ಕ್ರೌರ್ಯ ತೊಲಗದೆ ಸಮಾಜ ಪರಿವರ್ತನೆ ಅಸಾಧ್ಯ
ಮೈಸೂರು: ಸಮಾಜದಲ್ಲಿನ ಕ್ರೌರ್ಯ ಮನೋಭಾವ ತೊಲಗದೆ ಪರಿವರ್ತನೆ ಅಸಾಧ್ಯ ಎಂದು ಜೆಡಿಎಸ್ ನಾಯಕ ಹಾಗೂ ಮಾಜಿ ಸಚಿವ ಪಿ.ಜಿ.ಆರ್. ಸಿಂಧ್ಯಾ ಹೇಳಿದರು.
ಕನ್ನಡ ವೈದ್ಯ ಸಾಹಿತ್ಯ ಪರಿಷತ್ ಹಾಗೂ ಕೌಸ್ತಭ ಕನ್ನಡ ಮಾಸ ಪತ್ರಿಕೆ ಸಂಯುಕ್ತಾಶ್ರಯದಲ್ಲಿ ರೋಟರಿ ಸಭಾಂಗಣದಲ್ಲಿ ಗುರುವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ನಾಗಚಂದ್ರ ರಂಗರೂಪಗೊಳಿಸಿರುವ ಶ್ರೀಕಾಂತರ ಕೀಚಕರು ಕೃತಿ ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.
ಮಹಿಳೆಯರ ಮೇಲೆ ಆಗುತ್ತಿರುವ ದೌರ್ಜನ್ಯ ಹಾಗೂ ಅನ್ಯಾಯ ತಪ್ಪಿಸಲು ದೇಶದಲ್ಲಿ ಮಹತ್ವದ ಕಾನೂನು ಜಾರಿಗೊಳಿಸಲಾಗಿದೆ. ಆದರೂ ವ್ಯವಸ್ಥೆ ಬದಲಾಗಿಲ್ಲ. ಬುಧವಾರ ಸಹ ದೆಹಲಿಯಲ್ಲಿ ಸುಮಾರು 50 ವರ್ಷದ ವಿದೇಶಿ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿರುವುದು ನಾಗರಿಕ ಸಮಾಜ ತಲೆ ತಗ್ಗಿಸುವಂತದ್ದು. ಇಂದಿಗೂ ಸಮಾಜದಲ್ಲಿ ಕ್ರೌರ್ಯ ಮನೋಭಾವ ವಿಜೃಂಭಿಸುತ್ತಿರುವುದಕ್ಕೆ ಸಾಕ್ಷಿ ಎಂದು ವಿಷಾದಿಸಿದರು.
ಸಮಾಜದ ಪರಿಸ್ಥಿತಿ ಇಂದೂ ತೀರಾ ಹದಗೆಟ್ಟಿದ್ದು, ಜೀವನ ಮೌಲ್ಯ ಕುಸಿದಿದೆ. ಅರ್ಹತೆ ಹಾಗೂ ಯೋಗ್ಯತೆ ಇರುವವರಿಗೆ ಪ್ರಶಸ್ತಿಯಾಗಲಿ ಅಥವಾ ಸ್ಥಾನಮಾನವಾಗಲಿ ಸಿಗುತ್ತಿಲ್ಲ. ಜನಸಾಮಾನ್ಯರು ಹಾಗೂ ರಾಜಕಾರಣಿಗಳು ಮಾತ್ರವಲ್ಲದೇ ನ್ಯಾಯಾಂಗದ ವ್ಯಕ್ತಿಗಳು ಅಪವಾದಕ್ಕೆ ಗುರಿಯಾಗುತ್ತಿರುವುದು ದುರಂತ. ಇದರಿಂದ ಹೊರಬರಬೇಕಾದರೆ ಸಮಾಜದ ಪರಿವರ್ತನೆ ಅವಶ್ಯಕ ಎಂದು ಅವರು ತಿಳಿಸಿದರು.
ಕೀಚಕರ ಸಂಖ್ಯೆ ಜಾಸ್ತಿ: ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಸಕ ವಾಸು, ಇಂದಿನ ಪರಿಸ್ಥಿತಿಯಲ್ಲಿ ಕೀಚಕರ ಸಂಖ್ಯೆ ಎಲ್ಲಾ ಕ್ಷೇತ್ರಗಳಲ್ಲಿಯೂ ಜಾಸ್ತಿಯಾಗಿದೆ. ಒಂದು ಕಾಲದಲ್ಲಿ ಭ್ರಷ್ಟರು ಹಾಗೂ ಕೀಚಕರನ್ನು ಗುರುತಿಸಬಹುದಾಗಿತ್ತು. ಆದರೆ ಇಂದು ಗುರುತಿಸಲಾಗದಷ್ಪು ಅವರ ಸಂಖ್ಯೆ ಅಧಿಕವಾಗಿದೆ. ಇಂದು ವಿದ್ಯಾರ್ಥಿಗಳಲ್ಲಿ ಹೋರಾಟ ಮನೋಭಾವ ಕಡಿಮೆಯಾಗಿದೆ ಎಂದರು.
ವಿದ್ಯಾರ್ಥಿ ದಿಸೆಯಲ್ಲಿನ ತಮ್ಮ ಹೋರಾಟಗಳು ಹಾಗೂ ಗುರುಗಳಾಗಿದ್ದ ಪ್ರೊ.ವೆಂಕೋಬರಾವ್ (ಶ್ರೀಕಾಂತ) ಅವರ ಅಧ್ಯಾಪನ ವೃತ್ತಿ ಸ್ಮರಿಸಿದರು. ಕೃತಿ ಕುರಿತು ರಂಗಕರ್ಮಿ ಎನ್. ಧನಂಜಯ ಮಾತನಾಡಿದರು.
ಲೇಖಕ ಶ್ರೀಕಾಂತ ಅವರನ್ನು ಮೆಡಿವೇವ್ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ ಪ್ರಾಂಶುಪಾಲ ಡಾ. ಸಿ. ಶರತ್ಕುಮಾರ್ ಅಭಿನಂದಿಸಿದರು. ಕೌಸ್ತಭ ಕನ್ನಡ ಮಾಸ ಪತ್ರಿಕೆ ಸಂಪಾದಕಿ ರತ್ನ ಹಾಲಪ್ಪಗೌಡ ಮುಖ್ಯ ಅತಿಥಿಯಾಗಿದ್ದರು.
ಬಂಬೂವಾಣಿ ಪಾಕ್ಷಿಕ ಪತ್ರಿಕೆ ಸಂಪಾದಕ ಡಿ. ತಿಮ್ಮಯ್ಯ, ವೈದ್ಯವಾರ್ತಾ ಪ್ರಕಾಶನ ಅಂಬಾ ಅರಸ್, ಲೇಖಕ ನಾಗಚಂದ್ರ ಇದ್ದರು. ಪ್ರೊ.ಕೆರೊಡಿ ಎಂ.ಲೋಲಾಕ್ಷಿ ಸ್ವಾಗತಿಸಿದರು. ಚುಟುಕು ಸಾಹಿತ್ಯ ಪರಿಷತ್ ಸಂಚಾಲಕ ಡಾ.ಎಂ.ಜಿ.ಆರ್ ಅರಸ್ ನಿರೂಪಿಸಿದರು.
ಬೆತ್ತಲೆ ರಾಜ್ಯದಲ್ಲಿ ಬಟ್ಟೆ ಹಾಕಿಕೊಂಡವನೇ ಮೂರ್ಖ ಎಂಬಂತೆ, ಭ್ರಷ್ಟಾಚಾರ ಹಾಗೂ ಅನ್ಯಾಯಗಳ ಬಗ್ಗೆ ಪ್ರಶ್ನಿಸುವ ಮನೋಭಾವ ಕ್ಷೀಣಿಸುತ್ತಿದೆ. ರಾಜಕೀಯ, ನ್ಯಾಯಾಂಗ, ಧಾರ್ಮಿಕ ಮುಂತಾದ ಎಲ್ಲಾ ರಂಗಗಳೂ ಕೀಚಕರಿಂದ ಹೊರತಾಗಿಲ್ಲ. ನೀರು, ಕಾಡು ಹಾಗೂ ಮರಳು ಸೇರಿದಂತೆ ನಿಸರ್ಗ ಸಂಪತ್ತು ಸಹ ಕೀಚಕರ ಪಾಲಾಗುತ್ತಿವೆ.
ವಾಸು, ಶಾಸಕ