ಹುಣಸೂರು- ಗೋಣಿಕೊಪ್ಪ ರಸ್ತೆ ಧೂಳು
ಹುಣಸೂರು: ಬಹಳ ವರ್ಷಗಳಿಂದ ಗುಂಡಿ ಬಿದ್ದಿದ್ದ ಹುಣಸೂರು- ಗೋಣಿಕೊಪ್ಪ ಹೆದ್ದಾರಿ ಕಾಮಗಾರಿ ಅರ್ಧಕ್ಕೆ ಸ್ಥಗಿತಗೊಂಡಿದ್ದು, ಅರೆ- ಬರೆ ಕಾಮಗಾರಿಯಿಂದ ಇಡೀ ರಸ್ತೆ ಧೂಳುಮಯವಾಗಿದೆ. ಜನರ- ವಾಹನ ಓಡಾಟಕ್ಕೆ ಸಂಚಕಾರ ಬಂದಿದ್ದರೂ ಕೇಳುವವರು, ಹೇಳುವವರಿಲ್ಲದಂತಾಗಿದೆ.
ಕೊಡಗು ಹಾಗೂ ಮೈಸೂರು ಜಿಲ್ಲೆಯ ಸಾರ್ವಜನಿಕರ ಪ್ರತಿಭಟನೆಯಿಂದ ಎಚ್ಚೆತ್ತಿದ್ದ ಹಿಂದಿನ ಬಿಜೆಪಿ ಸರ್ಕಾರ ಹುಣಸೂರು- ಆನೆಚೌಕೂರು ಗೇಟ್ವರೆಗಿನ 21.59 ಕಿ.ಮೀ (ಹುಣಸೂರು ತಾಲೂಕಿನನ 9.8 ಕಿ.ಮೀ ಹಾಗೂ ಪಿರಿಯಾಪಟ್ಟಣ ತಾಲೂಕಿನ 12.51ಕಿ.ಮೀ) ರಸ್ತೆಯನ್ನು 33 ಕೋಟಿ ವೆಚ್ಚದಲ್ಲಿ ಕಾಮಗಾರಿ ಆರಂಭಿಸಿ, ನಂತರ ಸಾಮಗ್ರಿ ಕೊರತೆಯಿಂದ ನೆನೆಗುದಿಗೆ ತಳ್ಳಲಾಯಿತು.
ಹೈದರಾಬಾದ್ ಮೂಲದ ಸಂಸ್ಥೆಯೊಂದು ರಸ್ತೆ ಕಾಮಗಾರಿಗೆ ಗುತ್ತಿಗೆ ಪಡೆದು ಹುಣಸೂರು ತಾಲೂಕಿನ ಹರೀನಳ್ಳಿ ಗೇಟ್ವರೆಗೆ 10 ಕಿ.ಮೀ. ಸುಂದರವಾದ ರಸ್ತೆ ನಿರ್ಮಿಸಿ ಗಮನ ಸೆಳೆದಿತ್ತಾದರೂ, ಮತ್ತೆ ನವೆಂಬರ್ನಿಂದ ಕಾಮಗಾರಿ ಸ್ಥಗಿತಗೊಳಿಸಿತ್ತು. ಇಷ್ಟು ದಿನ ಅನುಭವಿಸಿದ್ದ ಕಷ್ಟ ತಪ್ಪಿ ನೆಮ್ಮದಿಯಿಂದ ಓಡಾಡುತ್ತೇವೆಂದುಕೊಂಡಿದ್ದ ಜನರಿಗೆ ಈ ಮೂಲಕ ಭ್ರಮನಿರಸನವಾಗಿದೆ.
ಹುಣಸೂರು ತಾಲೂಕಿನ ಹರೀನಳ್ಳಿ ಗೇಟ್ನಿಂದ ಪಿರಿಯಾಪಟ್ಟಣ ತಾಲೂಕಿನ ಅಳ್ಳೂರುವರೆಗಿನ 11 ಕಿ.ಮೀ.ವರೆಗೆ ರಸ್ತೆಯ ಹಳೆ ಡಾಂಬರನ್ನು ಕಿತ್ತು ಹಾಕಿ ಕಲ್ಲುಪುಡಿ ಮಿಶ್ರಿತ ಜಲ್ಲಿ ಹರಡಿ ಎರಡು ತಿಂಗಳಾದರೂ ಸಹ ಹಾಗೆ ಬಿಟ್ಟಿದ್ದು ವಾಹನಗಳು ಓಡಾಡುವಾಗ ಧೂಳು ಮೇಲೆದ್ದು ತೊಂದರೆಯಾಗುತ್ತಿದೆ.
ರಸ್ತೆ ಬದಿ ಇರುವ, ಹರೀನಳ್ಳಿ, ಕರ್ಣಕುಪ್ಪೆ, ಬೋರೆಹೊಸಳ್ಳಿ, ಪಂಚವಳ್ಳಿ, ಪಂಚವಳ್ಳಿ ಹಾಡಿ, ಅಳ್ಳೂರು ಗ್ರಾಮದ ಮನೆಗಳ ಮೇಲೆ ಧೂಳೇ ತುಂಬಿದೆ. ಧೂಳಿನ ಪ್ರೋಕ್ಷಣೆಯಿಂದಾಗಿ ಜನ ಕಸಿವಿಸಿ ಅನುಭವಿಸುತ್ತಿದ್ದಾರೆ. ಮನೆ ಒಳಗೂ, ನೀರಿನ ಪಾತ್ರೆಗಳ ಮೇಲೂ ಧೂಳು ಶೇಖರಣೆಯಾಗುತ್ತಿದೆ. ನೆಮ್ಮದಿಯಿಂದ ಅಡುಗೆ ತಯಾರಿಸಿ, ಊಟ ಮಾಡಲಾಗದಂತಹ ಪರಿಸ್ಥಿತಿಯಿಂದ ಮಹಿಳೆಯರು ನಿತ್ಯ ಪರಿತಪಿಸುತ್ತಿದ್ದಾರೆ. ಇನ್ನು ರಸ್ತೆ ಬದಿಯ ಹೊಲಗಳಲ್ಲಿ ಬೆಳೆದಿರುವ ರಾಗಿ ಜೋಳದ ಬೆಳೆಗಳಿಗೂ ಹಾನಿಯಾಗಿದೆ. ವಾಹನಗಳ ಓಡಾಟದ ಭರದಲ್ಲಿ ಚಕ್ರಕ್ಕೆ ಸಿಲುಕುವ ಸಣ್ಣ ಜಲ್ಲಿ ಕಲ್ಲುಗಳು ದಾರಿ ಹೋಕರಿಗೆ ಹಾಗೂ ಮನೆಗಳಿಗೆ ಬೀಳುತ್ತಿವೆ. ಈಗಾಗಲೇ ಹಲವಾರು ಪ್ರಕರಣ ನಡೆದಿದೆ. ಒಟ್ಟಾರೆ ಈ ರಸ್ತೆ ಗ್ರಾಮಸ್ಥರ ಬದುಕಿನ ಮೇಲೆ ಗಂಡಾಂತರ ತಂದೊಡ್ಡಿದೆ.
ಜಲ್ಲಿ ಸಿಗದೆ ಕಾಮಗಾರಿ ನಿಂತು ಹೋಗಿದೆ. ಮೊದಲ ಕಂತಾಗಿ 3.5 ಕೋಟಿ ಬಿಲ್ ನೀಡಲಾಗುತ್ತಿದೆ. ಕ್ವಾರಿ ಸಮಸ್ಯೆ ಶೀಘ್ರ ಮುಗಿಯಲಿದ್ದು ವಾರದೊಳಗೆ ಕಾಮಗಾರಿ ಆರಂಭಗೊಳ್ಳಲಿದೆ. ಅಲ್ಲಿಯವರೆಗೆ ನೀರುಹಾಕಿ ಧೂಳು ನಿಯಂತ್ರಿಸಲು ಗುತ್ತಿಗೆದಾರನಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ.
ಸತ್ಯನಾರಾಯಣ, ಅಧೀಕ್ಷಕ ಎಂಜಿನಿಯರ್, ಲೋಕೋಪಯೋಗಿ ಇಲಾಖೆ
ಜಲ್ಲಿ ಸಿಗುತ್ತಿಲ್ಲ- ಬಿಲ್ ಆಗಿಲ್ಲ
ಹುಣಸೂರು, ಪಂಚವಳ್ಳಿ ಸುತ್ತಮುತ್ತ ಸಿಗುತ್ತಿದ್ದ ಜಲ್ಲಿ ಕ್ವಾರಿಗಳನ್ನು ಅಕ್ರಮವೆಂದು ಜಿಲ್ಲಾಡಳಿತ ಬಂದ್ ಮಾಡಿಸಿದ್ದು, ರಸ್ತೆ ಕಾಮಗಾರಿಗೆ ಜಲ್ಲಿ ಸಿಗುತ್ತಿಲ್ಲವೆಂಬ ಸಬೂಬು ಹೇಳಲಾಗುತ್ತಿದೆ. ಮತ್ತೊಂದೆಡೆ ಗುತ್ತಿಗೆದಾರನಿಗೆ ಬಿಲ್ ಆಗಿಲ್ಲ ಎಂದು ಗೊತ್ತಾಗಿದೆ. ಇತ್ತೀಚೆಗೆ ಸರ್ಕಾರ ಕ್ಯಾಬಿನೆಟ್ನಲ್ಲಿ ಅರಣ್ಯ ಸಮೀಪದಲ್ಲಿ ಕಲ್ಲು ಗಣಿಗಾರಿಕೆಗೆ ಅನುಮತಿ ನೀಡಿದ್ದು, ಇನ್ನೂ ಆದೇಶ ಜಾರಿಗೊಳಿಸದೆ ಅನುಮತಿಗೆ ಕಾಯುತ್ತಿದಾರೆಂದು ಕೇಳಿಬರುತ್ತಿದೆ.
-ಧರ್ಮಾಪುರ ನಾರಾಯಣ್