ಡಬ್ಬಿಂಗ್ ಹಿಂದೆ ಮಾಫಿಯಾವೇ ಇದೆ: ನಟ ಪ್ರಕಾಶ್ ರೈ ಕಿಡಿ
ಮೈಸೂರು: ಕನ್ನಡ ಕೊಲ್ಲುವಂತಹ ಡಬ್ಬಿಂಗ್ ಭೂತ ಕನ್ನಡ ಚಿತ್ರೋದ್ಯಮ ಪ್ರವೇಶಿಸುತ್ತಿದ್ದು, ಇದರ ಹಿಂದೆ ಬಹುದೊಡ್ಡ ಮಾಫಿಯಾ ಅಡಗಿದೆ ಎಂದು ಬಹುಭಾಷಾ ನಟ ಪ್ರಕಾಶ್ ರೈ ಆಕ್ರೋಶ ವ್ಯಕ್ತಪಡಿಸಿದರು.
ಮಂಗಳವಾರ ರಂಗಾಯಣದಲ್ಲಿ ಬಹುರೂಪಿ ರಾಷ್ಟ್ರೀಯ ನಾಟಕೋತ್ಸವದಲ್ಲಿ ಅತಿಥಿಯಾಗಿ ಮಾತನಾಡಿದ ಅವರು, ಬೇರೆ ಬೇರೆ ಭಾಷೆಗಳಲ್ಲಿ ಆಯಾ ಕಾಲಘಟ್ಟದಲ್ಲಿ ಪ್ರವೇಶಿಸಿದ ಡಬ್ಬಿಂಗ್ ಭೂತ ಇದೀಗ ಕನ್ನಡವನ್ನು ಆಕ್ರಮಿಸಲು ಬರುತ್ತಿದೆ. ಇದರ ಹಿಂದೆ ದೊಡ್ಡ ಮಾಫಿಯಾವೇ ಇದೆ. ಇದರಿಂದ ಕಲಾವಿದರಿಗೆ, ಕನ್ನಡದ ಕಲಾಕೃತಿಗಳಿಗೆ, ನಾಟಕ, ಸಿನೆಮಾ, ಟಿವಿ ಧಾರಾವಾಹಿಗಳಿಗೆ ಕಂಟಕವಾಗುತ್ತದೆ ಎಂಬ ಭಯದ ಜತೆಗೆ ಕನ್ನಡಕ್ಕೆ ಕುತ್ತು ಬರುತ್ತದೆ ಎಂಬ ಆತಂಕ ನಮ್ಮನ್ನು ಆವರಿಸಿದೆ ಎಂದರು. ಹಿಂದೆ ಕನ್ನಡಕ್ಕೆ ಕಂಟಕ ಬಂದಾಗ ಗೋಕಾಕ ಚಳವಳಿಗೆ ಇಳಿದ ಡಾ.ರಾಜ್‌ಕುಮಾರ್ ದೊಡ್ಡ ದನಿಯಾಗಿದ್ದರು. ಅಂತಹ ಗಟ್ಟಿ ನಾಯಕತ್ವ ನಮಗಿದ್ದರೆ ಇಂತಹ ಸ್ಥಿತಿ ಬರುತ್ತಿರಲಿಲ್ಲ. ರಾಜ್ ಅವರು ಧೈರ್ಯದಿಂದ ಮುನ್ನುಗ್ಗುತ್ತಿದ್ದರು. ದೂರದೃಷ್ಟಿ ಇಟ್ಟುಕೊಂಡಿದ್ದರು. ಅವರಿಲ್ಲದೆ ನಾವು ಇಂದು ಅನಾಥರಾಗಿದ್ದೇವೆ. ಅಂತಹ ನಾಯಕತ್ವ ನಮಗೆ ಸಿಕ್ಕಿಲ್ಲ ಎಂದು ವಿಷಾದಿಸಿದರು. ಡಬ್ಬಿಂಗ್ ನಿಲ್ಲಿಸಿ ಎಂದು ನ್ಯಾಯಾಲಯದಲ್ಲಿ ಹೂಡಿದ್ದ ದಾವೆಯನ್ನು ನಾವು ಗೆದ್ದಿದ್ದೇವೆ. ನ್ಯಾಯಾಲಯಕ್ಕೆ ಹೋಗಿ ಗೆಲ್ಲುವ ಸ್ಥಿತಿ ಬಂದಿದೆ. ಸದ್ಯಕ್ಕೆ ಇದರಿಂದ ನಾವು ಖುಷಿ ಪಡಬಹುದು. ನಾನಂತೂ ಎಂದೆಂದಿಗೂ ಕನ್ನಡದ ಉಳಿವಿಗೆ ಬರುತ್ತೇನೆ ಎಂದರು.