ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಎಳ್ಳು ಬೆಲ್ಲ ಜತೆ ರಂಗರುಚಿ ಸವಿದ ಪ್ರೇಕ್ಷಕ

Vishwanath S
Updated On : 16 Jan 2014, 1:28 am

ಕ.ಪ್ರ. ವಾರ್ತೆ, ಮೈಸೂರು, ಜ.15
ಸೂರ್ಯ ಇನ್ನು ಉತ್ತರ ದಿಕ್ಕಿನತ್ತ ಸಾಗುವ ಚಲನೆಯನ್ನು ನಿಲ್ಲಿಸಿ ದಕ್ಷಿಣಕ್ಕೆ ಚಲಿಸಲು ಅತ್ತ ಪ್ರಾರಂಭಿಸುತ್ತಿದ್ದರೆ, ಇತ್ತ ಜನರು ಕೂಡ ತಮ್ಮ ಪಥವನ್ನು ರಂಗಾಯಣದ ಕಡೆ ಬೆಳೆಸಿ ಹಬ್ಬದ ಸಂಭ್ರಮದಲ್ಲಿ ಪಾಲ್ಗೊಂಡು ವಿಶೇಷ ಮೆರಗು ನೀಡಿದರು.
ದಕ್ಷಿಣಾಯನದ ದಿನವನ್ನು ಅತ್ಯಂತ ಸಂಭ್ರಮ, ಸಡಗರದಿಂದ ಆಚರಿಸಿ, ಎಳ್ಳುಬೆಲ್ಲ ಬೀರಿ ಬಂದಿದ್ದ ಜನತೆಗೆ ರಂಗಾಯಣದ ಅಂಗಳದಲ್ಲಿ ನಡೆದ ವಿವಿಧ ಕಾರ್ಯಕ್ರಮಗಳು ಸಿಹಿಗಿಂತಲೂ ಬಹುರುಚಿಯನ್ನೇ ನೀಡಿದವು. ಬಿಸಿಲ ಪ್ರಖರ ಕಡಿಮೆಯಾಗಿ, ನೀಲಿ ಬಾನಿನಲ್ಲಿ ಪೂರ್ಣಚಂದ್ರ ಮೂಡುವಷ್ಟರೊಳಗೆ ಜನಜಂಗುಳಿಯಿಂದ ಸಾಂಸ್ಕೃತಿಕ ನೆಲೆವೀಡು ತುಂಬಿ ತುಳುಕುತ್ತಿತ್ತು.
ಕಿಂದರಿಜೋಗಿ ಆವರಣದಲ್ಲಿ ನಿರ್ಮಿಸಿರುವ ವೇದಿಕೆಯಲ್ಲಿ ಮಂಜು ಮತ್ತು ತಂಡದವರ ನಗಾರಿ, ಡೊಳ್ಳು ನಾದ ದಡ್ ದಡ್ ದಡ್.. ಎನ್ನುತ್ತಿರುವುದರೊಂದಿಗೆ ತಮಟೆಯ ಡಂಕಣಕಣ ಡಂಕಣಕಣ.. ತಾಳವಾದ್ಯ ಸಾಥ್ ನೀಡುತ್ತಿತ್ತು.
 ಎದುರಿನಲ್ಲಿಯೇ ಕುಳಿತ ಜನ ಏದುರಿಸಿನಲ್ಲಿಯೇ ದೀರ್ಘಕಾಲದವರೆಗೆ ಕೇಳಿ ಬಂದ ಚರ್ಮ ವಾದ್ಯದ ಮಾರ್ದನಿಯನ್ನು ಆಲಿಸತೊಡಗಿತು. ಇವರ ಬಳಿಕ ವೇದಿಕೆಗೆ ಬಂದ ಮಹಾರಾಷ್ಟ್ರದ ತಮಾಷಾ ಜಾನಪದ್ಯ ನೃತ್ಯ ಕುಳಿತಲ್ಲಿಯೇ ಕುಣಿಸಿ ಮೋಡಿ ಮಾಡಿತು.
ಕಲರಿಪಯಟ್‌ಗೆ ಕದಲಿಲ್ಲ: ಕೇರಳದ ಯೋಧ ಕಲರಿಪಯಟ್ಟು ಅಕಾಡೆಮಿಯ ಕಲಾವಿದರು ನಡೆಸಿಕೊಟ್ಟ ಕಲರಿ ಪಯಟ್ ಸಮರ ಕಲೆಯು ಭಯ, ಕೌತುಕ, ಆತಂಕ ಎಲ್ಲವನ್ನು ಒತ್ತೊಟ್ಟಿಗೆ ಎದೆಯಲ್ಲಿ ಮೂಡಿಸಿತು. ಕಿರಿಯ ಕಲಾವಿದರಿಂದ ಹಿಡಿದು ಅನುಭವಿ ಹಿರಿಯ ಕಲಾವಿದರು ಒಂದೊಂದು ಪಟ್ಟುಗಳು ಕೂಡ ನೋಡುಗರ ಎದೆಯನ್ನು ನಡುಗಿಸಿತು.
ದೊಣ್ಣೆ ವರಸೆ, ಕತ್ತಿ ವರಸೆ, ಕತ್ತಿ, ಗುರಾಣಿ ಹಿಡಿದು ಒಬ್ಬರೊಬ್ಬರ ಮೇಲೆ ಎರಗುವ ಸನ್ನಿವೇಶ, ತಪ್ಪಿಸಿಕೊಳ್ಳುವ ಚಾಣಾಕ್ಷತನ ಕಣ್ಮನ ಸೆಳೆಯಿತು. ನಾಲ್ಕು ಮಂದಿಯನ್ನು ಬಾಗಿಸಿ ನಿಲ್ಲಿಸಿ ಅವರ ಮೇಲೆ ಜಿಗಿಯುವ ಚಾಕಚಕ್ಯತೆ, ಬೆಂಕಿಯೊಂದಿಗಿನ ಸರಸ, ಚೆಲ್ಲಾಟ, ಕೈಯಿಂದ ಬೆಂಕಿಯುಂಡೆಯುಳ್ಳ ಚಕ್ರವನ್ನು ನಾನಾಕಾರದಿ ತಿರುಗಿಸುವ ನೈಪುಣ್ಯತೆ ಅಲ್ಲಿದ್ದವರನ್ನು ಕದಲಲು ಬಿಡಲಿಲ್ಲ. ಒಂದೊಂದು ಪಟ್ಟಿಗೂ ಒಗ್ಗುವಂತ ಹಿನ್ನೆಲೆ ಸಂಗೀತ ನೋಡಿದ ಕಣ್ಣಿಗೂ, ಮನಸ್ಸಿಗೂ ಇಂಪು ನೀಡಿತು. ನಂತರ ಪಂಡಿತ್ ವೆಂಕಟೇಶಕುಮಾರ್ ಅವರ ತತ್ವಪದ ಗಾಯನ, ಗಾವನಿಯರ್ ಥಾರ್ ಲೋಕ್ ಕಲಾಕಾರ್ ತಂಡದ ಸೂಫಿ ಗಾಯನ ಬೆಳದಿಂಗಳಲ್ಲಿ ತಂಪು ನೀಡಿತು.
ಸವಿರುಚಿಯ ತಿನಿಸುಗಳು
ರಂಗಾಯಣ ಪ್ರವೇಶದ್ವಾರದ ಎಡಭಾಗದಲ್ಲಿರುವ ನಿಮ್ಮ ಕಲಾದರ್ಶಿನಿಯ ಜೋಳದ ರೊಟ್ಟಿ, ಪಾನಿಪುರಿ, ಚುರುಮುರಿ, ಸಮೋಸ, ಗೋಬಿ ಮಂಚೂರಿಯಂತಹ ಮಸಾಲೆ ತಿನಿಸುಗಳನ್ನು ಬಾಯಿ ಚಪ್ಪರಿಸುವ ಮಟ್ಟಿಗೆ ಪ್ರೇಕ್ಷಕರು ಸವಿದರು. ಅದರ ಎದುರಿಗಿದ್ದ ವಸ್ತುಪ್ರದರ್ಶನದ ಮಳಿಗೆಗಳಲ್ಲಿ ಕಾಂಡಿಮೆಂಟ್ಸ್ ಮಳಿಗೆಯಲ್ಲೂ ಇಷ್ಟೇ ಪ್ರಮಾಣದ ಜನ ಮುಗಿಬಿದ್ದು ತಿನಿಸುಗಳನ್ನು ಚಪ್ಪರಿಸಿದರು.
ಖಾದಿ ಮಳಿಗೆಗಳಿಗೆ ಭೇಟಿ
ರಂಗಾಯಣದ ಒಳಾವರಣದಲ್ಲಿ ನಿರ್ಮಿಸಿರುವ ಖಾದಿ ಮಳಿಗೆಗಳಿಗೆ ಭೇಟಿ ನೀಡಿದ ರಂಗಾಸಕ್ತರು ಖಾದಿ ವಸ್ತ್ರಗಳನ್ನು ಖರೀದಿಸಿದರು. ಕರಕುಶಲತೆಯಿಂದ ತಯಾರಿಸಿದ ಕಲಾಕೃತಿಗಳು, ಕೀ ಚೀಲಗಳು, ವ್ಯಾಲೆಟ್‌ಗಳನ್ನು ಆರಿಸಿಕೊಳ್ಳುವಲ್ಲಿ ಮಗ್ನರಾಗಿದ್ದರು.
ಮಾಯಾಸೀತಾ ಪ್ರಸಂಗಕ್ಕೆ ಮುತ್ತಿಗೆ
ಭೂಮಿಗೀತದಲ್ಲಿ ನಡೆದ ಮಾಯಾಸೀತಾ ಪ್ರಸಂಗ ನಾಟಕವನ್ನು ನೋಡಲು ರಂಗಾಸಕ್ತರು ಮುತ್ತಿಗೆ ಹಾಕಿದರು. ಕಳೆದೆರಡು ದಿನಗಳ ಹಿಂದೆಯೇ ಟಿಕೆಟ್ ಪೂರ್ತಿ ಸೋಲ್ಡ್‌ಔಟ್ ಆಗಿತ್ತು. ಇಂದು ಒಂದೇ ಪ್ರದರ್ಶನ ಏರ್ಪಡಿಸಿದ್ದ ಈ ನಾಟಕವನ್ನು ವೀಕ್ಷಿಸುವ ಸಲುವಾಗಿ ಜನರು ಸರತಿಯಲ್ಲಿ ನಿಂತು ತಮಗೆ ನಿಗದಿಪಡಿಸಿದ ಆಸನದಲ್ಲಿ ಕುಳಿತು ರಜಾದಿನವನ್ನು ಅತ್ಯಂತ ಖುಷಿಯಿಂದ ಕಳೆದರು. ವನರಂಗದಲ್ಲಿ ನಡೆದ ಬೆಂಗಾಲಿಯ ಊರುಭಂಗಂ ನಾಟಕಕ್ಕೂ ಸಹ ಉತ್ತಮ ಪ್ರತಿಕ್ರಿಯೆ ಲಭಿಸಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement