'ಸಮಾಜದ ಕೊಡುಗೆ ಗುರಿಯಾಗಲಿ'
ಮೈಸೂರು: ಸಮಾಜಕ್ಕೆ ಕೊಡುಗೆ ನೀಡಲು ಹಾಗೂ ಉತ್ತಮ ವ್ಯಕ್ತಿತ್ವ ರೂಪಿಸಿಕೊಳ್ಳಲು ವಿದ್ಯಾರ್ಥಿಗಳು ಮುಂದಾಗಬೇಕು ಎಂದು ಉದ್ಯಮಿ ಆರ್. ಗುರು ಹೇಳಿದರು.
ಐಡಿಯಲ್ ಜಾವಾ ರೋಟರಿ ಪ್ರೌಢಶಾಲೆ ವತಿಯಿಂದ ಜಗನ್ಮೋಹನ ಅರಮನೆಯಲ್ಲಿ ಸೋಮವಾರ ಏರ್ಪಡಿಸಿದ್ದ ರೇಡಿಯೆನ್ಸ್ 2013- 14ನೇ ಸಾಲಿನ ವಾರ್ಷಿಕೋತ್ಸವ ಉದ್ಘಾಟಿಸಿ ಅವರು ಮಾತನಾಡಿದರು.
ಶಿಕ್ಷಣದಿಂದ ಮಾತ್ರ ಜೀವನ ಸುಧಾರಣೆ ಸಾಧ್ಯ. ಉತ್ತಮ ಪ್ರಜೆಯಾಗಲು ಜ್ಞಾನ ಸಂಪಾದನೆಯೊಂದೆ ಶ್ರೇಷ್ಠ ಮಾರ್ಗ. ಉತ್ತಮ ಗುಣ ಹೇಗೆ ಬೆಳೆಸಿಕೊಳ್ಳಬೇಕು, ದೇಶದ ಪ್ರಗತಿಗೆ ಹಾಗೂ ಸಮಾಜಕ್ಕೆ ಯಾವ ರೀತಿ ಕೊಡುಗೆ ನೀಡಬಹುದು ಎಂಬುದರ ಬಗ್ಗೆ ಸದಾ ಚಿಂತಿಸಬೇಕು. ಆಗ ಮಾತ್ರ ಸಾಧನೆ ಮಾಡಲು ಸಾಧ್ಯ ಎಂದರು.
ಶೈಕ್ಷಣಿಕವಾಗಿ ಉತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ರಾಮಕೃಷ್ಣ ಆಶ್ರಮದ ನೈತಿಕ ಶಿಕ್ಷಣ ಕೇಂದ್ರ ಕೊಡ ಮಾಡುವ ಟ್ರೋಫಿಯನ್ನು 9ನೇ ತರಗತಿ ವಿದ್ಯಾರ್ಥಿನಿ ನಿಂಬ್ರಾ ಅವರಿಗೂ, ಭವಾನಿ ಕುಟುಂಬ ಕೊಡ ಮಾಡುವ ಟ್ರೋಫಿಯನ್ನು 8ನೇ ತರಗತಿ ವಿದ್ಯಾರ್ಥಿನಿಯರಾದ ಸಂಯುಕ್ತ ನಾಗರಾಜ್ ಹಾಗೂ ಅಂಜಲಿ ಅವರಿಗೆ ನೀಡಲಾಯಿತು. ಸಂಸ್ಥೆ ಅಧ್ಯಕ್ಷ ಎಸ್.ಕೆ. ಸಂಜಯ್, ಕಾರ್ಯದರ್ಶಿ ಎಂ. ಲಕ್ಷ್ಮೀನಾರಾಯಣ್, ಖಜಾಂಚಿ ಬಾಸು ರಂಗಸ್ವಾಮಿ ಇದ್ದರು. ಮುಖ್ಯ ಶಿಕ್ಷಕಿ ಬೀನಾ ಸಿಂಗ್ ವರದಿ ಮಂಡಿಸಿದರು.