ಸರಗೂರಲ್ಲಿ ವಿಜ್ಞಾನ ಪಾರ್ಕ್ ನಿರ್ಮಾಣ
ಕ.ಪ್ರ.ವಾರ್ತೆ , ಹುಣಸೂರು , ಜ.15
ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯಿಂದ ವಿವೇಕ ಸ್ಕೂಲ್ ಆಫ್ ಎಕ್ಸ್‌ಲೆನ್ಸ್ ಶಾಲೆ ಆವರಣದಲ್ಲಿ 30 ಲಕ್ಷ ಖರ್ಚು ಮಾಡಿ ವಿಜ್ಞಾನ ಪಾರ್ಕ್ ನಿರ್ಮಿಸಲಾಗಿದೆ ಎಂದು ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ನಿರ್ದೇಶಕ ಡಾ.ಎಚ್. ಹೊನ್ನೆಗೌಡ ಹೇಳಿದರು. ಇಲ್ಲಿನ ವಿವೇಕಾನಂದ ಯೂತ್ ಮೂವ್‌ಮೆಂಟ್‌ನ ವಿವೇಕ ಸ್ಕೂಲ್ ಆಫ್ ಎಕ್ಸ್‌ಲೆನ್ಸ್ ಶಾಲೆಯಲ್ಲಿ ವಿವೇಕ ವೈಭವ 12ನೇ ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ವಿಜ್ಞಾನ ಮಾದರಿ ಉದ್ಯಾನ ಉದ್ಘಾಟಿಸಿ ಅವರು ಮಾತನಾಡಿದರು.
ರಾಜ್ಯದ ಹಿಂದುಳಿದ ವರ್ಗಗಳ ಅಭಿವೃದ್ಧಿ ಯೋಜನೆಯಲ್ಲಿ ರಾಜ್ಯದ ಹಿಂದುಳಿದ ತಾಲೂಕುಗಳಲ್ಲಿ ಹಾಗೂ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ವಿಶೇಷ ಅಭಿವೃದ್ಧಿ ಯೋಜನೆಯಲ್ಲಿ ವಿಜ್ಞಾನ ಪಾರ್ಕ್ ಮಾಡಲಾಗಿದೆ. ಮೂಢನಂಬಿಕೆ ಬಗ್ಗೆ ಜಾಗೃತಿ ಮೂಡಿಸಲು ಈ ಪಾರ್ಕ್ ಸಹಕಾರಿಯಾಗಿದೆ ಎಂದು ತಿಳಿಸಿದರು. ಎಸ್ಪಿ ಅಭಿನವ ಖರೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಗ್ರಾಮಾಂತರ ಪ್ರದೇಶದಲ್ಲಿ ವಿಜ್ಞಾನಕ್ಕೆ ಸಂಬಂಧಿಸಿದಂತೆ ಪಾರ್ಕ್ ನಿರ್ಮಾಣ ಮಾಡಿರುವುದು ಮಕ್ಕಳ ಕಲಿಕೆಗೆ ಪೂರಕವಾಗಿದೆ. ಮೈಸೂರಿನ ಪೊಲೀಸ್ ಪಬ್ಲಿಕ್ ಶಾಲೆಯ ಮಕ್ಕಳನ್ನು ಇಲ್ಲಿನ ವಿಜ್ಞಾನ ಮಾದರಿಯ ಪಾರ್ಕ್ ವೀಕ್ಷಣೆಗೆ ಕರೆದುಕೊಂಡು ಬರುತ್ತೇವೆ ಎಂದು ಹೇಳಿದರು. ಮಕ್ಕಳ ಕಲಿಕೆಗೆ ಸರಗೂರು ಉತ್ತಮವಾಗಿದೆ. ಆದರೆ ನಮ್ಮ ಇಲಾಖೆಯ ಸಿಬ್ಬಂದಿ ಇಲ್ಲಿಗೆ ಬರುತ್ತಿಲ್ಲ ಎಂದು ವಿಷಾದಿಸಿದರು. ಮೈಸೂರು ಶ್ರೀ ರಾಮಕೃಷ್ಣ ಆಶ್ರಮದ ಸ್ವಾಮಿ ಪರಾಹಿತಾನಂದಜೀ, ಡಯಟ್ ಪ್ರಾಂಶುಪಾಲರು ಬಿ.ಕೆ. ಬಸವರಾಜ್, ವಿವೇಕಾನಂದ ಯೂತ್ ಮೂವ್‌ಮೆಂಟ್‌ನ ಮುಖ್ಯ ಕಾರ್ಯನಿರ್ವಹಣ ಅಧಿಕಾರಿ ಡಾ.ಎಂ.ಎ. ಬಾಲಸುಬ್ರಹ್ಮಣ್ಯ, ವಿವೇಕ ಸ್ಕೂಲ್ ಆಫ್ ಎಕ್ಸ್‌ಲೆನ್ಸ್ ಪ್ರಾಂಶುಪಾಲ ಸುಖೇಶ್ ಸೆರಿಗಾರ್ ಇದ್ದರು.
2012-13ನೇ ಸಾಲಿನಲ್ಲಿ 10ನೇ ತರಗತಿಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿ ಆರ್. ಅಭಿಷೇಕ್, ಎಚ್.ಪಿ. ಚಂದನ್, ಕೆ. ಪ್ರಕೃತಿ ಅವರನ್ನು ಸನ್ಮಾನಿಸಲಾಯಿತು. ಶೈಕ್ಷಣಿಕ ವರ್ಷದಲ್ಲಿ ವ್ಯಾಸಂಗ ಮಾಡುತ್ತಿರುವ ಒಂದರಿಂದ 10ನೇ ತರಗತಿವರೆಗೆ ಅತಿ ಹೆಚ್ಚು ಅಂಕ ಪಡೆದ ಮಕ್ಕಳನ್ನು ಅಭಿನಂದಿಸಲಾಯಿತು. ಶಾಲಾ ವಿದ್ಯಾರ್ಥಿಗಳು ಹಲವು ಜನಪದ ನೃತ್ಯಗಳು ಸೇರಿದಂತೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು.