ಬಹುರೂಪಿಗೆ ಬಹುಪರಾಕ್
ಮೈಸೂರು: ಸಾಂಸ್ಕೃತಿಕ ರಾಜಧಾನಿ ಪಟ್ಟಕ್ಕೆ ಮೈಸೂರು ಅನ್ವರ್ಥ ಎಂಬುದನ್ನು ಬಹುರೂಪದ ಬಹುರೂಪಿ ಸಾಬೀತುಪಡಿಸಿದೆ. ಯಾವ ರಂಗು ತುಂಬಿದ ರಿಯಾಲಿಟಿ ಶೋಗಳಿಗೂ ಮುಗಿಬೀಳದಷ್ಟು ಮಂದಿ ರಂಗಾಯಣದಲ್ಲಿ ಸೇರುತ್ತಿದ್ದಾರೆ.
ಬಹುರೂಪಿ ರಾಷ್ಟ್ರೀಯ ನಾಟಕೋತ್ಸವದ ಮೂರನೆ ದಿನವಾದ ಗುರುವಾರ ಎಲ್ಲೆಡೆ ಜನಜಾತ್ರೆ. ರಂಗಪದ- ಜಾನಪದ ಜಾತ್ರೆಗೆ ಬಂದ ವಾತಾವರಣ. ಕಿಂದರಿಜೋಗಿ ಅಂಗಳದಲ್ಲೆ ಐದು ನೂರಕ್ಕೂ ಹೆಚ್ಚು ಮಂದಿ ಸೇರಿದ್ದರು. ಮೈಸೂರಿನ ಸುಂದರೇಶ್ ಮತ್ತು ತಂಡದ ಪೂಜಾ ಕುಣಿತ, ಒರಿಸ್ಸಾದ ಅಭಿನ್ನ ಸುಂದರ್ ಗೊಟಿಪುವಾ ನೃತ್ಯ ಪರಿಷತ್‌ನ ಕಲಾವಿದರು ಗೊಟಿಪುವಾ, ಗದಗ ಕಲಾವಿದರಿಂದ ಜಾನಪದ ಕಲಾ ಪ್ರದರ್ಶನ ವೀಕ್ಷಿಸಿ, ಚಪ್ಪಾಳೆಯ ಮಳೆಗರೆದರು.
ನಾಡಿನ ಮೂಲೆ ಮೂಲೆಗಳಿಂದ ಆಗಮಿಸಿದ್ದ ಕಲಾವಿದರು ಮತ್ತು ರಂಗಾಸಕ್ತರು ರಂಗಾಯಣದ ಮೂರ್ನಾಲ್ಕು ವೇದಿಕೆಯಲ್ಲಿ ನಡೆಯುತ್ತಿರುವ ಹಲವು ಕಾರ್ಯಕ್ರಮಗಳನ್ನು ಕಣ್ತುಂಬಿಕೊಂಡರು. ಶ್ರೀರಂಗ, ಭೂಮಿಗೀತ, ವನರಂಗ ಮಿನಿ ಥಿಯೇಟರ್‌ನಂತೆ ಕಂಡವು. ಈ ಎಲ್ಲಾ ವೇದಿಕೆಗಳಲ್ಲಿ ಕೂರಲೂ ಜಾಗವಿಲ್ಲದಷ್ಟು ಮಂದಿ ತುಂಬಿದ್ದರು.
ಶ್ರೀರಂಗದಲ್ಲಿ ಗುರುವಾರ ಚಲೋ ಹಮಾರಾ ದೇಸ್ ಎಂಬ ಹಿಂದಿ ಚಲನಚಿತ್ರ, ಕ್ರಾಸಿಂಗ್ ದಿ ಬ್ರಿಡ್ಜ್ ದಿ ಸೌಂಡ್ ಆಫ್ ಇಸ್ತಾಂಬುಲ್ ಎಂಬ ಟರ್ಕಿ ಚಿತ್ರ ಮತ್ತು ಕ್ರೇಜಿ ಸ್ಟ್ರೇಂಜರ್ ಎಂಬ ರುಮೇನಿಯಾದ ಚಲನಚಿತ್ರಗಳು ಪ್ರದರ್ಶನಗೊಂಡವು.
ಪುಣೆಯ ಆಕಾಂಕ್ಷಾ ರಂಗಭೂಮಿ ತಂಡದವರು ಸಗ್ಗೇರ್ ಲೋಧಿ ಅವರು ರಚಿಸಿ, ನಿರ್ದೇಶಿಸಿದ ಹಿಜಡಾ ಎಂಬ ಮರಾಠಿ ನಾಟಕ ಎಲ್ಲರ ಭಾವನೆಗಳನ್ನು ಕೆಣಕಿತು. ಹಿಜಡಾಗಳ ಜೀವನ ಚಿತ್ರಣವನ್ನು ಕಟ್ಟಿಕೊಟ್ಟ ನಾಟಕವನ್ನು ಮಾನವೀಯ ನೆಲೆಗಟ್ಟಿನಲ್ಲಿ ಚಿತ್ರಿಸಲಾಗಿತ್ತು.
ಶೇಕ್ಸ್‌ಪಿಯರ್ ಕೊಲೆಗಾರನೆ: ಮಾಸ್ತರು ವಿದ್ಯಾರ್ಥಿಗಳಿಗೆ ಶೇಕ್ಸ್‌ಪಿಯರ್‌ನ ನಾಟಕಗಳ ಕುರಿತು ಪಾಠ ಮಾಡುತ್ತಿರುತ್ತಾರೆ. ಶೇಕ್ಸ್‌ಪಿಯರ್ ಒಥೆಲೋ, ಕಿಂಗ್‌ಲಿಯರ್, ರೋಮಿಯೋ ಜ್ಯೂಲಿಯಟ್, ಆಮ್ಲೆಟ್, ಮ್ಯಾಕ್‌ಬತ್ ಮುಂತಾದ ನಾಟಕಗಳನ್ನು ಬರೆದಿದ್ದಾನೆ. ಅವನ ನಾಟಕಗಳು ಬಹುತೇಕ ದುರಂತ ನಾಟಕಗಳಾಗಿವೆ. ಆದ್ದರಿಂದ ಅವನನ್ನು ಕೊಲೆಗಾರ ಎಂದು ಕರೆಯಬಹುದು.
ಹೀಗೆ ಭೂಮಿ ಗೀತದಲ್ಲಿ ಶೇಕ್ಸ್‌ಪಿಯರ್ ಮನೆ ಬಂದ ನಾಟಕ ಆರಂಭವಾಗುತ್ತದೆ. ಶೇಕ್ಸ್‌ಪಿಯರ್ ಮನೆಗೆ ಬರುತ್ತಾನೆ. ಮನೆಯಲ್ಲಿ ಆತನಿಗಾಗಿ ಕಾಯುತ್ತ ಕುಳಿತ್ತಿದ್ದ ಹೆಂಡತಿ ಮಲಗಿ ಕನವರಿಸುತ್ತಾಳೆ. ಒಮ್ಮೆಲೆ ಎಚ್ಚರವಾಗುತ್ತದೆ. ಅಷ್ಟರಲ್ಲಿ ಶೇಕ್ಸ್‌ಪಿಯರ್ ಅವಿತುಕೊಳ್ಳುತ್ತಾನೆ. ಆತನ ಪುಸ್ತಕದ ಚೀಲ ನೋಡಿದ ಹೆಂಡತಿ ಆತನ ಎಲ್ಲಾ ಪುಸ್ತಕಗಳನ್ನು ಜೋಡಿಸುತ್ತಾಳೆ.
ಆಗ ನಾಟಕ ಒಂದು ಅಂಕ ಮುಗಿದು ಎರಡನೆ ಅಂಕದಲ್ಲಿ ಒಥೆಲೋ ನಾಟಕದ ಒಂದು ತುಣುಕು ಪ್ರದರ್ಶನಗೊಳ್ಳುತ್ತದೆ. ವೇದಿಕೆಯ ಒಂದು ತುದಿಯಲ್ಲಿ ಶೇಕ್ಸ್‌ಪಿಯರ್ ತನ್ನ ಹೆಂಡತಿ ಅಥವಾ ಪ್ರೇಯಸಿಯೊಂದಿಗೆ ವರ್ತಿಸುವ ಎಲ್ಲಾ ಅಭಿನಯ ಮತ್ತು ಮಾತುಗಳು, ಮತ್ತೊಂದು ತುದಿಯಲ್ಲಿ ನಾಟಕವಾಗಿ ರೂಪುಗೊಳ್ಳುತ್ತದೆ. ಅಂದರೆ ಶೇಕ್ಸ್‌ಪಿಯರ್ ತಾನೆ ನಾಟಕದ ಒಂದು ಪಾತ್ರವಾಗಿ ಕಾಣಿಸಿಕೊಳ್ಳುವಂತೆ ನಾಟಕ ರೂಪಿಸಲಾಗಿದೆ.