ಪಾಳು ಬೀಳುತ್ತಿವೆ ಪಾರಂಪರಿಕ ಕಟ್ಟಡಗಳು
ಮೈಸೂರು: ಮೈಸೂರು ನಗರಕ್ಕೂ ಪಾರಂಪರಿಕತೆಗೂ ಅವಿನಾಭಾವ ಸಂಬಂಧ. ನಗರದ ಹೃದಯ ಭಾಗದಲ್ಲಿ ಎತ್ತ ನೋಡಿದರೂ ಪಾರಂಪರಿಕ ಕಟ್ಟಡಗಳು ಕಾಣಸಿಗುತ್ತವೆ. ಆದರೆ ಸಂರಕ್ಷಣೆ ಮಾತ್ರ ಶೂನ್ಯ.
ಪಾರಂಪರಿಕ ಕಟ್ಟಡಗಳನ್ನು ಸಂರಕ್ಷಿಸಬೇಕಾದ ಪ್ರಾಚ್ಯವಸ್ತು ಸಂಗ್ರಹಾಲಯ ಇಲಾಖೆಯ ಕೈಗಳನ್ನು ನಗರಾಭಿವೃದ್ಧಿ ಕಾಯ್ದೆ ಕಟ್ಟಿ ಹಾಕಿದೆ. ಇನ್ನು ಜವಾಬ್ದಾರಿ ವಹಿಸಿಕೊಳ್ಳಬೇಕಾದ ನಗರ ಪಾಲಿಕೆ ಕಣ್ಣುಮುಚ್ಚಿ ಕುಳಿತಿದೆ. ಉಳಿದ ಹಲವು ಕಟ್ಟಡಗಳು ಖಾಸಗಿ ಸ್ವತ್ತಾಗಿ, ಹಾಳಾಗುತ್ತಿವೆ.
ದುರಾದೃಷ್ಟ ಎಂದರೆ ಇದೆ ಇರಬೇಕು. ನಗರದಲ್ಲಿ ಭವ್ಯ ಮಹಲುಗಳು, ನೂರು ವರ್ಷ ಮೀರಿದ ದೊಡ್ಡ ದೊಡ್ಡ ಕಟ್ಟಡಗಳು ಹತ್ತಾರಿವೆ. ಈ ಪೈಕಿ ಕೆಲವು ನಗರ ಪಾಲಿಕೆಗೆ, ಕೆಲವು ಪೊಲೀಸ್ ಇಲಾಖೆಗೆ, ಮತ್ತೆ ಕೆಲವು ಲೋಕೋಪಯೋಗಿ ಇಲಾಖೆಗೆ ಮತ್ತು ಹಲವು ಖಾಸಗಿ ವ್ಯಕ್ತಿಗಳ ಸ್ವತ್ತಾಗಿದೆ.
ಪೊಲೀಸ್ ಇಲಾಖೆಗೆ ಸೇರಿದ್ದವುಗಳಲ್ಲಿ ಲಷ್ಕರ್ ಪೊಲೀಸ್ ಠಾಣೆ, ಅಶ್ವಾರೋಹಿ ಕಟ್ಟಡ ಪ್ರಮುಖವಾದದ್ದು. ನಗರ ಪಾಲಿಕೆ ವ್ಯಾಪ್ತಿಯಲ್ಲಿ ಲ್ಯಾನ್ಸ್ಡೌನ್ ಕಟ್ಟಡ, ದೇವರಾಜ ಮಾರುಕಟ್ಟೆ ಮುಂತಾದವು ಸೇರಿದೆ. ಲೋಕೋಪಯೋಗಿ ಇಲಾಖೆ ವ್ಯಾಪ್ತಿಯಲ್ಲಿ ಸರ್ಕಾರಿ ಅತಿಥಿಗೃಹಗಳು ಸೇರಿವೆ. ಖಾಸಗಿ ವ್ಯಕ್ತಿಗಳ ವಶದಲ್ಲಿನ ಕಟ್ಟಡಗಳಿಗೆ ಪ್ರಮುಖ ಉದಾಹರಣೆ ನಜರ್ಬಾದ್ನ ಎಫ್.ಕೆ. ಇರಾನಿ ಅವರ ನಿವಾಸ.
ಕೆಲವು ನಿಯಮಗಳೂ ಉಂಟು: ಪಾರಂಪರಿಕ ಕಟ್ಟಡ ಸಂರಕ್ಷಿಸಬೇಕಿದ್ದರೆ ಕೆಲವು ನಿಯಮಗಳಿವೆ. ಯಾವುದೆ ಕಾರಣಕ್ಕೂ ಕಟ್ಟಡವನ್ನು ವಿರೂಪಗೊಳಿಸುವಂತಿಲ್ಲ. ಕಟ್ಟಡದ ಮೂಲ ರೂಪಕ್ಕೆ ಧಕ್ಕೆ ಆಗದ ರೀತಿಯಲ್ಲಿ ಕಟ್ಟಡ ಸಂರಕ್ಷಿಸಬೇಕು. ಆದರೆ ಯಾವ ಇಲಾಖೆಯೂ ಈ ನಿಟ್ಟಿನಲ್ಲಿ ನಿಯಮ ಅನುಸರಿಸಿದಂತೆ ಇಲ್ಲ. ಪೊಲೀಸ್ ಇಲಾಖೆ ಮಾತ್ರ ಅಶ್ವಾರೋಹಿ ದಳವನ್ನು ಪ್ರಾಚ್ಯವಸ್ತು ಇಲಾಖೆಯಿಂದ ಸಂರಕ್ಷಿಸಲಾಗಿದೆ. ಲಷ್ಕರ್ ಠಾಣೆಗೆ ಪಾರಂಪರಿಕ ಇಲಾಖೆ ನಿಯಮದನ್ವಯ ಸುಣ್ಣ ಬಣ್ಣ ಹಚ್ಚಲಾಗಿದೆ.
ಆದರೆ ನಗರ ಪಾಲಿಕೆ ಲ್ಯಾನ್ಸ್ಡೌನ್ ಕಟ್ಟಡ ಸಂರಕ್ಷಣೆಗೆ ಎಳ್ಳಷ್ಟೂ ಕಾಳಜಿ ತೋರಿಸಲಿಲ್ಲ.
ಇದಕ್ಕೆ ಈ ಹಿಂದಿನ ಆಯುಕ್ತರ ನಿರ್ಲಕ್ಷ್ಯವೋ ಅಥವಾ ಆಗಾಗ ಅಧಿಕಾರಿಗಳ ವರ್ಗಾವಣೆಯಿಂದಲೋ ಈ ರೀತಿಯ ತೊಂದರೆ ಆಗುತ್ತಿದೆ. ಲ್ಯಾನ್ಸ್ಡೌನ್ ಕಟ್ಟಡ ಸಂರಕ್ಷಣೆಗೆ ಪ್ರಾಚ್ಯವಸ್ತು ಸಂಗ್ರಹಾಲಯ ಇಲಾಖೆ 75 ಲಕ್ಷ ನೀಡಿಯೂ ಪ್ರಯೋಜನವಾಗದ್ದನ್ನು ಗಮನಿಸಿದರೆ ಪಾಲಿಕೆ ನಿರ್ಲಕ್ಷ್ಯ ಎದ್ದು ಕಾಣುತ್ತದೆ. ಈ ಕೂಡಲೇ ದೇವರಾಜ ಮಾರುಕಟ್ಟೆ ಸಂರಕ್ಷಣೆ ಮಾಡದಿದ್ದರೆ ಮತ್ತಷ್ಟು ಅಪಾಯ ಕಟ್ಟಿಟ್ಟ ಬುತ್ತಿ.
ಇನ್ನು ಲೋಕೋಪಯೋಗಿ ಇಲಾಖೆ ವ್ಯಾಪ್ತಿಗೆ ಒಳಪಟ್ಟ ಸರ್ಕಾರಿ ಅತಿಥಿಗೃಹ. ಇದಕ್ಕೆ ಆಧುನಿಕತೆಯ ಸ್ಪರ್ಶ ನೀಡಲಾಗುತ್ತಿದೆ. ಆದರೆ ಕಟ್ಟಡದ ಮೂಲ ರೂಪಕ್ಕೆ ದೊಡ್ಡ ಪ್ರಮಾಣದಲ್ಲಿ ಧಕ್ಕೆ ಆಗದಿದ್ದರೂ, ಕಟ್ಟಡದಲ್ಲಿ ಬಿಡಿಸಲಾದ ಹೂವಿನ ಚಿತ್ರಗಳು, ಕಲಾಕೃತಿಗಳ ಸಂರಕ್ಷಣೆ ವಿಷಯದಲ್ಲಿ ಇಲಾಖೆ ನಿರ್ಲಕ್ಷ್ಯವಹಿಸಿದೆ. ಅತಿಥಿಗೃಹದ ಮುಂಭಾಗದ ದೊಡ್ಡ ಕಮಾನಿನಲ್ಲಿ ಮತ್ತು ಕಟ್ಟಡದ ಪ್ರಮುಖ ದ್ವಾರದಲ್ಲಿ ಇಂತಹ ದೋಷಗಳು ಕಂಡುಬಂದಿದೆ.
ಇನ್ನು ಖಾಸಗಿ ವ್ಯಕ್ತಿಗಳ ವಶದಲ್ಲಿನ ಸಾಕಷ್ಟು ಪಾರಂಪರಿಕ ಕಟ್ಟಡಗಳು ವಿರೂಪಗೊಳ್ಳುವ ಸಾಧ್ಯತೆ ಇದೆ. ಬಹಳಷ್ಟು ಮಂದಿ ದೊಡ್ಡ ದೊಡ್ಡ ಕಾಂಪೌಂಡ್ ನಿರ್ಮಿಸಿಕೊಂಡು ಹೊರ ಜಗತ್ತಿಗೆ ಮನೆಯೇ ಕಾಣಿಸದಂತೆ ನೋಡಿಕೊಂಡಿದ್ದಾರೆ. ಒಳಗೆ ಏನೇ ವಿರೂಪಗೊಳಿಸಿದರೂ ಯಾರೂ ಪ್ರಶ್ನಿಸಲಾಗದ ಸ್ಥಿತಿ ಇದೆ. ಆದರೂ ಪಾರಂಪರಿಕ ಮಹತ್ವ ತಿಳಿದ ಕೆಲವರು ಮತ್ತು ಸಾರ್ವಜನಿಕರ ವಿರೋಧಕ್ಕೆ ಅಂಜುವವರು ಮಾತ್ರ ಅಂಥಹ ಕಟ್ಟಡಗಳನ್ನು ಹಾಗೆಯೇ ಉಳಿಸಿಕೊಂಡಿದ್ದಾರೆ.
ಒಟ್ಟಾರೆ ನಗರಾಭಿವೃದ್ಧಿ ಕಾಯ್ದೆಗೆ ತಿದ್ದುಪಡಿಯಾಗಿ ಪಾರಂಪರಿಕ ಕಟ್ಟಡಗಳು ಯಾವುದೇ ಇಲಾಖೆ ವ್ಯಾಪ್ತಿಯಲ್ಲಿದ್ದರೂ ಅದರ ಸಂರಕ್ಷಣೆ ಕಾರ್ಯ ಮಾತ್ರ ಪ್ರಾಚ್ಯವಸ್ತು ಇಲಾಖೆಗೆ ಸೇರಿದ್ದು ಎಂಬ ತಿದ್ದುಪಡಿ ಆಗದ ಹೊರತು ಪಾರಂಪರಿಕ ಕಟ್ಟಡಗಳಿಗೆ ಉಳಿಗಾಲವಿಲ್ಲ.
- ಡಿ.ಎನ್. ಮಹೇಂದ್ರ