್ತೇವೆ ಎಂದು ಪಟ್ಟು ಹಿಡಿದರು.
ನಂತರ ರೈತರು ತಾವೆ ತಯಾರಿಸಿಕೊಂಡು ಬಂದಿದ್ದ ಅಡುಗೆಯನ್ನು ತಿಂದರು. ಅಲ್ಲದೆ ಪೊಲೀಸರು ಸಚಿವರ ಮನೆ ಎದುರು ಶಾಮಿಯಾನ ಅಳವಡಿಕೆಗೂ ಅಡ್ಡಿಪಡಿಸಿದರು.
ಸಂಘದ ಅಧ್ಯಕ್ಷ ಕುರುಬೂರು ಶಾಂತಕುಮಾರ್, ಕಿರಂಗಸೂರು ಶಂಕರ್, ಅತ್ತಹಳ್ಳಿ ದೇವರಾಜ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement