ಕಾಂಗ್ರೆಸ್ಗೆ ಹಸಿವು ಮುಕ್ತ ರಾಷ್ಟ್ರದ ಕನಸು
ಕ.ಪ್ರ. ವಾರ್ತೆ, ಮೈಸೂರು, ಜ.15
ಬಿಜೆಪಿಗೆ ಕಾಂಗ್ರೆಸ್ ಮುಕ್ತ ರಾಷ್ಟ್ರ ನಿರ್ಮಾಣದ ಗುರಿ ಇರಬಹುದು. ಆದರೆ ಕಾಂಗ್ರೆಸ್ಗೆ ಹಸಿವು ಮುಕ್ತ ಭಾರತ ನಿರ್ಮಾಣ ಮಾಡುವ ಉದ್ದೇಶವಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಜಿಲ್ಲಾ ಯುವ ಕಾಂಗ್ರೆಸ್ ಮಂಗಳವಾರ ರಾತ್ರಿ ಆಯೋಜಿಸಿದ್ದ ಭಾರತ ರಾಷ್ಟ್ರೀಯ ಕಾಂಗ್ರೆಸ್ ಮತ್ತು ಯೂತ್ಸ್ ಆಫ್ ಮೈಸೂರು ಪುಸ್ತಕ ಬಿಡುಗಡೆ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ದೇಶಕ್ಕೆ ಕಾಂಗ್ರೆಸ್ ಕೊಡುಗೆ ಅಪಾರವಾದದ್ದು. ಆದರೆ ಬಿಜೆಪಿಯವರು ಕಾಂಗ್ರೆಸ್ ತೊಲಗಿಸಿ, ಭಾರತ ಉಳಿಸಿ ಎಂಬೆಲ್ಲ ಹೋರಾಟ ನಡೆಸುತ್ತಿದ್ದಾರೆ. ಅವರು ಕಾಂಗ್ರೆಸ್ ಮುಕ್ತ ಭಾರತ ನಿರ್ಮಾಣ ಮಾಡಬೇಕಂತೆ. ಆದರೆ ನಮ್ಮ ಉದ್ದೇಶ ಇರುವುದು ಹಸಿವು ಮುಕ್ತ ರಾಷ್ಟ್ರದ ಕನಸು. 128 ವರ್ಷದ ಇತಿಹಾಸ ಇರುವ ಕಾಂಗ್ರೆಸ್ನ ಬೇರು ರಾಷ್ಟ್ರದ ಮೂಲೆ ಮೂಲೆಯಲ್ಲೂ ಬಿಟ್ಟಿದೆ. ಅಷ್ಟು ಸುಲಭವಾಗಿ ಕಾಂಗ್ರೆಸ್ ಕಿತ್ತೊಗೆಯಲು ಸಾಧ್ಯವಿಲ್ಲ. ಅದು ಕೇವಲ ಬಿಜೆಪಿ ನಾಯಕರ ಭ್ರಮೆ. ಆದರೆ ಮೋದಿ ಮುಂತಾದವರು ಭಾವನಾತ್ಮಕವಾಗಿ ಯುವಕರನ್ನು ಎತ್ತಿಕಟ್ಟಲು ಯತ್ನಿಸುತ್ತಿದ್ದಾರೆ ಎಂದು ಅವರು ಕಿಡಿಕಾರಿದರು.
20ರಿಂದ 25 ಸ್ಥಾನ ಗೆಲವು: ನನಗೆ ಯಾವುದೆ ಅಭದ್ರತೆ ಇಲ್ಲ. ನನಗೆ ಕಾಂಗ್ರೆಸ್ನಲ್ಲಿ ರಕ್ಷಣೆ ಇದೆ. ಬಡವರ ಪರ ಕೆಲಸವನ್ನು ಬಿಜೆಪಿ ಮತ್ತು ಜೆಡಿಎಸ್ ನಾಯಕರಿಗೆ ಸಹಿಸಲು ಸಾಧ್ಯವಾಗುತ್ತಿಲ್ಲ. ಬಿಜೆಪಿಗೆ ಬಿ.ಎಸ್. ಯಡಿಯೂರಪ್ಪ ಮರಳಿ ಬಂದ ಹಿನ್ನೆಲೆಯಲ್ಲಿ ಕಾಂಗ್ರೆಸ್ಗೆ ಮತ್ತಷ್ಟು ಬಲ ಬಂದಿದೆ. ಅಲ್ಲದೆ ಮುಂಬರುವ ಲೋಕಸಭಾ ಚುನಾವಣೆಯಲ್ಲಿ 20 ರಿಂದ 25 ಸ್ಥಾನ ಗೆಲ್ಲುತ್ತೇವೆ ಎಂದರು.
ನರೇಂದ್ರ ಮೋದಿ ಯಾವುದೆ ಕಾರಣಕ್ಕೂ ಪ್ರಧಾನಿ ಆಗಲು ಸಾಧ್ಯವಿಲ್ಲ. ಮೋದಿ ಕೇವಲ ಕೋಮುವಾದಿ ಮಾತ್ರವಲ್ಲ. ಭ್ರಷ್ಟಕೂಡ. ಗೋದ್ರಾ ಹತ್ಯಾಕಾಂಡದಲ್ಲಿ ಅಲ್ಪಸಂಖ್ಯಾತರನ್ನು ಕೊಂದ ಮನುಷ್ಯತ್ವ ಇಲ್ಲದ ಜನ ಅವರು. ದೇವರು ಮತ್ತು ಧರ್ಮದ ಹೆಸರಿನಲ್ಲಿ ಸಮಾಜಕ್ಕೆ ಬೆಂಕಿ ಹಚ್ಚುತ್ತಾರೆ. ಮಾಹಿತಿ ಮತ್ತು ತಂತ್ರಜ್ಞಾನ ಬಳಸಿಕೊಂಡು ಕೋಟ್ಯಂತರ ರು. ವೆಚ್ಚಮಾಡಿ ಪ್ರಚಾರ ಪಡೆದು ಯುವಕರ ದಾರಿ ತಪ್ಪಿಸುತ್ತಿದ್ದಾರೆ. ಈ ಬಗ್ಗೆ ಯುವಕರಲ್ಲಿ ಜಾಗೃತಿ ಮೂಡಿಸಬೇಕು. ಕಾರ್ಪೊರೇಟ್ ಜಗತ್ತು ಮೋದಿ ಪರವಾಗಿದೆ. ಏಕೆಂದರೆ ಮೋದಿಗೆ ಕೇವಲ ಶ್ರೀಮಂತರ ಪರ ಮಾತ್ರ ಒಲವು. ಬಡವರ ಪರ ಕಿಂಚಿತ್ತೂ ಕಾಳಜಿ ಇಲ್ಲ ಎಂದು ಟೀಕಿಸಿದರು.
ಮೋದಿಗೆ ಕೇವಲ ಬೇರೆಯವರನ್ನು ತನ್ನ ಭಾಷಣದ ಮೂಲಕ ಟೀಕಿಸುತ್ತ ತಿರುಗಾಡುವುದಷ್ಟೆ ಗೊತ್ತು. ಆದರೆ ಪ್ರಧಾನಿ ಆದ ಬಳಿಕ ಏನು ಕಾರ್ಯಕ್ರಮ ನೀಡುತ್ತೇನೆ ಎಂಬುದನ್ನು ಎಲ್ಲಿಯೂ ಹೇಳಿಲ್ಲ ಎಂದರು.
ಬಿಜೆಪಿಯವರು ಈಗ ಸ್ವಾಮಿ ವಿವೇಕಾನಂದರನ್ನು ಹಿಡಿದುಕೊಂಡಿದ್ದಾರೆ. ಮೋದಿ ಸರ್ದಾರ್ ವಲ್ಲಭಾಬಾಯ್ ಪಟೇಲರನ್ನು ಹಿಡಿದುಕೊಂಡಿದ್ದಾರೆ. ಗೋಡ್ಸೆ ಪರಂಪರೆಯವರಿಗೂ, ಪಟೇಲರಿಗೂ ಎಲ್ಲಿಯ ಸಂಬಂಧ. ಮಹತ್ಮಗಾಂಧಿ, ಪಟೇಲರ ಹೆಸರು ಹೇಳಲೂ ಇವರಿಗೆ ನೈತಿಕ ಹಕ್ಕಿಲ್ಲ ಎಂದರು.
ಕಾಂಗ್ರೆಸ್ನಲ್ಲಿ ಇರುವ ಸಿದ್ಧಾಂತ ಬಿಜೆಪಿ- ಜೆಡಿಎಸ್ಗೆ ಇಲ್ಲ. ಯುವಕರು ರಾಜಕೀಯಕ್ಕೆ ಬರಬೇಕು. ಅದರಲ್ಲೂ ಕಾಂಗ್ರೆಸ್ ಸೇರಬೇಕು. ಕಾಂಗ್ರೆಸ್ಗೆ ಮಾತ್ರ ಎಲ್ಲಾ ಜಾತಿ, ಜನಾಂಗದವರನ್ನು ಸಮಾನವಾಗಿ ಕೊಂಡೊಯ್ಯುವ ಸಾಮರ್ಥ್ಯ ಇದೆ ಎಂದು ಹೇಳಿದರು.
ಜಾತಿ ಸಮಾವೇಶ ಏಕೆ ಮಾಡಬಾರದು?
ಜಾತಿ ಗಣತಿ ಮಾಡಲು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ಇಚ್ಛಿಸಿದ್ದರಂತೆ. ಹಾವನೂರು ಆಯೋಗ ವಿರೋಧಿಸಿದ್ದ ದೇವೇಗೌಡರು ಈಗ ಸುಳ್ಳು ಹೇಳುತ್ತಿದ್ದಾರೆ. ಬಂಜಾರ ಸಮಾವೇಶದಲ್ಲಿ ನಿಂತುಕೊಂಡು ಜಾತಿ ಸಮಾವೇಶ ಮಾಡಬಾರದು ಎನ್ನುವ ದೇವೇಗೌಡರು ಬುದ್ಧಿವಂತ ಮುಸಲ್ಮಾನರ ಸಮಾವೇಶ ಮಾಡಿದ್ದು ಮರೆತಂತಿದೆ ಎಂದು ಟೀಕಿಸಿದರು.