ಸಹಕಾರ ಕ್ಷೇತ್ರದಿಂದ ಅಸಮಾನತೆ ನಿವಾರಣೆ
ಕ.ಪ್ರ.ವಾರ್ತೆ , ಮೈಸೂರು , ಜ. 15
ಸಮಾಜದ ಅಸಮಾನತೆ ನಿವಾರಿಸುವಲ್ಲಿ ಸಹಕಾರ ಕ್ಷೇತ್ರ ಸಹಕಾರಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಜಗನ್ಮೋಹನ ಅರಮನೆಯಲ್ಲಿ ಮೈಸೂರು ಮರ್ಚೆಂಟ್ಸ್ ಕೋ ಆಪರೇಟಿವ್ ಬ್ಯಾಂಕ್ ಮಂಗಳವಾರ ಏರ್ಪಡಿಸಿದ್ದ ಎಟಿಎಂ ಹಾಗೂ ಕೋರ್ ಬ್ಯಾಂಕಿಂಗ್ ವ್ಯವಸ್ಥೆ ಉದ್ಘಾಟನಾ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.
ಬದುಕಿನ ಎಲ್ಲಾ ಕ್ಷೇತ್ರಗಳಿಗೂ ಸಹಕಾರ ಬ್ಯಾಂಕ್ ಪೂರಕ. ದೇಶದಲ್ಲಿ ಅನೇಕ ವರ್ಷಗಳಿಂದ ಸಹಕಾರ ಸಂಘಗಳು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿವೆ. ಸಾಮಾಜಿಕವಾಗಿ ಅಶಕ್ತರಾಗಿರುವ ವರ್ಗಗಳಿಗೆ ಆರ್ಥಿಕ ನೆರವು ನೀಡಿ ಸಬಲರನ್ನಾಗಿಸುವಲ್ಲಿ ಇದು ಸಹಕಾರಿಯಾಗಿದ್ದು, ಇಂತಹ ಕಾರ್ಯದ ಮೂಲಕ ಸಮಾಜದಲ್ಲಿನ ಅಸಮಾನತೆ ತೊಡೆದು ಹಾಕಲು ಇದು ಪ್ರಮುಖ ಪಾತ್ರ ವಹಿಸಿದೆ ಎಂದರು.
ಸಹಕಾರ ಕ್ಷೇತ್ರವು ರಾಜಕಾರಣ ಹಾಗೂ ಹಸ್ತಕ್ಷೇಪ ಇಲ್ಲದಿದ್ದರೆ ಚೆನ್ನಾಗಿ ನಡೆಯಲಿದೆ. ಮರ್ಚೆಂಟ್ ಬ್ಯಾಂಕ್ ಅನೇಕ ವರ್ಷಗಳಿಂದ ಚೆನ್ನಾಗಿ ನಡೆಯುತ್ತಿದ್ದು, ಶೇ.6ರ ಬಡ್ಡಿ ದರದಲ್ಲಿ ವಿದ್ಯಾಭ್ಯಾಸಕ್ಕೆ ಸಾಲ ಒದಗಿಸುತ್ತಿರುವುದು ಉತ್ತಮ ಕಾರ್ಯ ಎಂದು ತಿಳಿಸಿದರು.
ಮೀಸಲಾತಿಗೆ ತಿದ್ದುಪಡಿ: ಸಹಕಾರ ಸಚಿವ ಮಹದೇವ ಪ್ರಸಾದ್ ಮಾತನಾಡಿ, ರೈತರಿಗೆ ಕಡಿಮ ಬಡ್ಡಿದರಲ್ಲಿ ಸಾಲ ಒದಗಿಸುತ್ತಿರುವ ಸರ್ಕಾರ, ಸಹಕಾರ ಕ್ಷೇತ್ರದಲ್ಲಿ ಹಿಂದುಳಿದ ವರ್ಗಕ್ಕೆ ಮೀಸಲಾತಿ ಹೆಚ್ಚಿಸಲು ತಿದ್ದುಪಡಿಗೆ ಮುಂದಾಗಿದೆ. ಹೌಸಿಂಗ್ ಸೊಸೈಟಿಗಳ ಸುಧಾರಣೆಗೂ ಸಹ ಅಗತ್ಯ ಕ್ರಮ ವಹಿಸಲಾಗಿದೆ ಎಂದರು.
ಬ್ಯಾಂಕ್ ಸದಸ್ಯರಾದ ಸಿದ್ದರಾಮಯ್ಯ ಹಾಗೂ ಎಚ್.ಎಸ್. ಮಹದೇವ ಪ್ರಸಾದ್ ಅವರನ್ನು ಸನ್ಮಾನಿಸಲಾಯಿತು. ಇದಕ್ಕೂ ಮುನ್ನ ಸಿದ್ದರಾಮಯ್ಯ ಬ್ಯಾಂಕ್‌ನ ಎಟಿಎಂ ಕೇಂದ್ರವನ್ನೂ, ಮಹದೇವ ಪ್ರಸಾದ್ ಕೋರ್‌ಬ್ಯಾಂಕಿಂಗ್ ವ್ಯವಸ್ಥೆ ಚಾಲನೆಗೊಳಿಸಿದರು. ಲೋಕೋಪಯೋಗಿ ಸಚಿವ ಡಾ.ಎಚ್.ಸಿ. ಮಹದೇವಪ್ಪ, ಶಾಸಕ ವಾಸು ಮುಖ್ಯ ಅತಿಥಿಗಳಾಗಿದ್ದರು.