ಬಹುರೂಪಿ ನಾಟಕೋತ್ಸವ
ಭೂಮಿಗೀತ: ಶೇಕ್ಸ್ಪಿಯರ್ ಮನೆಗೆ ಬಂದ ನಾಟಕ (ಕನ್ನಡ), ಮಧ್ಯಾಹ್ನ 3.30 ಹಾಗೂ ಸಂಜ 6.30.
ವನರಂಗ: ಹಿಜಡಾ ನಾಟಕ (ಮರಾಠಿ), ಸಂಜೆ 7.
ಶ್ರೀರಂಗ: ಬಹುರೂಪಿ ಚಲನಚಿತ್ರೋತ್ಸವ, ಚಲೋ ಹಮಾರಾ ದೇಸ್ (ಹಿಂದಿ), ಬೆಳಗ್ಗೆ 10. ಕ್ರಾಸಿಂಗ್ ದಿ ಬ್ರಿಡ್ಜ್- ದಿ ಸೌಂಡ್ ಆಫ್ ಇಸ್ತಾಂಬುಲ್ (ಟರ್ಕಿ), ಮಧ್ಯಾಹ್ನ 12. ಕ್ರೇಜಿ ಸ್ಟ್ರೇಂಜರ್ (ರೋಮಾನಿಯಾ), ಮಧ್ಯಾಹ್ನ 3.
ಕಿಂದರಿಜೋಗಿ ಆವರಣ: ಪೂಜಾ ಕುಣಿತ- ಸುಂದರೇಶ್ ತಂಡ, ಒರಿಸ್ಸಾದ ಗೋಟಿಪುವಾ- ಅಭಿನ್ನ ಸುಂದರ್ ಗೊಟಿಪುವಾ ನೃತ್ಯ ಪರಿಷತ್, ಸಂಜೆ 5.
ಸಿಎಂಗೆ ವಿವಿಧ ಸಂಘಟನೆಗಳಿಂದ ಮನವಿ
ಮೈಸೂರು: ವಿವಿಧ ಸಂಘಟನೆಗಳು ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮಂಗಳವಾರ ಮನವಿ ಸಲ್ಲಿಸಿದರು. ಮೈಸೂರಿನಲ್ಲಿಯೇ ಹುಟ್ಟಿ ಬೆಳೆದು ಕಡೆಗೆ ಇಲ್ಲಿಯೇ ಕೊನೆಯುಸಿರೆಳದ ಡಾ.ವಿಷ್ಣುವರ್ಧನ್ ಅವರ ಪುತ್ಥಳಿಯನ್ನು ಸಾಂಸ್ಕೃತಿಕ ನಗರ ಮೈಸೂರಿನಲ್ಲಿ ಸ್ಥಾಪಿಸಬೇಕು ಎಂದು ಮೈಸೂರು ನಗರ ಮತ್ತು ಜಿಲ್ಲಾ ವಿಷ್ಣುವರ್ಧನ್ ಅಭಿಮಾನಿಗಳ ಒಕ್ಕೂಟದ ಅಧ್ಯಕ್ಷ ಎಂ.ಡಿ. ಪಾರ್ಥಸಾರಥಿ ಮನವಿ ಸಲ್ಲಿಸಿದರು. ಅರಮನೆ ಮುಂಭಾಗ ಇರುವ ಡಾ.ವಿಷ್ಣುವರ್ಧನ್ ಉದ್ಯಾನದಲ್ಲಿ ಈ ಮೇರುನಟನ ಪುತ್ಥಳಿ ಸ್ಥಾಪಿಸುವಂತೆ ಮಹಾನಗರ ಪಾಲಿಕೆ ಹಾಗೂ ಜಿಲ್ಲಾಡಳಿತಕ್ಕೆ ಸೂಚನೆ ನೀಡಬೇಕು ಎಂದು ಅವರು ವಿನಂತಿಸಿದರು. ಕುಂಚಿಟಿಗರ ಜಾತಿಯನ್ನು ಹಿಂದುಳಿದ ವರ್ಗಕ್ಕೆ ಸೇರಿಸುವಂತೆ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡುವಂತೆ ಮನವಿ ಸಲ್ಲಿಸಿದರು. ದಿನಗೂಲಿ ನೌಕರರ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ಸರ್ಕಾರಿ ದಿನಗೂಲಿ ನೌಕರರ ಸಂಘ ಹಾಗೂ ಅರಣ್ಯ ಇಲಾಖೆ ಪರಿಶಿಷ್ಟ ಜಾತಿ, ಪಂಗಡ ವರ್ಗಗಳ ದಿನಗೂಲಿ ನೌಕರರ ಸಂಘದ ಮುಖಂಡರು ಮನವಿ ಸಲ್ಲಿಸಿದರು.
'ಸಿಎಫ್ಟಿಆರ್ಐನಲ್ಲಿ ಕನ್ನಡಕ್ಕೆ ಆದ್ಯತೆ'
ಮೈಸೂರು: ಸಿಎಫ್ಟಿಆರ್ಐನಲ್ಲಿ ಕನ್ನಡ ಅನುಷ್ಠಾನದ ವಿವಿಧ ಕಾರ್ಯಕ್ರಮ ಹಮ್ಮಿಕೊಂಡಿರುವುದಾಗಿ ಸಂಸ್ಥೆ ನಿರ್ದೇಶಕರು ನೀಡಿದ ಲಿಖಿತ ಭರವಸೆ ಹಿನ್ನೆಲೆಯಲ್ಲಿ ಕನ್ನಡ ಕ್ರಿಯಾ ಸಮಿತಿ ಕೈಗೊಂಡಿದ್ದ ಹೋರಾಟವನ್ನು ಕೈ ಬಿಟ್ಟಿದೆ. ಬುಧವಾರ ಸಂಸ್ಥೆ ನಿರ್ದೇಶಕ ರಾಮ್ ರಾಜಶೇಖರನ್ ಅವರು ಕರೆದಿದ್ದ ಸಭೆಯಲ್ಲಿ ಈ ಬಗ್ಗೆ ಚರ್ಚಿಸಲಾಯಿತು. ಈ ವೇಳೆ ಸಿಎಫ್ಟಿಆರ್ಐ ನಿರ್ದೇಶಕ ರಾಮ್ ರಾಜಶೇಖರನ್ ಅವರು ಸಂವಿಧಾನಾತ್ಮಕವಾದ ತ್ರಿಭಾಷಾ ಸೂತ್ರ ಜಾರಿಯಲ್ಲಿದೆ. ಸಂಸ್ಥೆಯ ಎಲ್ಲಾ ನಾಮಫಲಕಗಳಲ್ಲಿ ಕನ್ನಡಕ್ಕೆ ಆದ್ಯ ಸ್ಥಾನ ನೀಡಲಾಗುವುದು, ನೇಮಕಾತಿಯಲ್ಲಿ ಕನ್ನಡಿಗರಿಗೆ ಆದ್ಯತೆ, ಸಂಸ್ಥೆಯ ತಂತ್ರಜ್ಞಾನ ಮತ್ತು ಆಹಾರ ವಿಜ್ಞಾನ ಕನ್ನಡದಲ್ಲಿ ಮಾಸ, ತ್ರೈಮಾಸಿಕ ಪ್ರಕಟಣೆ, ಸಂಸ್ಥೆಯಲ್ಲಿ ಹಿಂದಿಗೆ ಸಮಾನಾಂತರವಾಗಿ ಕನ್ನಡಕ್ಕೂ ಸ್ಥಾನ ನೀಡಲಾಗಿದೆ ಎಂದು ತಿಳಿಸಿದ್ದಾರೆ. ಸಭೆಯಲ್ಲಿ ಕ್ರಿಯಾ ಸಮಿತಿ ಉಪಾಧ್ಯಕ್ಷ ಮೀರಾ ನಾಯಕ್, ಎಂ.ಬಿ. ವಿಶ್ವನಾಥ್, ಕಾರ್ಯದರ್ಶಿ ಸ.ರ. ಸುದರ್ಶನ್ ಹಾಗೂ ಸಂಸ್ಕೃತಿ ಸುಬ್ರಹ್ಮಣ್ಯಂ ಇದ್ದರು.
ಜಿ.ಎಸ್. ಶಿವರುದ್ರಪ್ಪಗೆ ಕಾವ್ಯನಮನ
ಮೈಸೂರು: ಸಂವಹನ ಟ್ರಸ್ಟ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಮಂಗಳವಾರ ನಗರದ ರಾಜೇಂದ್ರ ಭವನದಲ್ಲಿ ಇತ್ತೀಚೆಗೆ ನಿಧನರಾದ ರಾಷ್ಟ್ರಕವಿ ಡಾ.ಜಿ.ಎಸ್. ಶಿವರುದ್ರಪ್ಪ ಅವರಿಗೆ ಕಾವ್ಯನಮನ ಸಲ್ಲಿಸಲಾಯಿತು. ಕಾರ್ಯಕ್ರಮ ಉದ್ಘಾಟಿಸಿದ ಹಿರಿಯ ಸಾಹಿತಿ ಡಾ.ಪ್ರಭುಶಂಕರ ಮಾತನಾಡಿ, ಶಿವರುದ್ರಪ್ಪ ಅವರಿಗೆ ಎಲ್ಲರನ್ನು ತನ್ನತ್ತ ಸೆಳೆಯುವ ಶಕ್ತಿ ಇತ್ತು. ಅವರ ಅಂತ್ಯಸಂಸ್ಕಾರದಂದು ಸೇರಿದ್ದ ಜನರನ್ನು ನೋಡಿ ಅವರಿಗಿದ್ದ ಶಕ್ತಿ ತಿಳಿಯಿತು. ಅವರು ಮಂತ್ರಿಯಾಗಿರಲಿಲ್ಲ, ಸಿನೆಮಾ ನಟ ಆಗಿರಲಿಲ್ಲ. ಆದರೆ, ಕಾವ್ಯಗಳಿಂದ ಜನರ ಮನಸ್ಸನ್ನು ಗೆದ್ದಿದ್ದು ಅಂದು ವೇದ್ಯವಾಯಿತು. ನಾನು ಮತ್ತು ಜಿಎಸ್ಎಸ್ ಕುವೆಂಪು ಅವರ ನೇರ ಸಂಶೋಧನಾ ವಿದ್ಯಾರ್ಥಿಗಳಾಗಿದ್ದವು. ಅಂದು ಕುವೆಂಪು ನಮಗೆ ಇಂಗ್ಲಿಷ್ನಲ್ಲಿದ್ದ ರಾಮಕೃಷ್ಣ ವಚನ ಅನುವಾದ ಮಾಡುವಂತೆ ನೀಡಿದರು. ನಾನು ಗದ್ಯಾನುವಾದ ಮಾಡಿದೆ. ಜಿಎಸ್ಎಸ್ ಪದ್ಯಾನುವಾದ ಮಾಡಿದರು. ಅವರ ಪದ್ಯಗಳು ಇಂದಿಗೂ ಶ್ರೇಷ್ಠತೆ ಉಳಿಸಿಕೊಂಡಿವೆ ಎಂದು ಸ್ಮರಿಸಿದರು.
ಮಕ್ಕಳ ಮೇಲೆ ಒತ್ತಡ ಬೇಡ: ಹಿರಣ್ಣಯ್ಯ
ಮೈಸೂರು: ಪೋಷಕರು ಮಕ್ಕಳ ಮೇಲೆ ಹೆಚ್ಚು ಒತ್ತಡ ಹೇರಬಾರದು ಎಂದು ನಾಟಕಕಾರ ಮಾಸ್ಟರ್ ಹಿರಣ್ಣಯ್ಯ ಹೇಳಿದರು.
ಕನಕದಾಸನಗರದ ಸುಪ್ರೀಂ ಪಬ್ಲಿಕ್ ಶಾಲೆಯ ವಾರ್ಷಿಕೋತ್ಸವ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು. ಬಳಿಕ ಅವರನ್ನು ಸನ್ಮಾನಿಸಲಾಯಿತು.
ಶಿವಮೊಗ್ಗದ ಮಲೆನಾಡು ಅಭಿವೃದ್ಧಿ ಮಂಡಳಿ ಮಾಜಿ ಅಧ್ಯಕ್ಷ ಪದ್ಮನಾಭ ಭಟ್, ರಣಜಿ ಮಾಜಿ ಆಟಗಾರ ವಿಜಯ್ಪ್ರಕಾಶ್ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಸಂಸ್ಥೆಯ ಅಧ್ಯಕ್ಷ ಎಂ.ಎಲ್.ರವೀಂದ್ರಸ್ವಾಮಿ ಅಧ್ಯಕ್ಷತೆ ವಹಿಸಿದ್ದರು. ಸಂಸ್ಥೆ ಕಾರ್ಯದರ್ಶಿ ಮಂಜುಳ ವೀರಭದ್ರಸ್ವಾಮಿ, ಟ್ರಸ್ಟಿ ಪರಮೇಶ್ ಹಾಗೂ ಶಾಲೆಯ ಪ್ರಾಂಶುಪಾಲ ಎಲ್. ಜಗದೀಶ್ ಇದ್ದರು. ಶಿಕ್ಷಕಿ ಡಿ. ಮಮತ ಕಾರ್ಯಕ್ರಮ ನಿರೂಪಿಸಿದರು. ಸರಿತಾ ವಂದಿಸಿದರು.
ಲಾರಿ ಮಾಲೀಕರ ಪ್ರತಿಭಟನೆ
ಹುಣಸೂರು: ಕಳೆದ ಮೂರು ದಿನದಿಂದ ವಿವಿಧ ಬೇಡಿಕೆ ಈಡೇರಿಕೆಗಾಗಿ ತಾಲೂಕು ಮರಳು ಲಾರಿ ಮಾಲೀಕರ ಸಂಘವು ಸಾಮಗ್ರಿ ಸಾಗಾಟ ಸ್ಥಗಿತಗೊಳಿಸಿ ತಾ. ಕಚೇರಿ ಎದುರು ಲಾರಿ ನಿಲ್ಲಿಸಿ ಅನಿಧಿ ರ್ಷ್ಟಾವಧಿ ಮುಷ್ಕರ ನಡೆಸುತ್ತಿದ್ದಾರೆ.
ಮುಷ್ಕರದಲ್ಲಿ ಸಂಘದ ಅಧ್ಯಕ್ಷ ಬಿ.ಆರ್. ವಿಶ್ವನಾಥ್ ಪದಾಧಿಕಾರಿಗಳಾದ ಚಾಂದ್ ಬೈ, ಚಂದ್ರು, ವೆಂಕಟೇಶ್, ಯೋಗಾನಂದ್, ವೆಂಕಟೇಶ್, ಗೋವಿಂದೇಗೌಡ ಸೇರಿದಂತೆ ನೂರಕ್ಕೂ ಹೆಚ್ಚು ಮಂದಿ ಲಾರಿ ಮಾಲೀಕರು ಭಾಗವಹಿಸಿದ್ದಾರೆ. ರಾತ್ರಿ ವೇಳೆ ಅಕ್ರಮವಾಗಿ ಮರಳು ಸಾಗಾಟ ಮಾಡುವವರು ಮತ್ತು ಅವರೊಂದಿಗೆ ಕೆಲ ಅಧಿಕಾರಿಗಳು ಶಾಮೀಲಾಗಿದ್ದು, ಅಂತಹವರ ಮಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡಬೇಕು ಲಕ್ಷ್ಮಣತೀರ್ಥ ನದಿಯಲ್ಲಿ ಅಕ್ರಮ ಮರಳು ಗಣಿಗಾರಿಕೆ ತಡೆಗಟ್ಟಬೇಕು. ಅಕ್ರಮವಾಗಿ ತೆಗೆಯುವವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹಾಕಬೇಕು. ಅರಣ್ಯ ಸೂಕ್ಷ್ಮ ಪ್ರದೇಶವೆಂಬುದನ್ನು ಹಿಂತೆಗೆದು ಹನಗೋಡು ಅಣೆಕಟ್ಟು ಬಳಿಯಿಂದ ಬಿಲ್ಲೇನ ಹೊಸಳ್ಳಿವರೆಗೆ ಮರಳು ಜಾಡುಗಳನ್ನು ಹರಾಜು ಹಾಕಬೇಕು ಎಂದು ಒತ್ತಾಯಿಸಿದರು.