ಅಕ್ರಮ ಚಟುವಟಿಕೆ ತಾಣ ಆರ್.ಟಿ.ನಗರ ರಸ್ತೆಗಳು
ಮೈಸೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಎಂಡಿಎ) ನಿರ್ಮಿಸಿರುವ ನೂತನ ರವೀಂದ್ರನಾಥ ಟಾಗೂರ್ ವಸತಿ ಬಡಾವಣೆಯು ಕುಡುಕರು, ಪುಂಡರ ಪಾಲಿಗೆ ಸ್ವರ್ಗವಾಗಿದ್ದರೆ, ಅಲ್ಲಿ ವಾಸಿಸುವರಿಗೆ ನರಕವಾಗಿದೆ.
ಏಕೆಂದರೆ ಆ ಬಡಾವಣೆಯಲ್ಲಿ ಇನ್ನೂ ಹೆಚ್ಚಿನ ಮನೆಗಳು ಬಂದಿಲ್ಲ. ಹೀಗಾಗಿ ನಿರ್ಜನ ರಸ್ತೆಗಳಲ್ಲಿ ದುಷ್ಕೃತ್ಯ ಮತ್ತು ದಾಂಧಲೆ ನಡೆಯುತ್ತಿದೆ. ಅಲ್ಲಲ್ಲಿ ಸುಲಿಗೆ ಪ್ರಕರಣಗಳೂ ನಡೆಯುತ್ತಿವೆ. ರಾತ್ರಿಯಾಗುತ್ತಿದ್ದಂತೆ ಶ್ರೀಮಂತ ಯುವಕರು ಐಷಾರಾಮಿ ಕಾರುಗಳಲ್ಲಿ ಮದ್ಯದ ಬಾಟಲುಗಳನ್ನು ತಂದು, ಪಾರ್ಟಿ ನಡೆಸುವುದು, ರಸ್ತೆ ಮಧ್ಯದಲ್ಲಿಯೇ ಖಾಲಿ ಬಾಟಲುಗಳನ್ನು ಚೂರು ಮಾಡಿ ದಾಂಧಲೆ ಎಬ್ಬಿಸುವುದು, ಜೊತೆಯಲ್ಲಿ ಯುವತಿಯರನ್ನೂ ಕರೆತಂದು ಅಕ್ರಮ ಚಟುವಟಿಕೆ ನಡೆಸುತ್ತಿದ್ದಾರೆ. ದುಬಾರಿ ಬೈಕ್ಗಳಲ್ಲಿ ಬರುವ ಯುವಕರು, ಅಪಾಯಕಾರಿ ವೀಲಿಂಗ್ ಸ್ಟ್ಂಟ್ ಮಾಡುತ್ತಿದ್ದಾರೆ. ಈ ಎಲ್ಲದರ ಬಗ್ಗೆ ಹಲವುಬಾರಿ ದೂರಿದ್ದರೂ ರಸ್ತೆಗಳಿಗೆ ದೀಪ ಹಾಕಲು ಎಂಡಿಎ ಮುಂದಾಗಿಲ್ಲ. ಕಾವಲು ನಿಯೋಜಿಸಲು ಪೊಲೀಸ್ ವ್ಯವಸ್ಥೆ ಮುಂದಾಗಿಲ್ಲ. ಹೀಗಾಗಿ ಮೋಜು ಮಸ್ತಿ ಮತ್ತು ದುಷ್ಕೃತ್ಯಕ್ಕೆ ಕಡಿವಾಣವೇ ಇಲ್ಲದಂತಾಗಿದೆ.
ಅಪಾಯಕಾರಿ ವೀಲಿಂಗ್: ವೀಲಿಂಗ್ ಪ್ರಕರಣವೊಂದರಲ್ಲಿ ಈ ಹಿಂದೆ ಅಯತಪ್ಪಿಬಿದ್ದು ಬೈಕ್ ಸವಾರ ಸ್ಥಳದಲ್ಲೇ ಸಾವಿಗೀಡಾಗಿದ್ದ. ಈ ಘಟನೆ ನಂತರ ಹಾವಳಿ ನಿಲ್ಲಬಹುದೆಂದು ಊಹಿಸಲಾಗಿತ್ತಾದರೂ ಇದು ಇನ್ನೂ ಹೆಚ್ಚಾಗಿದೆ. ವ್ಯವಸ್ಥಿತವಾಗಿ ನಿರ್ಮಾಣವಾಗಿರುವ ಈ ಬಡಾವಣೆ, ವಿಶಾಲ ದ್ವಿಪಥ ರಸ್ತೆ ಮತ್ತು ಅಗಲವಾದ ಒಳರಸ್ತೆಗಳನ್ನು ಒಳಗೊಂಡಿದೆ. ಇಲ್ಲಿ ನಿವೇಶನ ಹಂಚಿಕೆ ತೊಡಕಾಗಿರುವ ಹಿನ್ನೆಲೆಯಲ್ಲಿ ಇಡೀ ವ್ಯವಸ್ಥೆ ಪಾಳುಬಿದ್ದಂತೆ ಕಾಣುತ್ತಿದೆ. ರಸ್ತೆಗಳು ವಿಶಾಲವಾಗಿದ್ದು, ನಿರ್ಜನವಾಗಿರುವ ಕಾರಣಕ್ಕೆ ಮತ್ತು ಉತ್ತಮಗಾಳಿ ಮತ್ತು ಬೆಳಕಿನ ಕಾರಣಕ್ಕೆ ಬೆಳಗ್ಗೆ ಮತ್ತು ಸಂಜೆ ಇಲ್ಲಿ ವಾಯು ವಿಹಾರಕ್ಕೆ ಬರುವವರು ಹೆಚ್ಚಿದ್ದಾರೆ. ಜೊತೆಗೆ ಸೈಕಲ್ ತುಳಿಯುವವರು, ಸ್ಕೇಟಿಂಗ್ ತರಬೇತಿ ಪಡೆಯುವವರು ನೀಡುವವರು, ಓಟದ ಅಭ್ಯಾಸ ಮಾಡುವವರು ಈ ರಸ್ತೆ ಉಪಯೋಗ ಪಡೆಯುತ್ತಿದ್ದಾರೆ.
ಹೀಗೆ ಉಪಯೋಗ ಪಡೆದುಕೊಳ್ಳುವವರ ಜೊತೆಗೆ ಇಲ್ಲಿನ ನಿರ್ಜನತೆ ಮತ್ತು ಶಾಂತತೆಯನ್ನು ದುಷ್ಕೃತ್ಯಕ್ಕೆ ಬಳಸಿಕೊಳ್ಳುವವರ ಸಂಖ್ಯೆಯೂ ಹೆಚ್ಚಿದೆ. ಜನ ಓಡಾಡುವುದಿಲ್ಲ ಎಂಬ ಕಾರಣಕ್ಕೆ ಕಾರಿನಲ್ಲಿ ದೂರ ಪ್ರಯಾಣಿಸ ಬಯಸುವ ಪ್ರೇಮಿಗಳು, ಆರ್ಟಿ ನಗರದ ಕೊನೇ ಭಾಗದ ಸಿಮೆಂಟ್ ಕಟ್ಟೆಗಳನ್ನು ತಮ್ಮ ಮಾತುಕತೆಗೆ ಅಡ್ಡ ಮಾಡಿಕೊಂಡ ಉದಾಹರಣೆಗಳಿವೆ. ಇಂತಹ ಪ್ರೇಮಿಗಳನ್ನು ಬೆದರಿಸಿ, ಇವರಿಂದ ಹಣ ವಸೂಲಿ ಮಾಡಲೆಂದೇ, ಕೆಲ ಪುಂಡ ಯುವಕರು ಗುಂಪುಕಟ್ಟಿಕೊಂಡು, ಮುಗಿಬಿದ್ದ ಪ್ರಕರಣಗಳೂ ಇವೆ.
ಅಕ್ರಮ ಚಟುವಟಿಕೆಗೆ ಕಡಿವಾಣ
ಆರ್.ಟಿ. ನಗರ ಬಡಾವಣೆಯಲ್ಲಿ ಅಕ್ರಮ ಚಟುವಟಿಕೆ ನಡೆಯುತ್ತಿದೆ ಎಂಬ ಅಂಶ ತಮ್ಮ ಗಮನಕ್ಕೆ ಬಂದಿದೆ. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದು, ನೂತನ ಬಡಾವಣೆಯಲ್ಲಿ ಗಸ್ತು ಹೆಚ್ಚಿಸುವಂತೆ ಪೊಲೀಸರಿಗೆ ಪತ್ರ ಬರೆಯುವುದಾಗಿ ಎಂಡಿಎ ಆಯುಕ್ತ ಪಾಲಯ್ಯ ತಿಳಿಸಿದ್ದಾರೆ.
ದೂರು ದಾಖಲು
ಆರ್.ಟಿ. ನಗರದಲ್ಲಿ ನೂತನವಾಗಿ ನಿರ್ಮಾಣವಾಗುತ್ತಿರುವ ಖಾಸಗಿ ವಸತಿ ಸಂಕೀರ್ಣದ ಕಚೇರಿ ಮೇಲೆ ಬುಧವಾರ ರಾತ್ರಿ ದುಷ್ಕರ್ಮಿಗಳು ದಾಳಿ ನಡೆಸಿದ್ದಾರೆ. ಕಿಟಕಿ ಗಾಜುಗಳನ್ನು ಪುಡಿ ಮಾಡಿ, ಕಚೇರಿಯಲ್ಲಿದ್ದವರಿಗೆ ಬೆದರಿಕೆ ಹಾಕಿ ಸ್ಥಳದಿಂದ ಪರಾರಿಯಾಗಿದ್ದಾರೆ. ಬಿಲ್ಡರ್ ರವೀಂದ್ರ ರೆಡ್ಡಿ ಅವರು ಜಯಪುರ ಪೊಲೀಸರಿಗೆ ದೂರು ನೀಡಿದ್ದಾರೆ.