ಹೊಸ ಆಲೋಚನೆಗೆ ಮುಂದಾಗಿ: ಡಾ. ಶೇಖರ್
ಮೈಸೂರು: ಹೆಚ್ಚಾಗಿ ಯುವಜನತೆ ಹೊಸ ಹೊಸ ಅಲೋಚನೆಗೆ ಮುಂದಾಗಬೇಕು ಎಂದು ಎನ್ಐಇ ಕಾಲೇಜಿನ ಪ್ರಾಂಶುಪಾಲ ಡಾ.ಜಿ.ಎಲ್. ಶೇಖರ್ ಹೇಳಿದರು.
ಸದ್ವಿದ್ಯಾ ಸಂಯುಕ್ತ ಪದವಿ ಕಾಲೇಜು ವತಿಯಿಂದ ಜಗನ್ಮೋಹನ ಅರಮನೆಯಲ್ಲಿ ಸೋಮವಾರ ಏರ್ಪಡಿಸಿದ್ದ ಸದ್ವಿದ್ಯಾ ಸಂಪ್ರತಿ ವಾರ್ಷಿಕೋತ್ಸವದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.
ಶೈಕ್ಷಣಿಕ ಹಾಗೂ ಸಾಮಾಜಿಕ ಮತ್ತಿತರ ಕ್ಷೇತ್ರಗಳು ಬದಲಾವಣೆಯಾಗುತ್ತಿರುವ ಇಂದಿನ ದಿನಗಳಲ್ಲಿನ ಸ್ಪರ್ಧೆಯನ್ನು ಎದುರಿಸಬೇಕಾದರೆ ಯುವಜನತೆ ಹೊಸ ಆಲೋಚನೆಗಳಿಗೆ ತೆರೆದುಕೊಳ್ಳಬೇಕು. ಆಗ ಹೆಚ್ಚಿನ ಹೊಸತನ ಲಭಿಸಲು ಸಾಧ್ಯ ಎಂದರು.
ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಅಧ್ಯಕ್ಷ ಆರ್. ವಿಜಯಶೇಖರ್ ಮಾತನಾಡಿ, ಸಾಂಸ್ಕೃತಿಕ ಚಟುವಟಿಕೆಗಳಿಂದ ಸೃಜನಶೀಲತೆಗೆ ಸಹಕಾರಿಯಾಗಿದೆ. ಪರೀಕ್ಷೆಗಳು ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ನಿರಂತರ ಅಧ್ಯಯನದಲ್ಲಿ ತೊಡುವ ಮೂಲಕ ಉತ್ತಮ ಸಾಧನೆ ಮಾಡಬೇಕು ಎಂದು ಅಶಿಸಿದರು.
ಅಂತಾರಾಷ್ಟ್ರೀಯ ಮಟ್ಟದ ಚದುರಂಗ ಸ್ಪರ್ಧೆಯಲ್ಲಿ ಎರಡನೇ ಬಹುಮಾನ ಪಡೆದಿರುವ ದ್ವಿತೀಯ ಪಿಯುಸಿ ವಿದ್ಯಾರ್ಥಿ ಗಿರೀಶ್ ಅವರಿಗೆ ಸಂಸ್ಥೆ ವತಿಯಿಂದ 10 ಸಾವಿರ ನೀಡಿ ಗೌರವಿಸಲಾಯಿತು. ಶೈಕ್ಷಣಿಕ ಹಾಗೂ ಕ್ರೀಡೆಯಲ್ಲಿ ಸಾಧನೆ ತೋರಿರುವ ವಿದ್ಯಾರ್ಥಿಗಳಿಗೆ ಸಂಸ್ಥೆಯ ಕಾರ್ಯದರ್ಶಿ ಎಂ.ಡಿ. ಗೋಪಿನಾಥ್ ಬಹುಮಾನ ವಿತರಿಸಿದರು.
ಪ್ರಾಂಶುಪಾಲ ಪ್ರೊ.ಪ್ರಭಾಕರ ರಾವ್ ಹಾಗೂ ಸಾಂಸ್ಕೃತಿಕ ಸಮಿತಿ ಅಧ್ಯಕ್ಷ ಎಂ.ಆರ್. ಕೇಶವ ಪ್ರಸಾದ್ ಇದ್ದರು.