ಉದ್ಯಮಿಯಾಗಿ ಉದ್ಯೋಗ ನೀಡಿ: ಕೆ. ಶಿವಷಣ್ಮುಗಂ
ಕ.ಪ್ರ. ವಾರ್ತೆ , ಮೈಸೂರು , ಜ.15
ಉದ್ಯಮಿಯಾಗಿ ಉದ್ಯೋಗ ನೀಡಿ. ಇಲ್ಲದಿದ್ದರೆ ಇಂದಿನ ಯುವಕರು ನಿರುದ್ಯೋಗಿಗಳಾಗಿ ಅನೇಕ ಸಮಾಜ ಬಾಹಿರ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುತ್ತಾರೆ ಎಂದು ಎಫ್‌ಕೆಸಿಸಿಐ ಮಾಜಿ ಅಧ್ಯಕ್ಷ ಕೆ.ಶಿವಷಣ್ಮುಗಂ ಹೇಳಿದರು.
ಬನ್ನೂರು ರಸ್ತೆಯಲ್ಲಿರುವ ಜ್ಞಾನಸರೋವರ ಅಂತಾರಾಷ್ಟ್ರೀಯ ವಸತಿ ಶಾಲೆಯಲ್ಲಿ ನಡೆದ ಸಂಸ್ಥಾಪನಾ ದಿನಾಚರಣೆಯಲ್ಲಿ ಅತಿಥಿಯಾಗಿ ಮಾತನಾಡಿದ ಅವರು, ಉತ್ತಮ ಶಿಕ್ಷಣ ನೀಡಿ ಜಾಗತಿಕ ಸ್ಪರ್ಧೆಗೆ ಮಕ್ಕಳನ್ನು ಸಿದ್ಧಗೊಳಿಸುವಂತೆ ತಿಳಿಸಿದರು.
ಶಿಕ್ಷಣಕ್ಕೆ ಹೆಚ್ಚಿನ ಗಮನ ನೀಡುವ ಗುರಿ ಹೊಂದಬೇಕು. ನಮ್ಮ ಗುರಿ ಯಾವಾಗಲೂ ಹರಿಯುವ ನೀರಿನಂತೆ ಸದಾ ಮುನ್ನುಗ್ಗಬೇಕು. ಭಾರತದ ಪ್ರಸ್ತುತ ಪರಿಸ್ಥಿತಿಯಲ್ಲಿ ಕೈಗಾರೀಕರಣ, ನಗರೀಕರಣ, ಆಧುನೀಕರಣಕ್ಕೆ ಮಾರ್ಪಟ್ಟು ನಾವು ಬೆಳೆಯಬೇಕು. ಇಂದಿನ ದಿನದಲ್ಲಿ ಹೆಚ್ಚುತ್ತಿರುವ ಆರೋಗ್ಯ ಸಮಸ್ಯೆಗಳು, ಜನಸಂಖ್ಯಾ ಹೆಚ್ಚಳ, ಲಂಚಗುಳಿತನ, ಅಧಿಕಾರಿಶಾಹಿಗಳ ಅಧಿಕಾರದ ದುರಾಸೆ, ಮಾನವೀಯ ಮೌಲ್ಯಗಳ ನಾಶ, ಸಮಾಜದಲ್ಲಿನ ಅನಾರೋಗ್ಯಕರ ವಾತಾವರಣ, ಮಕ್ಕಳಿಗೆ ಶಿಕ್ಷಣ ದೊರೆಯದಿರುವುದು ಶೋಚನೀಯ ಎಂದರು. ಎಂಸಿಸಿಐ ಅಧ್ಯಕ್ಷ ಎ.ಎಸ್. ಸತೀಶ್, ಸಂಸ್ಥೆಯ ಅಧ್ಯಕ್ಷ ಸುಧಾಕರ್ ಎಸ್. ಶೆಟ್ಟಿ, ಕಾರ್ಯದರ್ಶಿ ಸುಖಲತಾ ಶೆಟ್ಟಿ, ಕಾರ್ಯನಿರ್ವಾಹಕ ಅಧಿಕಾರಿ ಪವನ್‌ಕುಮಾರ್ ಶೆಟ್ಟಿ, ಪ್ರಾಂಶುಪಾಲ ಸ್ಟ್ಯಾನ್ಲಿ ಆಂಟೋನಿ, ಆಡಳಿತಾಧಿಕಾರ ಮುಕುಂದ್, ಮುಖ್ಯೋಪಾಧ್ಯಾಯಿನಿ ಪದ್ಮಮೂರ್ತಿ ಇದ್ದರು.