ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಪ್ರಾಮಾಣಿಕ ತೆರಿಗೆ ಸಂಗ್ರಹ ಕಾರ್ಯನಿರ್ವಹಿಸಿ

Vishwanath S
Updated On : 15 Jan 2014, 1:10 am

ಕ.ಪ್ರ.ವಾರ್ತೆ ,  ಮೈಸೂರು ,  ಜ. 14
ಆರ್ಥಿಕ ವರ್ಷದಲ್ಲಿ ನಿಗದಿಪಡಿಸಿದ ತೆರಿಗೆ ಸಂಗ್ರಹ ಗುರಿ ತಲುಪಲು ತೆರಿಗೆ ಇಲಾಖೆಯವರು ಪ್ರಾಮಾಣಿಕತೆಯಿಂದ ಕಾರ್ಯನಿರ್ವಹಿಸಿದಲ್ಲಿ ಸರ್ಕಾರಕ್ಕೆ ಅನುಕೂಲವಾಗುತ್ತದೆ. ಇದರಿಂದ ಜನಪರ ಕಾರ್ಯಕ್ರಮಗಳನ್ನು ರೂಪಿಸಲು ಸಹಾಯಕವಾಗುತ್ತದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅಭಿಪ್ರಾಯಪಟ್ಟರು.
ನಗರದ ಬಿಡಾರಂ ಕೃಷ್ಣಪ್ಪ ರಸ್ತೆಯಲ್ಲಿರುವ ನಲ್ಲಪ್ಪ ಪೊಲೀಸ್ ಠಾಣೆಗೆ ಹೊಂದಿಕೊಂಡಿರುವ ಜಾಗದಲ್ಲಿ ಹೊಸದಾಗಿ ನಿರ್ಮಿಸಿರುವ ವಾಣಿಜ್ಯ ತೆರಿಗೆ ಜಂಟಿ ಆಯುಕ್ತರ (ಜಾರಿ) ಕಚೇರಿಯನ್ನು ಮಂಗಳವಾರ ಉದ್ಘಾಟಿಸಿ, ನಂತರ ಹಳೆ ಕಚೇರಿ ಆವರಣದಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ನಾನು 1.21 ಲಕ್ಷ ಕೋಟಿ ಪ್ರಮಾಣದ ಬಜೆಟ್ ಮಂಡಿಸಿದ್ದೇನೆ. ರಾಜ್ಯ ಸರ್ಕಾರ ಬೊಕ್ಕಸಕ್ಕೆ ತೆರಿಗೆ ರೂಪದಿಂದ 62 ಸಾವಿರ ಕೋಟಿ ಸಂಗ್ರಹವಾಗುತ್ತದೆ. ಆರ್ಥಿಕ ವರ್ಷದಲ್ಲಿ 37,740 ಕೋಟಿಯಷ್ಟು ತೆರಿಗೆ ಸಂಗ್ರಹಿಸಲು ವಾಣಿಜ್ಯ ತೆರಿಗೆ ಇಲಾಖೆಗೆ ಗುರಿ ನೀಡಿದ್ದೇವೆ. ಒಂಬತ್ತು ತಿಂಗಳಲ್ಲಿ 26 ಸಾವಿರ ಕೋಟಿ ಸಂಗ್ರಹಿಸಿದ್ದು, ಇನ್ನೂ 10 ಸಾವಿರ ಕೋಟಿಯಷ್ಟು ಸಂಗ್ರಹಿಸಬೇಕಿದೆ. ಇನ್ನು ಅಬಕಾರಿ ಇಲಾಖೆಯಿಂದ 12,600 ಕೋಟಿ ಸಂಗ್ರಹವಾಗಿದೆ ಎಂದರು.
ರಾಜ್ಯದಲ್ಲಿ ತೆರಿಗೆ ಕಟ್ಟದೆ ತಪ್ಪಿಸಿಕೊಂಡು ಓಡಾಡುವವರ ಮೇಲೆ ಹದ್ದಿನ ಕಣ್ಣು ಇಡುವಲ್ಲಿ ವಾಣಿಜ್ಯ ತೆರಿಗೆ (ಜಾರಿ) ಇಲಾಖೆ ಪ್ರಮುಖ ಪಾತ್ರ ವಹಿಸುತ್ತಿದೆ. ಹೀಗಾಗಿ ಇನ್ನೂ ಚೆನ್ನಾಗಿ ಕಾರ್ಯನಿರ್ವಹಿಸಿದರೆ ನಿಮಗೆ ಶಹಬ್ಬಾಸ್‌ಗಿರಿ ನೀಡುತ್ತೇನೆ. ಜತೆಗೆ ಗ್ರಾಹಕರು ಕೂಡ ತೆರಿಗೆ ವಂಚಿಸದೆ ನಿಗದಿತ ಸಮಯದೊಳಗೆ ತೆರಿಗೆ ಕಟ್ಟಿದರೆ ಸರ್ಕಾರದ ಜತೆ ಕೈಜೋಡಿಸಬೇಕು. ಇದರಿಂದ ಹೆಚ್ಚು ಹೆಚ್ಚು ಯೋಜನೆಗಳನ್ನು ರೂಪಿಸಿ ಜನರನ್ನು ಮುಖ್ಯವಾಹಿನಿಗೆ ತರಲು ಅನುಕೂಲವಾಗುತ್ತದೆ ಎಂದು ತಿಳಿಸಿದರು.
ಸಿಎಂಗೆ ಆತ್ಮವಿಶ್ವಾಸ ಜಾಸ್ತಿ: ಜಿಲ್ಲಾ ಉಸ್ತುವಾರಿ ಸಚಿವ ವಿ.ಶ್ರೀನಿವಾಸಪ್ರಸಾದ್ ಮಾತನಾಡಿ, 8 ಬಾರಿ ಬಜೆಟ್ ಮಂಡಿಸಿರುವ ಸಿದ್ದರಾಮಯ್ಯ ಅವರಿಗೆ ಆತ್ಮವಿಶ್ವಾಸ ಜಾಸ್ತಿ. ಖರ್ಚು, ವೆಚ್ಚವನ್ನು ಹೇಗೆ ನಿರ್ವಹಿಸಬೇಕು ಎಂಬುದು ಗೊತ್ತಿದೆ. ಅವರು ರೂಪಿಸುವ ಯೋಜನೆಗಳಿಗೆಲ್ಲ ತೆರಿಗೆ ರೂಪದಲ್ಲಿ ಸಂಗ್ರಹವಾಗುವ ಹಣವನ್ನು ಖರ್ಚು ಮಾಡಬೇಕು. ಆದ್ದರಿಂದ ತೆರಿಗೆ ಅಧಿಕಾರಿಗಳು ಶಿಸ್ತಿನಿಂದ, ಪ್ರಾಮಾಣಿಕತೆಯಿಂದ ಕರ್ತವ್ಯ ನಿರ್ವಹಿಸಿ ಹೆಚ್ಚು ತೆರಿಗೆ ಸಂಗ್ರಹಿಸಿ ಸಹಾಯ ಮಾಡಬೇಕು. ಸೋರಿಕೆ ತಡೆಗಟ್ಟಬೇಕು. ನಿಮ್ಮ ಬಳಿ ತೆರಿಗೆ ಕಟ್ಟಲು ಬರುವ ಗ್ರಾಹಕರನ್ನು ಗೌರವದಿಂದ ಕಾಣಬೇಕು ಎಂದು ಕಿವಿಮಾತು ಹೇಳಿದರು. ಚಾಮರಾಜ ಕ್ಷೇತ್ರದ ಶಾಸಕ ವಾಸು ಅಧ್ಯಕ್ಷತೆ ವಹಿಸಿದ್ದರು. ಲೋಕೋಪಯೋಗಿ ಸಚಿವ ಡಾ.ಎಚ್.ಸಿ. ಮಹದೇವಪ್ಪ, ಮಾಜಿ ಶಾಸಕ ಮಹಿಮಾ ಪಟೇಲ್, ಜಿಪಂ ಅಧ್ಯಕ್ಷ ಕೂರ್ಗಳ್ಳಿ ಮಹದೇವು, ಸಂಸದ ಆರ್. ಧ್ರುವನಾರಾಯಣ್, ಶಾಸಕರಾದ ಎಂ.ಕೆ. ಸೋಮಶೇಖರ್, ಸಾ.ರಾ. ಮಹೇಶ್, ಎಸ್. ಚಿಕ್ಕಮಾದು, ಸಂದೇಶ್ ನಾಗರಾಜ್, ಆರ್.ಧರ್ಮಸೇನ, ಪಾಲಿಕೆ ಸದಸ್ಯ ಪಿ. ಪ್ರಶಾಂತ್‌ಗೌಡ, ಆಯುಕ್ತ ಅಜಯ್ ಸೇಠ್ ಇದ್ದರು.
ಹಿಂದಿದ್ದವರು ಮುಂದೆ ಬಂದರು
ವೇದಿಕೆ ಮೇಲೆ ಗಣ್ಯರಿಗೆ ಆಸನ ವ್ಯವಸ್ಥೆ ಮಾಡಲಾಗಿತ್ತು. ಮುಂದಿನ ಸಾಲಿನಲ್ಲಿ ಆಡಳಿತ ಪಕ್ಷದ ಶಾಸಕರು, ಸಂಸದರು, ಜಿಪಂ ಅಧ್ಯಕ್ಷರು ಕುಳಿತಿದ್ದರು. ಹಿಂದಿನ ಸಾಲಿನಲ್ಲಿ ಶಾಸಕರಾದ ಸಂದೇಶ್ ನಾಗರಾಜ್, ಸಾ.ರಾ. ಮಹೇಶ್, ಎಸ್. ಚಿಕ್ಕಮಾದು ಕುಳಿತಿದ್ದರು. ಅವರನ್ನು ಗಮನಿಸಿದ ಸಿಎಂ ನೀವೆಲ್ಲ ಮುಂದೆ ಬನ್ನಿ ಎಂದು ಕರೆದು ಅವರಿಗೆ ತಮ್ಮ ಸಾಲಿನಲ್ಲಿಯೇ ಕುರ್ಚಿ ಹಾಕಿಸಿ ಕೂರಿಸಿ, ಮಾತನಾಡಿಸಿದರು.
ಸಾರಾ, ಸಂದೇಶ್ ವ್ಯವಹಾರಸ್ಥರು
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಾತನಾಡುತ್ತ ವೇದಿಕೆ ಮೇಲೆ ಕುಳಿತಿದ್ದ ಶಾಸಕ ಸಾ.ರಾ. ಮಹೇಶ್ ಕಡೆ ತಿರುಗಿ 'ನೀನೂ ತೆರಿಗೆ ಕಟ್ಟುತ್ತಿದೆಯಾ ಅಲ್ವಪ್ಪ' ಅಂದರು. ಅದಕ್ಕೆ ಸಾರಾ ಹೌದು ಎಂದು ನಗೆ ಬೀರುತ್ತಿರುವಾಗಲೆ, ಮುಖ್ಯಮಂತ್ರಿ ಪಕ್ಕದಲ್ಲೇ ಇದ್ದ ಶಾಸಕ ಸಂದೇಶ್ ನಾಗರಾಜ್ ನಾನು ಕೂಡ 1 ಕೋಟಿ ತೆರಿಗೆ ಕಟ್ಟುತ್ತಿದ್ದೇನೆ ಎಂದರು. ಅದಕ್ಕೆ ಸಿದ್ದರಾಮಯ್ಯ ನೀವು ಬಿಡಿ ದೊಡ್ಡ ವ್ಯವಹಾರಸ್ಥರು. ತೆರಿಗೆ ಕಟ್ಟುತ್ತೀರಿ. ಪಾಪ ವ್ಯವಹಾರ ಮಾಡದವರು ಎಲ್ಲಿ ತೆರಿಗೆ ಕಟ್ಟುತ್ತಾರೆ ಎಂದು ಮೂದಲಿಸಿದರು. ಹಾಗೆ ಮುಂದುವರಿದು ಮಾತನಾಡಿ, ಕೆಲವು ಆಡಿಟರ್‌ಗಳು ಸರ್ಕಾರಕ್ಕೆ ತೆರಿಗೆಯನ್ನು ಹೇಗೆ ವಂಚಿಸುವುದು ಎಂಬುದರ ಬಗ್ಗೆಯೇ ಯೋಚಿಸುತ್ತಿರುತ್ತಾರೆ. ಅವರ ಕೆಲಸವೇ ಎಂದ ಅವರು, ಪುನಃ ಸಂದೇಶ್ ನಾಗರಾಜ್ ಅವರನ್ನು ಕೆಣಕಿ 'ನಿಮ್ಮ ಆಡಿಟರ್ ಹಾಗೆ ಮಾಡುತ್ತಾರೋ' ಎಂದರು. ಅದಕ್ಕೆ ನಾಗರಾಜ್, 'ಇಲ್ಲ ಕಂಪ್ಯೂಟರೈಸ್ಡ್ ಆದ ಮೇಲೆ ಸರಿಯಾಗಿ ಕಟ್ಟುತ್ತಿದ್ದೇನೆ' ಎಂದಾಗ, 'ಅಂದರೆ ನೀನು ಮೊದಲು ವಂಚಿಸುತ್ತಿದ್ದೆ ಎಂಬ ಅರ್ಥವೋ' ಎಂದು ಕಿಚಾಯಿಸಿದಾಗ ಸಭೆ ನಗೆಗಡಲಲ್ಲಿ ತೇಲಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement