ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಸಚಿವರ ನಿವಾಸದೆದುರು ಕಬ್ಬು ಬೆಳೆಗಾರರ ಧರಣಿ

Vishwanath S
Updated On : 15 Jan 2014, 1:10 am

ಮೈಸೂರು: ನಂಜನಗೂಡು ತಾ. ಅಳಗಂಚಿಯಲ್ಲಿರುವ ಬಣ್ಣಾರಿ ಅಮ್ಮನ್ ಸಕ್ಕರೆ ಕಾರ್ಖಾನೆಯ ರೈತ ವಿರೋಧಿ ನೀತಿ ಖಂಡಿಸಿ ಕಬ್ಬು ಬೆಳೆಗಾರರ ಸಂಘದ ಪದಾಧಿಕಾರಿಗಳು ಮಂಗಳವಾರ ಕುವೆಂಪುನಗರದಲ್ಲಿ ಸಹಕಾರ ಸಚಿವ ಎಚ್.ಎಸ್. ಮಹದೇವಪ್ರಸಾದ್ ನಿವಾಸದ ಎದುರು ಪ್ರತಿಭಟಿಸಿ, ಮನವಿ ಸಲ್ಲಿಸಿದರು.
ರಾಜ್ಯ ಸರ್ಕಾರ ಟನ್ ಕಬ್ಬಿಗೆ 2,650 ನಿಗದಿಪಡಿಸಿದೆ. ಆದರೂ ಬಣ್ಣಾರಿ ಕಾರ್ಖಾನೆಯು ಸರ್ಕಾರದ ಆದೇಶ ಪಾಲಿಸದೆ ನಿರ್ಲಕ್ಷ್ಯವಹಿಸಿ ಟನ್ ಕಬ್ಬಿಗೆ 2,400 ಮಾತ್ರ ಪಾವತಿಸುತ್ತಿದ್ದಾರೆ. ಇದರಿಂದ ರೈತರನ್ನು ಸಂಕಷ್ಟಕ್ಕೆ ತಳ್ಳಿದಂತಾಗಿದೆ. ಅಲ್ಲದೆ ಹಿಂದಿನ ವರ್ಷದ ಕಬ್ಬಿನ ಬಾಕಿ ಹಣದ ಬಗ್ಗೆ ಸರ್ಕಾರ ಯಾವುದೆ ನಿರ್ಧಾರ ಕೈಗೊಂಡಿಲ್ಲ ಎಂದು ಪ್ರತಿಭಟನಾಕಾರರು ಆರೋಪಿಸಿದರು.
ಬಣ್ಣಾರಿ ಸಕ್ಕರೆ ಕಾರ್ಖಾನೆಯಲ್ಲಿ ಟನ್ ಕಬ್ಬಿಗೆ 110 ಕೆ.ಜಿ ಸಕ್ಕರೆ ಇಳುವರಿ ಬರುತ್ತಿದೆ. ಎಲ್ಲಾ ಉಪ ಉತ್ಪನ್ನಗಳ ಆದಾಯ ಬರುತ್ತಿದ್ದರೂ ಸಹ ಕಬ್ಬು ಬೆಲೆ ನಿಗದಿ ಮಾಡುವಾಗ ರಾಜ್ಯ ಸರ್ಕಾರ ನ್ಯಾಯಯುತ ಕಬ್ಬಿನ ಬೆಲೆ ನಿಗದಿ ಮಾಡದೆ ರೈತರಿಗೆ ದ್ರೋಹ ಬಗೆಯುತ್ತಿದೆ. ಬಣ್ಣಾರಿ ಅಮ್ಮನ್ ಸಕ್ಕರೆ ಕಾರ್ಖಾನೆಗೆ ಚಾಮರಾಜನಗರ ಜಿಲ್ಲೆಯಿಂದಲೂ ಹೆಚ್ಚಿನ ಕಬ್ಬು ಸಾಗಾಣಿಕೆ ಆಗುತ್ತದೆ. ಆದ್ದರಿಂದ ಚಾಮರಾಜನಗರ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಸಹಕಾರ ಸಚಿವರೂ ಆದ ಎಚ್.ಎಸ್. ಮಹದೇವಪ್ರಸಾದ್ ಅವರು ಈ ಬಗ್ಗೆ ಗಮನ ನೀಡಬೇಕು ಎಂದು ಆಗ್ರಹಿಸಿದರು.
ಕೂಡಲೇ ಸಚಿವರು ಬಣ್ಣಾರಿ ಅಮ್ಮನ್ ಸಕ್ಕರೆ ಕಾರ್ಖಾನೆ ಮಾಲೀಕರ ಜೊತೆ ಮಾತುಕತೆ ನಡೆಸಿ ರೈತರಿಗೆ ಸರ್ಕಾರ ನಿಗದಿಪಡಿಸಿರುವ ಮೊತ್ತದ ಜೊತೆಗೆ ಬಾಕಿ ಹಣ ಕೊಡಿಸಬೇಕು ಎಂದು ಒತ್ತಾಯಿಸಿದರು.
ರೈತ ಮುಖಂಡ ಕುರುಬೂರು ಶಾಂತಕುಮಾರ್ ಅವರಿಂದ ಮನವಿ ಸ್ವೀಕರಿಸಿದ ಸಚಿವ ಎಚ್.ಎಸ್. ಮಹದೇವಪ್ರಸಾದ್ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಡನೆ ಮಾತುಕತೆ ನಡೆಸಿ ಸಮಸ್ಯೆ ಬಗೆಹರಿಸುವುದಾಗಿ ಭರವಸೆ ನೀಡಿದರು.
ರೈತ ಮುಖಂಡರಾದ ಅತ್ತಹಳ್ಳಿ ದೇವರಾಜ್, ಕಿರಂಗಸೂರು ಶಂಕರ್ ಸೇರಿದಂತೆ ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಯ ಕಬ್ಬು ಬೆಳೆಗಾರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement