'ಸ್ಪರ್ಧಾತ್ಮಕ ಯುಗದಲ್ಲಿ ಅಭ್ಯಾಸಕ್ಕೆ ಹೆಚ್ಚಿನ ಶ್ರಮ ಅಗತ್ಯ'
ಮೈಸೂರು: ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳು ಶ್ರಮವಹಿಸಿ ಅಭ್ಯಾಸ ಮಾಡುವುದರ ಮೂಲಕ ಹೆಚ್ಚಿನ ಅಂಕಗಳಿಸಿ ಕಾಲೇಜಿಗೆ ಮತ್ತು ಪೋಷಕರಿಗೆ ಕೀರ್ತಿ ತರಬೇಕೆಂದು ಶಾಸಕ ರಮೇಶ್ಬಾಬು ಬಂಡಿಸಿದ್ದೇಗೌಡ ಹೇಳಿದರು.
ಗೋಕುಲಂ 3ನೇ ಹಂತದಲ್ಲಿರುವ ಕೆ.ಪುಟ್ಟಸ್ವಾಮಿ ಪದವಿ ಪೂರ್ವ ಕಾಲೇಜಿನ ಸಾಹುಕಾರ್ ಚನ್ನಯ್ಯ ಸಭಾಂಗಣದಲ್ಲಿ ನಡೆದ ವಾರ್ಷಿಕೋತ್ಸವ ಉದ್ಘಾಟಿಸಿ ಅವರು ಮಾತನಾಡಿದರು. ಭ್ರಷ್ಟಾಚಾರ ಮುಕ್ತ ರಾಷ್ಟ್ರ ನಿರ್ಮಾಣದಲ್ಲಿ ಇಂದಿನ ಯುವಕರು ನಿರ್ವಹಿಸಬೇಕಾದ ಪಾತ್ರ, ಅವರ ಜವಾಬ್ದಾರಿ ಏನು ಎಂಬುದನ್ನು ತಿಳಿಸಿ, ಮಾಜಿ ರಾಷ್ಟ್ರಪತಿ ಡಾ.ಎ.ಪಿ.ಜೆ. ಅಬ್ದುಲ್ ಕಲಾಂ ಅವರು ಕಂಡ ಕನಸಿನಂತೆ 2025ರ ಹೊತ್ತಿಗೆ ಭಾರತವನ್ನು ಸಮೃದ್ಧ, ಬಲಿಷ್ಠ ರಾಷ್ಟ್ರವನ್ನಾಗಿ ಮಾಡುವಲ್ಲಿ ಶ್ರಮಿಸುವಂತೆ ಅವರು ಯುವಕರಿಗೆ ಕರೆ ನೀಡಿದರು. ಇತ್ತೀಚೆಗೆ ನಿಧನರಾದ ಮೈಸೂರು ರಾಜವಂಶಸ್ಥ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಮತ್ತು ರಾಷ್ಟ್ರಕವಿ ಡಾ.ಜಿ.ಎಸ್. ಶಿವರುದ್ರಪ್ಪ ಅವರಿಗೆ ಶ್ರದ್ಧಾಂಜಲಿ ಅರ್ಪಿಸಲಾಯಿತು. ವಿದ್ಯಾವರ್ಧಕ ಸಂಘದ ಅಧ್ಯಕ್ಷ ಗುಂಡಪ್ಪಗೌಡ ಅಧ್ಯಕ್ಷತೆ ವಹಿಸಿದ್ದರು. ಸಂಘದ ಗೌರವ ಕಾರ್ಯದರ್ಶಿ ಪಿ.ವಿಶ್ವನಾಥ್, ಕೋಶಾಧ್ಯಕ್ಷ ಎಸ್.ಎನ್. ಲಕ್ಷ್ಮಿನಾರಾಯಣ ಮತ್ತು ಪ್ರಾಂಶುಪಾಲ ಜೆ. ಮಹೇಶ್ ಇದ್ದರು. ಕಾಲೇಜಿನ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು.